ಖಾನಾಪುರ ತಾಲೂಕಿನ ನಂದಗಡದಲ್ಲಿ ಮಂಗಳವಾರ ಎಚ್.ಎಂ.ರೇವಣ್ಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೀರಭೂಮಿ ಮ್ಯೂಸಿಯಂ ಉದ್ಘಾಟಿಸಿದರು. ಡಾ.ಅಶೋಕ ದಳವಾಯಿ, ಬಸವರಾಜ ಹೆಗ್ಗನಾಯಕ ಇತರರಿದ್ದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೀರಭೂಮಿ ಮತ್ತು ವಸ್ತು ಸಂಗ್ರಹಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು.
ಖಾನಾಪುರ ತಾಲೂಕಿನ ನಂದಗಡದಲ್ಲಿ ಮಂಗಳವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೀರಭೂಮಿ ಮ್ಯೂಸಿಯಂ ಸಾರ್ವಜನಿಕ ಪ್ರವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಅವರ ಜೀವನ ಮತ್ತು ಹೋರಾಟದ ಕುರಿತು ಯುವಜನತೆ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಪಡೆಯಬೇಕು. ಸ್ವಾತಂತ್ರ್ಯಕ್ಕಾಗಿ ರಾಯಣ್ಣ ಮಾಡಿದ ತ್ಯಾಗ ಮತ್ತು ಬಲಿದಾನ ಎಲ್ಲರಿಗೂ ಸ್ಫೂರ್ತಿದಾಯಕ ಎಂದರು.
ವಸ್ತು ಸಂಗ್ರಹಾಲಯ ಕೇವಲ ಪ್ರವಾಸಿ ತಾಣವಾಗಿರದೆ, ನಾಡಿನ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟದ ಪರಂಪರೆ ತಿಳಿಸುವ ಜ್ಞಾನಕೇಂದ್ರವಾಗಿ ರೂಪಗೊಳ್ಳಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಭಾಗವಾಗಿ ವೀರಭೂಮಿಗೆ ಭೇಟಿ ನೀಡಲು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಹೊರರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುವಂತೆ ಆಕರ್ಷಿತವಾಗಿ ವೀರಭೂಮಿ ಹಾಗೂ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ಈ ಭಾಗದ ಪ್ರಮುಖ ಐತಿಹಾಸಿಕ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶವಿದೆ ಎಂದರು.
ರಾಜ್ಯ ಬೆಂಬಲ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ ದಳವಾಯಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಅವರ ಹೋರಾಟದ ಚರಿತ್ರೆ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಐತಿಹಾಸಿಕ ಸ್ಮಾರಕಗಳು ಮತ್ತು ವಸ್ತುಗಳನ್ನು ಸಂರಕ್ಷಿಸುವುದರ ಜತೆಗೆ ಅವುಗಳ ಮಹತ್ವವನ್ನೂ ಜನರಿಗೆ ತಲುಪಿಸುವ ಕಾರ್ಯ ನಡೆಯಬೇಕು. ವೀರಭೂಮಿಗೆ ಭೇಟಿ ನೀಡುವ ಎಲ್ಲರೂ ರಾಯಣ್ಣನ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಆಯುಕ್ತ ಎಸ್.ಬಿ.ಕೊಂಗವಾಡ, ಸಾಂಸ್ಕೃತಿಕ ಸಲಹಾ ಸಮಿತಿ ಸದಸ್ಯ ಡಾ.ಎ.ಬಿ.ವಗ್ಗರ, ಉದ್ಯಮಿ ಸುಧೀರ ಗಡ್ಡೆ, ಸೋಮು ಹಿಟ್ಟನಗಿ ಇತರರಿದ್ದರು.