ಬೆಂಗಳೂರು: ಜಗತ್ತಿನಾದ್ಯಂತ ಮಕ್ಕಳಲ್ಲಿ ಗಮನಾವಧಿಯ ಕುಸಿತವಾಗುತ್ತಿದೆ. ಅಲ್ಲದೆ, ತರಗತಿಗಳಲ್ಲಿ ಭಾವನಾತ್ಮಕ ಅಶಾಂತಿ ಮತ್ತು ಹಿಂಸಾಚಾರವೂ ಹೆಚ್ಚುತ್ತಿದೆ ಎಂದು ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗೂರೂಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ದಶಕಗಳ ಹಿಂದೆ ಮಕ್ಕಳ ಗಮನಾವಧಿ 50 ನಿಮಿಷಗಳಿತ್ತು, ಇಂದಿನ ದಿನಗಳಲ್ಲಿ ಅದು 30 ಸೆಕೆಂಡ್‌ಗೆ ಇಳಿದಿದೆ. ಮಕ್ಕಳಲ್ಲಿ ಆಂತರಿಕ ಸ್ಥೈರ್ಯ ಬೆಳೆಸುವ ಅಗತ್ಯತೆ ಇದೆ. ಶಿಕ್ಷಣವೆಂದರೆ ಮಕ್ಕಳಲ್ಲಿ ಮಾಹಿತಿ ತುಂಬುವುದಲ್ಲ. ಮಕ್ಕಳ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸದಿದ್ದರೆ ಶಿಕ್ಷಣವೂ ಅಪೂರ್ಣವಾಗಿ ಉಳಿಯಲಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಬೌದ್ಧಿಕ ಜಾಗೃತಿಯವರೆಗೆ ಶಿಕ್ಷಕರು ದೊಡ್ಡ ಕ್ರಾಂತಿಯನ್ನು ಮುನ್ನಡೆಸಿದ್ದರು ಎಂದರು.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾತನಾಡಿ, ಮಕ್ಕಳ ಸಂಪೂರ್ಣ ಬೆಳವಣಿಗೆ, ಸಾರ್ಥಕ ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಕೊಡುಗೆಯನ್ನು ಬಣ್ಣಿಸಿದರು. ಹೊಸ ಕಲಿಕೆ ಸ್ವರೂಪವನ್ನು ರೂಪಿಸುತ್ತಿರುವ ಶಿಕ್ಷಕರು, ಶಿಕ್ಷಕ ತಜ್ಞ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವಿಸಸ್ ಅಧ್ಯಕ್ಷ ಮೋಹನದಾಸ್ ಪೈ, ಸಿಬಿಎಸ್‌ಇ ತರಬೇತಿ ನಿರ್ದೇಶಕ ಮನೋಜ್ ಶ್ರೀವಾಸ್ತವ ಮತ್ತಿತರರಿದ್ದರು.