ಸಾಂದರ್ಭಿಕ ಚಿತ್ರ 
ರಾಜ್ಯ

ಪಡಿತರ ಲೋಪ, ಬಿಪಿಎಲ್ ಕಾರ್ಡ್ ಸಮಸ್ಯೆಗಳಿಗೆ ತಂತಜ್ಞಾನದ ಮದ್ದು: ವಿಜಯವಾಣಿ ಸಂವಾದದಲ್ಲಿ ಸಚಿವ ರಿಜ್ವಾನ್ ಅರ್ಷದ್ ಮಾಹಿತಿ

ಬೆಂಗಳೂರು: 

ಜನರಿಗೆ ಹತ್ತಿರವಾಗಿರುವ ಆಹಾರ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿ ಸುಧಾರಣೆ ತರಲು ನೂತನ ಸಚಿವ ರಿಜ್ವಾನ್ ಅರ್ಷದ್ ಮಾಸ್ಟರ್ ಪ್ಲಾ್ಯನ್ ರೂಪಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಪಡಿತರ ಸೋರಿಕೆ ತಪ್ಪಿಸಿ, ಇಲಾಖೆ ಬಲಪಡಿಸುವ ಶಪಥ ಮಾಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜವಾಬ್ದಾರಿ ಹೊತ್ತಿರುವ ರಿಜ್ವಾನ್ ಅರ್ಷದ್ ವಿಜಯವಾಣಿ ಸಂವಾದದಲ್ಲಿ ಪಾಲ್ಗೊಂಡು ಹಲವು ಮಾಹಿತಿ ಹಂಚಿಕೊಂಡರು. ಆಹಾರ ಇಲಾಖೆಯು ಸಾರ್ವಜನಿಕರಿಗೆ ತುಂಬಾ ಹತ್ತಿರವಿದೆ.

ಜುಲೈ 31ರ ಅಂತ್ಯಕ್ಕೆ 1.24 ಕೋಟಿ ಆದ್ಯತಾ ಪಡಿತರ ಕಾರ್ಡ್ ಮತ್ತು 4.44 ಕೋಟಿ ಫಲಾನುಭವಿಗಳಿದ್ದಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯಗಳನ್ನು ಉಚಿತ

ವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ 

ಒದಗಿಸಲಾಗುತ್ತಿದೆ. ಪ್ರತಿ ಇಲಾಖೆಯಂತೆ ಆಹಾರ ಇಲಾಖೆಯಲ್ಲೂ ಸವಾಲುಗಳಿದ್ದು, ಅವುಗಳಿಗೆ ಪರಿಹಾರ ರೂಪದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.

ಬಿಪಿಎಲ್ ಮರುಸ್ಥಾಪನೆ

ಕೇಂದ್ರ ಸರ್ಕಾರದ ಆದೇಶದಂತೆ ಅನರ್ಹ ಆದ್ಯತಾ ಪಡಿತರ ಕಾರ್ಡ್ ಗುರುತಿಸಿ ಆದ್ಯತೇತರ ಕಾರ್ಡ್​ಗಳಿಗೆ ಪರಿವರ್ತಿಸಲಾಗಿದೆ. ಇದು ತಾತ್ಕಾಲಿಕವಾಗಿದ್ದು, ಅನರ್ಹರಾಗಿರುವ ಚೀಟಿದಾರರು 45 ದಿನಗಳ ಒಳಗೆ ಅಗತ್ಯ ದಾಖಲೆಗಳೊಂದಿಗೆ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರೆ ಪರಿಶೀಲನೆ ನಡೆಸಿ ನಿಯಮಾನುಸಾರ ಅರ್ಹರಿದ್ದಲ್ಲಿ ಬಿಪಿಎಲ್ ಕಾರ್ಡ್ ಮರುಸ್ಥಾಪಿಸಲಾಗುತ್ತದೆ. ಈ ರೀತಿ ಸಲ್ಲಿಸಿದ ಮನವಿಗಳನ್ನು 15 ದಿನದಲ್ಲಿ ಪರಿಶೀಲಿಸಿ ಕ್ರಮವಹಿಸಬೇಕು. 18,802 ಫಲಾನುಭವಿಗಳನ್ನು ಆದ್ಯತಾ ಪಡಿತರ ಚೀಟಿಯನ್ನು ಪುನರ್ ಸ್ಥಾಪಿಸಲಾಗಿದೆ. ಯಾರೊಬ್ಬರು ಭಯಪಡುವ ಅಗತ್ಯ ಇಲ್ಲವೆಂದು ಸಚಿವರು ಭರವಸೆ ನೀಡಿದರು.

ನ್ಯಾಯಬೆಲೆ ಅಂಗಡಿಗೆ ಇ-ಸ್ಪರ್ಶ

ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಿಒಎಸ್, ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಐರಿಸ್ ಸ್ಕಾ್ಯನರ್ ಅಳವಡಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಟೆಂಡರ್ ಕರೆಯಲಾಗಿದೆ. ಪ್ರಥಮ ಹಂತದಲ್ಲಿ ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿ ನಂತರ ರಾಜ್ಯ ವ್ಯಾಪಿ ವಿಸ್ತರಿಸಲು ಕ್ರಮ ವಹಿಸಲಾಗಿದೆ. ನೈಜ ಫಲಾನುಭವಿಗಳಿಗೆ ಆಹಾರಧಾನ್ಯ ತಲುಪಿಸುವ ಉದ್ದೇಶದಿಂದ ಬಯೋಮೆಟ್ರಿಕ್ ವ್ಯವಸ್ಥೆಯಡಿ ಪಡಿತರ ವಿತರಿಸಲಾಗುತ್ತಿದೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದರು.

ಅನರ್ಹರ ಪತ್ತೆಗೆ ಕ್ರಮ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರಡಿ ಕರ್ನಾಟಕದಲ್ಲಿ ಗ್ರಾಮೀಣ ಭಾಗದ ಶೇ.73 ಮತ್ತು ನಗರ ಭಾಗದ ಶೇ.50 ಜನಸಂಖ್ಯೆಯನ್ನು ಆಹಾರ ಭದ್ರತಾ ವ್ಯಾಪ್ತಿಗೆ ಒಳಪಡಿಸಲು ಅವಕಾಶವಿದೆ. ಅಲ್ಲದೆ, ಕೇಂದ್ರ ಸರ್ಕಾರವು ಎನ್​ಎಫ್​ಎಸ್​ಎ ಅಡಿ 4,01,93,000 ಫಲಾನುಭವಿಗಳ ಮಿತಿ ನಿಗದಿಪಡಿಸಿದೆ. ಇದನ್ನು ಬಿಟ್ಟು ರಾಜ್ಯದಲ್ಲಿ ಹೆಚ್ಚುವರಿ 16.11 ಲಕ್ಷ ಬಿಪಿಎಲ್ ಕಾರ್ಡ್ ಇದ್ದು, 42.70 ಲಕ್ಷ ಫಲಾನುಭವಿಗಳು ಇದ್ದಾರೆ. ಆದರಿಂದ ಅರ್ಹರಿಗೆ ಪಡಿತರ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಇರುವ ಬಿಪಿಎಲ್ ಕಾರ್ಡ್​ಗಳಲ್ಲಿ ಅನರ್ಹರನ್ನು ಪತ್ತೆ ಮಾಡಬೇಕಿದೆ. ಆದರಿಂದ ಇ-ಕೆವೈಸಿ ಕಡ್ಡಾಯ ಮಾಡಿದ್ದು, ಅನರ್ಹ ಕಾರ್ಡ್ ರದ್ದುಪಡಿಸಿ ಅರ್ಹರಿಗೆ ವಿತರಿಸಲು ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದರು.



ಗೋದಾಮುಗಳಿಗೆ ಸಿಸಿಟಿವಿ:

ಪ್ರಥಮವಾಗಿ ಎಲ್ಲ ಗೋದಾಮುಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮಕ್ಕೆ ಟೆಂಡರ್ ಕರೆಯಲು ಸೂಚಿಸಲಾಗಿದೆ. ಇಲ್ಲಿಂದ ಆಹಾರ ಪದಾರ್ಥಗಳನ್ನು ಸಾಗಣೆ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಕೇಂದ್ರ ಕಚೇರಿಯಿಂದ ನಿಗಾ ವಹಿಸಲು ಕಮಾಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಈ ಮೂಲಕ ಗೋದಾಮು ಮತ್ತು ಸಾಗಾಣಿಕೆಯಲ್ಲಿ ಆಗುತ್ತಿದ್ದ ಸೋರಿಕೆಯನ್ನು ತಡೆಗಟ್ಟಲು ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.



ಇಂದಿರಾ ಕಿಟ್​ಗೆ ಮರು ಟೆಂಡರ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕಿಟ್​ನಲ್ಲಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಉಪ್ಪು, ಸಕ್ಕರೆ ವಿತರಿಸಲು ಟೆಂಡರ್ ಕರೆಯಲಾಗಿತ್ತು. ಟೆಂಡರ್ ಕರೆದು 8 ತಿಂಗಳು ಆಗಿದ್ದು, ಜಾಗತಿಕ ಮಟ್ಟದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದರಿಂದ ಮರು ಟೆಂಡರ್ ಕರೆಯಲು ನಿರ್ಧಾರಿಸಲಾಗಿದೆ. ಯಾವುದೇ ಕಾರಣಕ್ಕೂ ಇಂದಿರಾ ಕಿಟ್ ವಿತರಣೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಸಚಿವರು ಭರವಸೆ ನೀಡಿದರು.

ಕನಿಷ್ಠ ಕೂಲಿಗಿಂತ ಕಡಿಮೆ ಇದೆ : ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ., ಜಿಎಸ್​ಟಿ, ವಾಹನಗಳ ಆರ್​ಸಿ ಕಾರ್ಡ್, ಪಿಎಂ ಕಿಸಾನ್ ದತ್ತಾಂಶ ಸೇರಿದಂತೆ 14 ಬಗೆಯ ಡೇಟಾವನ್ನು ಕೇಂದ್ರ ಸರ್ಕಾರ ರವಾನೆ ಮಾಡಿದ್ದು, ಈ ಪ್ರಕಾರ ಕರ್ನಾಟಕದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಫಲಾನುಭವಿಗಳು ಇದ್ದಾರೆ. ಆದರೆ, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಿಂತ ಹೆಚ್ಚಿರುವವನ್ನು ಅನರ್ಹ ಮಾಡಬೇಕಾಗಿದೆ. ಇದು ಕನಿಷ್ಠ ಕೂಲಿ ಮಟ್ಟಕ್ಕಿಂತ ಕಡಿಮೆ ಇದ್ದು, ಇದನ್ನು ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಬೇಕಿದೆ. ಆದರಿಂದ ಕೇಂದ್ರ ಸರ್ಕಾರದ ಕೆಲವೊಂದು ಮಾನದಂಡಗಳನ್ನು ರಾಜ್ಯದಲ್ಲಿ ಅಳವಡಿಸಿಕೊಂಡಿಲ್ಲ ಎಂದರು.

1.30 ಲಕ್ಷ ಅರ್ಜಿ ಬಾಕಿ

2023ರ ಜೂ.1ರಿಂದ 2026ರ ಜುಲೈ 31ರ ವರೆಗೆ ಹೊಸದಾಗಿ 3,70,803 ಪಡಿತರ ಚೀಟಿ ವಿತರಿಸಲಾಗಿದೆ. ಆದ್ಯತಾ ಪಡಿತರ ಚೀಟಿಗಾಗಿ 1.30 ಲಕ್ಷ ಅರ್ಜಿಗಳು ಬಂದಿದ್ದು, ಪರಿಶೀಲನೆ ಮತ್ತು ವಿಲೇ ಕಾರ್ಯದಲ್ಲಿ ಪ್ರಗತಿಯಲ್ಲಿ ಇವೆ. ಆದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಪಡಿತರ ಕಾರ್ಡ್ ವಿತರಣೆಗೆ ಅನುಮತಿ ಮತ್ತು ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪರಿಷ್ಕರಣೆಗೆ ಮನವಿ ಮಾಡಲು ನಿರ್ಧಾರ ಮಾಡಲಾಗಿದೆ. ಪ್ರಸ್ತುತ ಇರುವ ಬಿಪಿಎಲ್ ಕಾರ್ಡ್​ನಲ್ಲಿ ಅನರ್ಹರನ್ನು ಪತ್ತೆಹಚ್ಚಿ ಅರ್ಹರಿಗೆ ವಿತರಿಸಲು ಇ-ಕೆವೈಸಿ ಶಿಸ್ತುಬದ್ಧವಾಗಿ ಮಾಡಲಾಗುತ್ತಿದೆ ಎಂದು ರಿಜ್ವಾನ್ ಹೇಳಿದರು.