ಕ್ಯಾಬ್​ನಲ್ಲಿ ಮರೆತು ಹೋದ ಮೊಬೈಲ್ ಗ್ರಾಹಕರಿಗೆ ವಾಪಸ್ ನೀಡಲು ಹಣಕ್ಕಾಗಿ Rapido ಕ್ಯಾಬ್ ಚಾಲಕನ ಬೇಡಿಕೆ 
ರಾಜ್ಯ

ಮೊಬೈಲ್ ವಾಪಸ್ ನೀಡಲು Rapido ಕ್ಯಾಬ್ ಚಾಲಕ ಹಣಕ್ಕೆ ಬೇಡಿಕೆ

ಪೊಲೀಸರ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯ

ಬೆಂಗಳೂರು : ಕಳೆದುಹೋದ ಮೊಬೈಲ್ ಫೋನ್ ಹಿಂದಿರುಗಿಸಲು 3 ಸಾವಿರ ಬೇಡಿಕೆಯಿಟ್ಟ‌ Rapido ಚಾಲಕನಿಗೆ ಚಿಕ್ಕಜಾಲ ಠಾಣೆ ಪೊಲೀಸರು ಎಚ್ಚರಿಕೆ ನೀಡಿ, ಮೊಬೈಲ್ ಮರಳಿ ಸಿಗುವಂತೆ ಮಾಡಿದ್ದಾರೆ. ಪೊಲೀಸರ ಸೌಜನ್ಯ ಮತ್ತು ಪ್ರಕರಣವನ್ನು ಇತ್ಯರ್ಥ ಪಡಿಸಿದ ರೀತಿಗೆ ಹೊರರಾಜ್ಯದ ಯುವಕನೊಬ್ಬ, ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಅನುಭವ ಹಂಚಿಕೊಂಡಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.

ವ್ಯಾಪಾರ ನಿಮಿತ್ತ ಮ್ಯಾನೇಜರ್ ಜತೆಗೆ ಬೆಂಗಳೂರಿಗೆ ಬಂದಿದ್ದ ಯುವಕ, ಕೆಲಸ ಮುಗಿದ ಬಳಿಕ Rapido ಕ್ಯಾಬ್‌ನಲ್ಲಿ ಯಲಹಂಕಕ್ಕೆ ಹೋಗಿದ್ದ. ಮರೆತು ಕ್ಯಾಬ್‌ನಲ್ಲೇ ಮೊಬೈಲ್ ಫೋನ್ ಬಿಟ್ಟು ಹೋಗಿದ್ದು, ಕೂಡಲೇ ನೆನಪಿಸಿಕೊಂಡು ಕ್ಯಾಬ್ ಚಾಲಕನಿಗೆ ಕರೆ ಮಾಡಿದಾಗ, ಮೊದಲು ಮೊಬೈಲ್ ತನ್ನ ಬಳಿ ಇಲ್ಲ ಎಂದು ಬಳಿಕ ಫೋನ್ ಇರುವುದಾಗಿ ಒಪ್ಪಿಕೊಂಡಿದ್ದಾನೆ. ಆನ್‌ಲೈನ್ ಮೂಲಕ ಕಳುಹಿಸುವುದಕ್ಕೂ ಒಪ್ಪದೆ, ನೀವಿರುವಲ್ಲೇ ಬಂದು ಪಡೆಯುವುದಾಗಿ ಹೇಳಿದರೆ ಅದಕ್ಕೂ ಒಪ್ಪದೆ ವಿವಿಧ ಕಾರಣಗಳನ್ನು ನೀಡಿದ್ದಾನೆ. ಕೊನೆಗೆ ಮೊಬೈಲ್ ಹಿಂದಿರುಗಿಸಲು 3 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ನನಗೆ 4 ಸಾವಿರದ ಟ್ರಿಪ್ ರದ್ದಾಗಿ ನಷ್ಟಾವಾಗಿದೆ ಎಂಬುದು ಚಾಲಕನ ವಾದವಾಗಿತ್ತು.

ಪೊಲೀಸರ ಖಡಕ್ ಎಚ್ಚರಿಕೆ

ಮಧ್ಯಾಹ್ನ 1ರಿಂದ ಸಂಜೆ 4 ಗಂಟೆಯವರೆಗೆ ಚಾಲಕನೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗದಿದ್ದಾಗ ಯುವಕ ಚಿಕ್ಕಜಾಲ ಪೊಲೀಸ್ ಠಾಣೆಗೆ ತೆರಳಿ, ಕನ್ನಡ ಬಾರದೆ ಹಿಂದಿಯಲ್ಲೇ ಸಮಸ್ಯೆ ಹೇಳಿಕೊಂಡಿದ್ದಾರೆ. ತಾಳ್ಮೆಯಿಂದ ಸಮಸ್ಯೆ ಆಲಿಸಿದ ಚಿಕ್ಕಜಾಲ ಪೊಲೀಸರು ಚಾಲಕನಿಗೆ ಕರೆ ಮಾಡಿ ಮೊಬೈಲ್ ಠಾಣೆಗೆ ತಂದು ಒಪ್ಪಿಸುವಂತೆ ಸೂಚಿಸಿದ್ದಾರೆ. ಇಲ್ಲವಾದರೆ ವಾಹನ ಜಪ್ತಿ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಎಚ್ಚೆತ್ತ ಚಾಲಕ ಮೊಬೈಲ್ ಹಿಂದಿರುಗಿಸಲು ಒಪ್ಪಿಕೊಂಡಿದ್ದಾನೆ. ಯುವಕರು ಚಾಲಕನಿಗೆ ತೊಂದರೆ ನೀಡುವ ಉದ್ದೇಶವಿಲ್ಲ, ಮೊಬೈಲ್ ಮರಳಿ ಸಿಕ್ಕರೆ ಸಾಕು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದರಂತೆ ಆನ್‌ಲೈನ್ ಪಾರ್ಸೆಲ್ ಬುಕ್ಕಿಂಗ್ ಮೂಲಕ ಫೋನ್ ಕಳುಹಿಸುವಂತೆ ಪೊಲೀಸರು ಚಾಲಕನಿಗೆ ಸೂಚಿಸಿದ್ದಾರೆ.

ಪೊಲೀಸರ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಕೇವಲ 5 ಕಿ.ಮೀ. ದೂರದಲ್ಲಿದ್ದುಕೊಂಡು ಚಾಲಕ ಹಣಕ್ಕಾಗಿ ಸತಾಯಿಸಿದ್ದು, ಆತ ನಮ್ಮ ಕರೆಗೆ ಸ್ಪಂದಿಸಿ ಮೊಬೈಲ್ ಹಿಂದಿರುಗಿಸಿದ್ದರೆ ಸಂತೋಷದಿಂದ 500 ರೂ. ನೀಡುತ್ತಿದ್ದೆವು ಎಂದು ಯುವಕ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾನೆ.

ತಮ್ಮ ಸಮಸ್ಯೆಯನ್ನು ಭಾಷೆಯ ಅಡೆತಡೆಯ ನಡುವೆಯೂ ತಾಳ್ಮೆಯಿಂದ ಆಲಿಸಿ ನೆರವಾದ ಚಿಕ್ಕಜಾಲ ಠಾಣೆಯ ಪೊಲೀಸರಿಗೆ ಯುವಕ ಧನ್ಯವಾದ ಸಲ್ಲಿಸಿದ್ದು, ಪೊಲೀಸರ ಸ್ಪಂದನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.