Sharmiste Book  
ರಾಜ್ಯ

ರಂಗರೂಪ ನಾಟಕಗಳ ಸಂಕಲನ ಬಿಡುಗಡೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ‘ಶರ್ಮಿಷ್ಠೆ’ ಪುಸ್ತಕ ಬಿಡುಗಡೆ, ರಂಗಗೀತೆ ಗಾಯನ ಹಾಗೂ ರಂಗದೃಶ್ಯಾವಳಿ ಕಾರ್ಯಕ್ರಮ
ಬೆಂಗಳೂರು: ರಂಗಚಂದಿರ ಟ್ರಸ್ಟ್ ವತಿಯಿಂದ ಜೂ.22ರಂದು ಸಂಜೆ 4.30ಕ್ಕೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ರಂಗಕರ್ಮಿ ಡಾ. ಬೇಲೂರು ರಘುನಂದನ್ ರಚನೆಯ ರಂಗರೂಪ ನಾಟಕಗಳ ಸಂಕಲನ ‘ಶರ್ಮಿಷ್ಠೆ’ ಪುಸ್ತಕ ಬಿಡುಗಡೆ, ರಂಗಗೀತೆ ಗಾಯನ ಹಾಗೂ ರಂಗದೃಶ್ಯಾವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಪಿ. ಚಂದ್ರಿಕಾ ಕೃತಿ ಕುರಿತು ಮಾತನಾಡಲಿದ್ದಾರೆ. ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಇದಕ್ಕೂ ಮೊದಲು ಪತ್ರಕರ್ತ ದಿಲಾವರ್ ರಾಮುದುರ್ಗ ಅವರ ‘ರಂಗ ರಸದೃಶ್ಯಾವಳಿ’ಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಡಾ. ಬೇಲೂರು ರಘುನಂದನ್ ಅವರ ಪ್ರಮುಖ ರಂಗ ಕೃತಿಗಳಾದ ಸಾಲು ಮರಗಳ ತಾಯಿ ತಿಮ್ಮಕ್ಕ, ಅಮೀರ್ ಬಾಯಿ ಕರ್ನಾಟಕಿ, ಉಧೋ ಉಧೋ ಎಲ್ಲವ್ವ, ಚಿಟ್ಟಿ, ಅಕ್ಷಯ್, ನಗರಪೂಜೆ, ಅಧಿನಾಯಕಿ, ಪ್ರೇಮಮಯಿ ಹಿಡಿಂಬಿ, ಪಂಚವರ್ಗ, ಅಕ್ಕ, ಡಾಲ್ ಹೌಸ್, ಮಾತಾ, ದರ್ಪಣ ಸುಂದರಿ ಹಾಗೂ ಶರ್ಮಿಷ್ಠೆ ನಾಟಕಗಳ ದೃಶ್ಯಾವಳಿಗಳು ಪ್ರದರ್ಶನಗೊಳ್ಳಲಿವೆ. ಬಳಿಕ ಬೆಂಗಳೂರಿನ ಪ್ರಸಿದ್ಧ ‘ರಂಗಪಯಣ’ ತಂಡದಿಂದ ರಂಗಗೀತೆ ಗಾಯನ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ರಂಗಚಂದಿರ ಟ್ರಸ್ಟ್ ಗೌರವಾಧ್ಯಕ್ಷ ರಾಧಾಕೃಷ್ಣ ಹೆಗಡೆ, ಹಿರಿಯ ರಂಗ ಸಂಘಟಕ ಆರ್. ನರೇಂದ್ರ ಬಾಬು ಹಾಗೂ ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನದ ನಂದೀಶ್ ದೇವ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಜಿ.ಪಿ.ಒ. ಚಂದ್ರು ತಿಳಿಸಿದ್ದಾರೆ.