Rambhapuri Jagadguru 
ರಾಜ್ಯ

ಧರ್ಮ ಸಂಸ್ಕೃತಿ ಆಚರಣೆ ಜೊತೆಗೆ ಮಾನವರಾಗಿ ಬದುಕಿ ತೋರಿಸಬೇಕಾಗಿದೆ: ರಂಭಾಪುರಿ ಜಗದ್ಗುರು ಶಿವಾಚಾರ್ಯ ಭಗವತ್ಪಾದ ಶ್ರೀಗಳು ಕರೆ

ಬೆಂಗಳೂರು: ಜಗತ್ತಿನಲ್ಲಿ ವೀರಾಶೈವ, ಲಿಂಗಾಯಿತ ಧರ್ಮ ಸರ್ವಸಮಾಜಕ್ಕೆ ದಾರಿ ದೀಪವಾಗಿ ಬೆಳಕು ಕೊಡುವ ಸಮಾಜವಾಗಿದ್ದು ಎಲ್ಲೆಡೆ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಎಲ್ಲ ಉಪ ಪಂಗಡಗಳನ್ನು ಒಗ್ಗೂಡಿಸುವ ಮೂಲಕ ಸಮಾಜವನ್ನು ಕಟ್ಟಿ ಬೆಳೆಸಬೇಕೆಂದು ಬಾಳೆಹೊನ್ನೂರು ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಶ್ರೀಗಳು ಕರೆ ನೀಡಿದರು.
ಕನ್ನಲ್ಲಿಯಲ್ಲಿ ಧನುರ್ಮಾಸ, ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮೋಪದೇಶ ಸಮಾರಂಭದಲ್ಲಿ ಮಾತನಾಡಿದರು. ವೀರಶೈವ ಜಗದ್ಗುರು ರೇಣುಕಾಚಾರ್ಯರು ಭೋದಿಸಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವಿಕಾಸ, ಜ್ಷಾನ, ಮಾನವೀಯತೆ ಬೆಳೆಸಿಕೊಳ್ಳಬೇಕು. ಲಿಂಗಾಯಿತ-ವೀರಶೈವರು ಉಪ ಪಂಗಡಗಳು ಒಗ್ಗೂಡಿ ಬಸವ ಶರಣರ ಧರ್ಮದ ಪ್ರಚಾರವನ್ನು ವಿಶ್ವಕ್ಕೆ ತಿಳಿಸಬೇಕು. ವೀರಶೈವ ಧರ್ಮದಲ್ಲಿ ಎಲ್ಲ ಧರ್ಮಗಳ ಸಾರಾಂಶ ಅಡಗಿದ್ದು, ನಮ್ಮ ಧರ್ಮವನ್ನು ಎಲ್ಲರೂ ಒಪ್ಪಿಕೊಂಡಿದ್ದು, ನಾವು ಗುರುಸ್ಥಾನದಲ್ಲಿದ್ದು, ಅಹಿಂಸೆ, ಶಾಂತಿ, ಸತ್ಯ, ದಯೆ, ಕ್ಷಮೆ, ಸಹಬಾಳ್ವೆ, ಧರ್ಮಪ್ರಚಾರವನ್ನು ಸಾರಲು ಪ್ರತಿಯೊಬ್ಬರೂ ನಿತ್ಯ ಶಿವಪೂಜೆ, ಹಣೆಗೆ ವಿಬೂತಿ, ಲಿಂಗಾದಾರಣೆಯನ್ನು ಯುವ ಜನಾಂಗ ಕಡ್ಡಾಯವಾಗಿ ಯುವ ಜನಾಂಗ ಮಾಡಬೇಕು ಎಂದರು.
ರಾಷ್ಟ್ರದಲ್ಲಿ ಅಶಾಂತಿ, ಆರಾಜಕತೆ, ದ್ವೇಷ, ಅಸೂಯೆ, ಕೋಮುದ್ವೇಷ ಹೆಚ್ಚಾಗುತ್ತಿದ್ದು, ನಾವು ಶಾಂತಿ, ಸಹಬಾಳ್ವೆಯ ಸಂದೇಶಗಳನ್ನು ಸಾರುವ ಮೂಲಕ ಧರ್ಮ, ಸಂಸ್ಕೃತಿ, ಸಮಾಜವನ್ನು ಉಳಿಸುವ ಕೆಲಸ ಮಾಡಬೇಕು ಎಂದರು.

ಜಾತಿ, ಧರ್ಮ ಬದಿಗೊತ್ತಿ ಮಾನವರಾಗಿ ಜೀವಿಸಬೇಕು

ಬಾಳೆ ಹೊನ್ನೂರು ವೀರಸಿಂಹಾಸನ ಪೀಠದ ರಾಣಿಬೆನ್ನೂರು ಶಾಖಾ ಮಠದ ಶ್ರೀ ರೇಣುಕಾಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ಮನುಷ್ಯರಿಗೆ ನೆಮ್ಮದಿ, ಶಾಂತಿ ಸಿಗಬೇಕಾದರೆ ಧರ್ಮದ ಆಚರಣೆ, ಪ್ರಾಚೀನ ಸಾಹಿತ್ಯ, ಸಂಸ್ಕøತಿ, ಧಾರ್ಮಿಕ ಪರಂಪರೆಗಳನ್ನು ಎಲ್ಲರೂ ಆಚರಣೆ, ಕಾಯಕದಲ್ಲಿ ಮಾಡಬೇಕಾಗಿದೆ ಎಂದರು.
ಜನರ ಒಳಿತಿಗಾಗಿ , ಲೋಕಕಲ್ಯಾಣಕ್ಕಾಗಿ ಧನುರ್ಮಾಸ ಪೂಜೆ, ಇಷ್ಟಲಿಂಗ ಪೂಜೆಗಳು ಅತ್ಯವಶ್ಯಕವಾಗಿ ಬೇಕಾಗಿದ್ದು, ಬಡವ, ಶ್ರೀಮಂತ, ಜಾತಿ, ಧರ್ಮ ಬದಿಗೊತ್ತಿ ನಾವೆಲ್ಲರೂ ಮಾನವರಾಗಿ ಜೀವಿಸಬೇಕು ಜೊತೆಗೆ ಧರ್ಮ ಉಳಿಸಿ ಜತೆಗೂಡಿ ಬಾಳಬೇಕು ಎಂದ ಅವರು ಮಾನವ ಜನ್ಮ ಅತ್ಯಂತ ಪವಿತ್ರವಾಗಿದ್ದು, ನಾವೆಲ್ಲರು ಮಾನವರಾಗಿ ಬದುಕಿ ತೋರಿಸಬೇಕಾಗಿದೆ ಆಗ ಮಾತ್ರ ಭಗವಂತ ಎಲ್ಲರಲ್ಲಿಯೂ ನೆಲೆಸುತ್ತಾನೆ ಎಂದರು.
ಶಿವಗಂಗೆ ಮೇಲಣಗಾವಿ ಮಠದ ಶ್ರೀ ಶಾಂತ ಮುನಿ ಶಿವಾಚಾರ್ಯರು ಮಾತನಾಡಿ, ಜ್ಞಾನ, ಅನ್ನ, ಅಕ್ಷರ ದಾಸೋಹ ಕನ್ನಲ್ಲಿ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿದ್ದು. ಸಮಾಜದ ಒಳಿತಿಗಾಗಿ ಎಲ್ಲೆಡೆ ಇಂತಹ ಕಾಯಕಬೇಕಾಗಿವೆ ಎಂದು ಕರೆ ನೀಡಿದ ಅವರು, ರಂಬಾಪುರಿ ಪೀಠ ಸರ್ವಜನಾಂಗ, ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಮುಖಿ ಸೇವೆ ಮಾಡುತ್ತಿವೆ ಎಂದರು.
ಕನ್ನಲ್ಲಿ ಮಹಂತಿ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮಾನವೀಯತೆ, ಧರ್ಮದ ಆಚರಣೆ ಪರಂಪರೆಗೆ ಉತ್ತೇಜನ ನೀಡಬೇಕಾಗಿದೆ ಎಂದು ಕರೆ ನೀಡಿದರು.
ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಮಾತನಾಡಿ, ಲಿಂಗಪೂಜೆ ಸಂಸ್ಕೃತಿಯನ್ನು ಧರ್ಮಪಾಲನೆಯನ್ನು ನಾವೆಲ್ಲರೂ ಮಾಡುವ ಮೂಲಕ ಮಾನವ, ಮಾನವರಾಗಿ ಬದುಕುವ ಕೆಲಸ ಮಾಡಬೇಕು, ಆಗ ಧರ್ಮ ಉಳಿಯುತ್ತದೆ ಎಂದರು.
ಸಿದ್ದರ ಬೆಟ್ಟದ ಶ್ರೀ ವೀರ ಭದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಸ್.ಟಿ ಸೋಮಶೇಖರ್, ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎಂ ರುದ್ರೇಶ್, ಕನ್ನಲ್ಲಿ ನಿತ್ಯಾಹ್ನದಾಸೋಹ ಸಮಿತಿ ಅಧ್ಯಕ್ಷ ಎಸ್.ಶಾಂತರಾಜು, ಕಾರ್ಯದರ್ಶಿ ಜಿ.ಸಿದ್ದಲಿಂಗಸ್ವಾಮಿ, ಸಾಮಾಜಿಕ ಕಾರ್ಯಕರ್ತ ಸೂಲಿಕೆರೆ ಎಸ್.ಆರ್.ಮೋಹನ್ಕುಮಾರ್ (ಮಂಜು), ಕೊಡಿಗೆಹಳ್ಳಿ ಎನ್.ನಂಜುಂಡೇಶ್, ಬಾಳೆಎಲೆ ಬಸವರಾಜು, ಮಂಜುನಾಥ್ ಮಾತನಾಡಿದರು.