ವಿಜಯಪುರದ ವೀರಶೈವ ಲಿಂಗಾಯತ ಭವನದಲ್ಲಿ ರಾಮಾಯಣ ದರ್ಶನಂ ಕಾವ್ಯದ ಶ್ರೀ ಸಂಪುಟದ ‘ರಯ್‌ಗೆ ಕರೆದೊಯ್ ಓ ಅಗ್ನಿ ಭಾಗದ ಗಮಕ ಕಾರ್ಯಕ್ರಮ ನಡೆಯಿತು. ಕಲ್ಯಾಣರಾವ್ ದೇಶಪಾಂಡೆ, ಶಾಂತಾ ಕೌತಾಳ ಮತ್ತಿತರರಿದ್ದಾರೆ. 
ರಾಜ್ಯ

ರಾಮಾಯಣ ದರ್ಶನಂ ಸಾಹಿತ್ಯದ ಮಹಾಪರ್ವತ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ದೊಡ್ಡಣ್ಣ ಭಜಂತ್ರಿ ಹೇಳಿಕೆ
  • ಗಮಕ ಕಾರ್ಯಕ್ರಮ ಆಯೋಜನೆ
ವಿಜಯಪುರ: ರಾಷ್ಟ್ರಕವಿ ಕುವೆಂಪು ವಿರಚಿತ ಮಹಾಕಾವ್ಯ ‘ರಾಮಾಯಣ ದರ್ಶನಂವು ಸಾಹಿತ್ಯದ ಮಹಾಪರ್ವತ. ಇದು ‘ಸೀತಾ ಚರಿತ್ರೆಯೇ ಹೌದು ಎಂದು ಸಾಹಿತಿ ದೊಡ್ಡಣ್ಣ ಭಜಂತ್ರಿ ಹೇಳಿದರು.
ಕರ್ನಾಟಕ ಗಮಕ ಕಲಾ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾ ಗಮಕ ಕಲಾ ಪರಿಷತ್‌ಗಳ ಸಂಯುಕ್ತಾಶ್ರಯದಲ್ಲಿ ನಗರದ ವೀರಶೈವ ಲಿಂಗಾಯತ ಭವನದಲ್ಲಿ ಇತ್ತೀಚೆಗೆ ನಡೆದ ರಾಮಾಯಣ ದರ್ಶನಂ ಕಾವ್ಯದ ಶ್ರೀ ಸಂಪುಟದ ‘ರಯ್‌ಗೆ ಕರೆದೊಯ್ ಓ ಅಗ್ನಿ ಭಾಗದ ಗಮಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಗಮಕ ವಿದುಷಿ ಶಾಂತಾ ಕೌತಾಳ ‘ಬಾಳು ವೀಣಾ ಪಾಣಿ, ಬಾಳು ಬ್ರಹ್ಮನ ರಾಣಿ, ಗಾನಗಯ್ ಓ ಭಾವಗಂಗಾ ವೇಣಿ ಎಂಬ ಪದ್ಯದೊಂದಿಗೆ ಗಮಕ ವಾಚನ ಆರಂಭಿಸಿದರು. ಕಲ್ಯಾಣರಾವ್ ದೇಶಪಾಂಡೆ ಅದಕ್ಕೆ ವ್ಯಾಖ್ಯಾನ ನೀಡಿ, ರಾಮಾಯಣ ದರ್ಶನಂ ಕಾವ್ಯದ ಸೀತೆ ಪ್ರತಿಭಟನೆ ಮಾಡಿದ ವ್ಯಕ್ತಿ. ಕುವೆಂಪುರವರು ಪುರುಷ-ಸ್ತ್ರೀ ಸಮಾನತೆ ಪ್ರತಿಪಾದಿಸಿದರು. ಅದಕ್ಕಾಗಿ ಸೀತೆಯೊಂದಿಗೆ ರಾಮನೂ ಅಗ್ನಿಪ್ರವೇಶ ಮಾಡಿ ತಾನೂ ಸಚ್ಚರಿತ್ರ ವ್ಯಕ್ತಿಯೆಂದು ಜಗತ್ತಿಗೆ ತೋರಿಸಿದನು. ಅಲ್ಲದೇ, ಸೀತೆಯ ಅಗ್ನಿ ಪ್ರವೇಶ ಪ್ರಸಂಗ ಒಂದು ಹೋಮದಂತೆ ಮಂಗಲಮಯವಾಗಿ ಅಂತ್ಯಗೊಂಡಿತು ಎಂದು ತಿಳಿಸಿದರು.
ಮುಖ್ಯ ಅತಿಥಿ ಖ್ಯಾತ ರಂಗಕರ್ಮಿ ಸಂಗಮೇಶ ಬದಾಮಿ ಮಾತನಾಡಿ, ಗಮಕ ಕಲೆಯು ಕನ್ನಡ ಕಾವ್ಯಕ್ಕೆ ಶ್ರೀಮಂತಿಕೆ ನೀಡಿದೆ ಎಂದರು.
ಸಾಹಿತಿ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿದ್ದರು. ಸಂಗಮೇಶ ಮೇತ್ರಿ ಪರಿಚಯಿಸಿದರು. ಈರಣ್ಣ ತೊಂಡಿಕಟ್ಟಿ ನಿರ್ವಹಿಸಿದರು.