ಯಾದಗಿರಿಯಲ್ಲಿ ಗುರುವಾರ ಕರೆದಿದ್ದ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ. ಅವರ ಸಂವಾದ ಸಭೆಯಲ್ಲಿ ಕುಳಿತುಕೊಳ್ಳಲು ಆಸನಗಳಿಲ್ಲದೆ ನಿಂತೇ ಆಲಿಸಿದ ಭೋವಿ ಸಮಾಜದ ಜನರು.
- ಅಧ್ಯಕ್ಷರ ಸಮ್ಮುಖದಲ್ಲೇ ಭೋವಿ ಸಮಾಜದ ಜನರಿಗೆ ಅವಮಾನ
- ಸೌಂಡ್ಲೆಸ್ ನಾಡಗೀತೆ
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ. ಸಮ್ಮುಖದಲ್ಲೇ ಸಮಾಜದ ನೂರಾರು ಜನರನ್ನು ತಾಸುಗಟ್ಟಲೇ ನಿಲ್ಲಿಸಿ ಅವಮಾನಿಸಿದ ಪ್ರಸಂಗ ಗುರುವಾರ ಜಿಪಂ ಕಚೇರಿಯ ಕಿರಿದಾದ ಸಭಾಂಗಣದಲ್ಲಿ ನಡೆಯಿತು.
ನಿಗಮದ ಜಿಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಏರ್ಪಡಿಸಿದ್ದ ಅಧ್ಯಕ್ಷರ ಸಭೆ ಮತ್ತು ಸಮಾಜದ ಜನರೊಂದಿಗೆ ಸಂವಾದ ಕ್ಕಾಗಿ ವಿವಿಧ ತಾಲೂಕುಗಳಿಂದ 500ಕ್ಕೂ ಹೆಚ್ಚು ಭೋವಿ ಸಮಾಜದವರು ಆಗಮಿಸಿದಾಗ ಅಲ್ಲಿದ್ದ 70&80 ಕುರ್ಚಿಗಳು ಆಗಲೇ ಭರ್ತಿಯಾಗಿದ್ದವು. ಬಳಿಕ ಹತ್ತಾರು ಕುರ್ಚಿ ತಂದರೂ ಸರಿ ಹೋಗಲಿಲ್ಲ. ಇದರಿಂದಾಗಿ ನೂರಾರು ಜನರು ಸಭಾಂಗಣದೊಳಗೆ ನಿಂತರೆ, ಉಳಿದವರು ಹೊರಗಡೆ ನಿಂತು ಕಿಟಕಿಗಳ ಮೂಲಕ ಅಧ್ಯಕ್ಷರ ಮಾತುಗಳನ್ನು ಆಲಿಸಿದರು.
ಕಟ್ಟಕಡೆಯ ಸಮುದಾಯಗಳಲ್ಲಿ ಒಂದಾಗಿರುವ ಭೋವಿ ಸಮಾಜದ ಜನರಿಗೆ ಕನಿಷ್ಠ ಕೂಡಲು ಕುರ್ಚಿ ವ್ಯವಸ್ಥೆ ಮಾಡದ ಬಗ್ಗೆ ಹಿರಿಯ ಅಧಿಕಾರಿಗಳು, ಅಧ್ಯಕ್ಷರು ತುಟಿ ಬಿಚ್ಚಲಿಲ್ಲ. ಪಾಪ, ಮುಗ್ದ ಜನ ನಮ್ಮ ಅಧ್ಯಕ್ಷರು ಬಂದಿದ್ದಾರೆ. ಅವರನ್ನು ಕಣ್ತುಂಬ ನೋಡಿದರಾಯ್ತು ಎಂದು ತೊಂದರೆಯಾದರೂ ತಾಸುಗಟ್ಟಲೇ ನಿಂತೇ ಸಭೆ, ಸಂವಾದಲ್ಲಿ ಭಾಗವಹಿಸಿ ದೊಡ್ಡಸ್ಥಿಕೆ ಮೆರೆದರು.
ಇನ್ನು ಸಭೆ ಆರಂಭವಾಗುತ್ತಲೇ ಐದಾರು ಸಲ ಕರೆಂಟ್ ಹೋಗಿ ಬರುವುದು ಮಾಡಿತು. ಆಗಲೂ ಯಾರೂ ಏನು ನಡೆದೇ ಇಲ್ಲ ಎಂಬಂತೆ ಹಾಗೇ ಕುಳಿತಿದ್ದು ಪ್ರಜ್ಞಾವಂತರಿಗೆ ಸೋಜಿಗವೆನಿಸಿತು. ಇದಲ್ಲದೆ ಇನ್ನೊಂದು ದೊಡ್ಡ ತಪ್ಪು ನಡೆಯಿತು. ಅದೇನೆಂದರೆ ಆರಂಭದಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಾಗಿದ್ದರಿಂದ ಮೊಬೈಲ್ನಲ್ಲಿ ಹಾಡು ಹಾಕಿದ್ದರೂ ಸೌಂಡೇ ಇರಲಿಲ್ಲ. ಸೌಂಡ್ಲೆಸ್ ನಾಡಗೀತೆ ಕೇಳಿಸುವ ಮೂಲಕ ಆಯೋಜಕರು ಸಮಾಜ ಮತ್ತು ನಾಡಗೀತೆಗೂ ಅವಮಾನ ಮಾಡಿದಂತಾಗಿದೆ.
ಇದೇ ವೇಳೆ ಕುಳಿತುಕೊಳ್ಳಲು ಕುರ್ಚಿ ಮತ್ತು ಸ್ಥಳವಿಲ್ಲದೆ ಅನೇಕ ಪತ್ರಕರ್ತರು ಸಹ ಪರದಾಡಿದರು. ಇಷ್ಟೆಲ್ಲ ಅವಾಂತರ ಆದರೂ ಅಧ್ಯಕ್ಷ ರಾಮಪ್ಪ ಗಮನ ಇತ್ತ ಸುಳಿಯಲೇ ಇಲ್ಲ ಎಂಬಂತೆ ಕಂಡರು. ಯಾವಾಗ ಸುದ್ದಿಗೊಷ್ಠಿ ಶುರುವಾಯಿತೋ ಪತ್ರಕರ್ತರು ಈ ಬಗ್ಗೆ ಇಂಚಿಂಚೂ ವಿವರಿಸಿದಾಗ ಕುಂಭಕರ್ಣನ ನಿದ್ದೆಯಿಂದ ಎದ್ದವರಂತೆ ಅಧ್ಯಕ್ಷರು ಜಾಗೃತರಾಗಿ ಏನ್ರೀ ಮೇಡಂ (ನಿಗಮದ ಅಧಿಕಾರಿ) ಇದೇನು ವ್ಯವಸ್ಥೆ? ಸರಿಯಾಗಿ ಮಾಡಲು ಆಗಲ್ಲವೇಕೆ ಎಂದು ಪ್ರಶ್ನಿಸಿದರು.
ನಾನು ಒಳಗೆ ಬರುತ್ತಲೇ ಅನಿಸಿತು ಜಾಗ ಚಿಕ್ಕದು ಅಂತ, ಕೇಳಿದಾಗ ದೊಡ್ಡ ಹಾಲ್ ರಿಪೇರಿ ನಡೆದಿದೆ ಅಂತ ಸಮಜಾಯಿಸಿ ನೀಡಿದರು. ಆಗ ಇನ್ನೊಂದು ಸಭಾಂಗಣ ಖಾಲಿಯೇ ಇದೆ ಎಂದು ಪತ್ರಕರ್ತರು ಹೇಳಿದಾಗ, ಅಲ್ಲಿ ಎಸಿ ಇಲ್ಲ ಎಂಬ ಉತ್ತರ ಅಧಿಕಾರಿ ನೀಡಿದರು. ಬಡ ಸಮಾಜದ ಭೋವಿ ಜನರು ಎಸಿ ಬೇಕು ಅಂತ ಕೇಳಿದ್ರಾ? ಇಲ್ವಲ್ಲ. ಇಲ್ಲಿ ಭಾರಿ ಎಡವಟ್ಟು ಆಗಿದ್ದು ನಿಜ. ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಅಧ್ಯಕ್ಷರು ಹೇಳಿದರೆ, ಆಗಿದ್ದು ಆಗಿದೆ ಸರ್. ಸ್ವಾರಿ ಎಂದು ಮಹಿಳಾ ಅಧಿಕಾರಿ ಹೇಳುವ ಮೂಲಕ ಅವಾಂತರಕ್ಕೆ ತೆರೆ ಎಳೆದರು.
"
ಜಿಪಂ ಕಚೇರಿಯಲ್ಲಿ ನಡೆದ ಭೋವಿ ನಿಗಮದ ಅಧ್ಯಕ್ಷರ ಸಭೆಯಲ್ಲಿ ಅಧಿಕಾರಿಗಳು ಸಮಾಜದ ಜನರನ್ನು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡದೆ ಅವಮಾನಿಸಿರುವುದು ಖಂಡನೀಯ. ಕೂಡಲೇ ಜಿಲ್ಲಾಧಿಕಾರಿಗಳು ವಿಷಯವನ್ನು ಗಂಭೀರ ಪರಿಗಣಿಸಿ ಸಂಬಂಧಿತರ ವಿರುದ್ಧ ಕ್ರಮ ಜರುಗಿಸಬೇಕು.
— > ಮಾರೆಪ್ಪ ವರ್ಕನಳ್ಳಿ ಜಿಲ್ಲಾಧ್ಯಕ್ಷ, ಭೋವಿ ಸಮಾಜ ಯಾದಗಿರಿ