ಕಾಳಗಿ ತಾಲೂಕಿನ ಮೋಘಾ ಗ್ರಾಮದ ಪ್ರಾಚಿನ ರಾಮಲಿಂಗೇಶ್ವರ ದೇವಾಲಯ ಪರಿಸರದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ ಭಾನುವಾರ ಏರ್ಪಡಿಸಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -56ನೇ ಕಾರ್ಯಕ್ರಮದಲ್ಲಿ ಸಂಶೋಧಕ ಮುಡುಬಿ ಗುಂಡೇರಾವ ವಿಶೇಷ ಉಪನ್ಯಾಸ ನೀಡಿದರು. ಎಚ್​.ಬಿ.ಪಾಟೀಲ್​, ಶಿವಯೋಗೆಪ್ಪ ಎಸ್​.ಬಿರಾದಾರ ಇತರರಿದ್ದರು. 
ರಾಜ್ಯ

ರಾಮಲಿಂಗೇಶ್ವರ ದೇಗುಲ ದಕ್ಷಿಣ ಭಾರತದ ಕೇದಾರ

ಪ್ರಮುಖ ಮುಖ್ಯಾಂಶಗಳು

  • ಸಂಶೋಧಕ ಮುಡುಬಿ ಗುಂಡೇರಾವ ಅಭಿಮತ
  • ಮೋಘಾದಲ್ಲಿ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಕಾರ್ಯಕ್ರಮ
ಕಾಳಗಿ: ಮನ್ನೆದಡಿ ಸಾಸಿರ ನಾಡಿನ (ಕಾಳಗಿ) ಗತವೈಭವಕ್ಕೆ ಸಾಕ್ಷಿಯಾಗಿರುವ ಮೋಘಾ ರಾಮಲಿಂಗೇಶ್ವರ ದೇವಾಲಯ ದಕ್ಷಿಣ ಭಾರತದ ಕೇದಾರವಾಗಿದೆ ಎಂದು ಇತಿಹಾಸ ಸಂಶೋಧಕ ಮುಡುಬಿ ಗುಂಡೇರಾವ ಹೇಳಿದರು.
ಮೋಘಾ ಗ್ರಾಮದ ಪ್ರಾಚಿನ ರಾಮಲಿಂಗೇಶ್ವರ ದೇವಾಲಯ ಪರಿಸರದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ ಭಾನುವಾರ ಏರ್ಪಡಿಸಿದ್ದ ಜಿಲ್ಲೆಯ ಐತಿಹಾಸಿಕ ಸ್ಥಳ, ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-ದಲ್ಲಿ ಮಾತನಾಡಿದ ಅವರು, ಕಾಳಗಿ ದಕ್ಷಿಣದ ಕಾಶಿಯಾದರೆ, ಮೋಘಾ ಕ್ಷೇತ್ರ ದಕ್ಷಿಣದ ಕೇದಾರವಾಗಿದೆ ಎಂದರು.
ಉದ್ದನೆಯ ಶಿಖರ, ದೇಗುಲದ ಹೊರಗೋಡೆ ಮೇಲೆ ಹಲವಾರು ದೇವಾನು&ದೇವತೆಗಳ ಉಬ್ಬು ಶಿಲ್ಪಗಳಿವೆ. ಅಲಂಕಾರಿಕ ಸ್ತಂಭಗಳು ಗಮನಸೆಳೆಯುತ್ತವೆ. ಮುಖ ಮಂಟಪ, ನಂದಿ ಮಂಟಪ ಅದ್ಭುತವಾಗಿವೆ. ಮೂರು ಕಲ್ಯಾಣಿಗಳಿವೆ. ವೀರಗಲ್ಲುಗಳು, ಶಿವ, ವಿಷ್ಣು, ಗಣೇಶ, ಸಪ್ತ ಋಷಿಗಳು, ನವ ಮಾತ್ರಿಕೆಯರ ವಿಗ್ರಹಗಳು ಭಕ್ತಿಯ ಪರಕಾಷ್ಠೆ ತೋರಿಸುತ್ತವೆ. ಕಲ್ಯಾಣ ಚಾಲುಕ್ಯರು, ರಾಷ್ಟ್ರ ಕೂಟರ ಕಾಲದಲ್ಲಿ ಈ ಕ್ಷೇತ್ರ ಧರ್ಮ, ಅಧ್ಯಾತ್ಮದ ತಾಣವಾಗಿತ್ತು ಎಂದು ಬೆಳಕು ಚೆಲ್ಲಿದರು.
ಬಳಗದ ಅಧ್ಯಕ್ಷ ಎಚ್​.ಬಿ. ಪಾಟೀಲ್​ ಮಾತನಾಡಿ, ಇತಿಹಾಸದ ಪ್ರಜ್ಞೆ ಮೂಡಿಸುವಂಥ ವಿನೂತನ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅನೇಕ ಸ್ಮಾರಕಗಳು ಅಳಿವಿನ ಅಂಚಿನಲ್ಲಿದ್ದು, ರಕ್ಷಣೆಗೆ ಗ್ರಾಮಸ್ಥರು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಶಿವಯೋಗೆಪ್ಪ ಎಸ್​.ಬಿರಾದಾರ, ಅರ್ಚಕ ರಾಮಯ್ಯ ಮಠಪತಿ, ಬಾಲಾಜಿರಾವ ಪಾಟೀಲ್​, ನಾಗರೆಡ್ಡಿ ದೇಶಮುಖ, ವೀರಸಂಗಪ್ಪ ಯಲಮಡಗಿ, ಶರಣಯ್ಯ ಸಾಲಿಮಠ, ಉದಯ ಸುಲೇಪೇಟ, ಶಂಕರ ಶಿರೂರ, ಬಸವರಾಜ ಪಾಟೀಲ್​, ದಾನಪ್ಪ ಆಡಕಿ, ಧನಂಜಯ ಸ್ವಾಮಿ, ಸಂತೋಷ ಪೆದ್ದಿ, ಚನ್ನಪ್ಪ ವಚ್ಚಾ ಇತರರಿದ್ದರು.