Ramalinga Reddy | ಕಾಂಗ್ರೆಸ್​ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ 
ರಾಜ್ಯ

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲ್ಲ; ಸುರ್ಜೇವಾಲಾ ಸಂಧಾನಕ್ಕೂ ಮಣಿಯದ ರಾಮಲಿಂಗಾ ರೆಡ್ಡಿ | Ramalinga Reddy

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅಸಮಾಧಾನದ ನಡುವೆ, ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ರಾಮಲಿಂಗಾ ರೆಡ್ಡಿ ಜೊತೆ ಸುದೀರ್ಘ ಸಂಧಾನ ಸಭೆ ನಡೆಸಿದರಾದರೂ, ರೆಡ್ಡಿಯವರು ತಮ್ಮ ಪಟ್ಟು ಸಡಿಲಿಸಿಲ್ಲ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಹೈಕಮಾಂಡ್ ನಾಯಕರ ಮುಂದೆ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ ರಾಮಲಿಂಗಾರೆಡ್ಡಿ, ನನ್ನ ಹಿರಿತನ ಹಾಗೂ ವಯಸ್ಸಿಗೆ ತಕ್ಕ ಬೆಲೆ ನೀಡಬೇಕು. ಬೆಂಗಳೂರಿಗೆ ಸಂಬಂಧಿಸಿದ ಸಭೆಗಳಲ್ಲಿ ಕೃಷ್ಣ ಬೈರೇಗೌಡರ ಜೊತೆ ನಾನು ಹೇಗೆ ಭಾಗವಹಿಸಲು ಸಾಧ್ಯ? ಎಂದು ಪ್ರಶ್ನಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ನಿರ್ಧಾರಕ್ಕೆ ತೃಪ್ತಿದಾಯಕ ಪರಿಹಾರ ಸಿಗದ ಹೊರತು ಯಾವುದೇ ಬದಲಾವಣೆ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಶುಕ್ರವಾರ ತಡರಾತ್ರಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರೊಂದಿಗೆ ನಡೆದ ಸಭೆಯಲ್ಲೂ ಅವರು ತಮ್ಮ ರಾಜೀನಾಮೆಯ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಹೀಗಾಗಿ ಸದ್ಯಕ್ಕೆ ರಾಜೀನಾಮೆ ವಾಪಸ್ ಪಡೆಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಬೆಂಗಳೂರು ಶಾಸಕರ ಬೆಂಬಲ

ಮತ್ತೊಂದೆಡೆ, ರಾಮಲಿಂಗಾ ರೆಡ್ಡಿ ಅವರ ಈ ನಿಲುವಿಗೆ ಬೆಂಗಳೂರು ನಗರದ ಕಾಂಗ್ರೆಸ್ ಶಾಸಕರಿಂದ ಭಾರಿ ಬೆಂಬಲ ವ್ಯಕ್ತವಾಗಿದ್ದು, ಬಹುತೇಕ ಶಾಸಕರು ಒಗ್ಗಟ್ಟಾಗಿ ರಾಮಲಿಂಗಾ ರೆಡ್ಡಿ ಅವರ ಬೆನ್ನಿಗೆ ನಿಂತಿದ್ದಾರೆ. ನಾವು ಸದಾ ನಿಮ್ಮ ಜೊತೆಗಿದ್ದೇವೆ, ಯಾವುದೇ ಕಾರಣಕ್ಕೂ ತಮ್ಮ ನಿಲುವನ್ನು ಬದಲಿಸಬೇಡಿ ಎಂದು ಧೈರ್ಯ ತುಂಬಿದ್ದಾರೆ.
ತಮ್ಮ ಮುಂದಿನ ನಿಲುವಿನ ಬಗ್ಗೆ ನಿಗೂಢತೆ ಕಾಯ್ದುಕೊಂಡಿರುವ ರಾಮಲಿಂಗಾ ರೆಡ್ಡಿ ಅವರು, ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ತಮ್ಮನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿರುವುದನ್ನು ಖಚಿತಪಡಿಸಿದ್ದು, ರಾತ್ರಿ 11 ಗಂಟೆಗೆ ಬಂದ ಸಿಎಂ ಮಧ್ಯರಾತ್ರಿ 1 ಗಂಟೆಗೆ ತಮ್ಮೊಂದಿಗೆ ಊಟ ಮುಗಿಸಿ ನಿರ್ಗಮಿಸಿದರು ಎಂದು ತಿಳಿಸಿದ್ದಾರೆ. ಆದರೆ, ಸಿಎಂ ಜೊತೆ ನಡೆಸಿದ ಆ ಚರ್ಚೆಯ ವಿವರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.

ತಮ್ಮ ರಾಜೀನಾಮೆ ಬಿಕ್ಕಟ್ಟು ಇವತ್ತು ಬಗೆಹರಿಯುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾ ರೆಡ್ಡಿ, ಇವತ್ತು ಗೊಂದಲ ಬಗೆಹರಿಯುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಪಾಸಿಟಿವ್ ಆಗಿರುವ ಬಗ್ಗೆ ಏನು ಹೇಳಲ್ಲ ಎಂದರು. ರಾಜೀನಾಮೆ ನಿರ್ಧಾರ ಅಥವಾ ನಿಲುವನ್ನು ಬದಲಿಸಿಕೊಳ್ಳುವ ಯಾವುದೇ ಮುನ್ಸೂಚನೆಯನ್ನು ನೀಡದ ಅವರು, ಇವತ್ತು ಯಾವುದೇ ವಿಶೇಷ ರಾಜಕೀಯ ಕಾರ್ಯಕ್ರಮಗಳಿಲ್ಲ ಎಂದಿನಂತೆ ಕಚೇರಿಯಲ್ಲಿ ಇರುತ್ತೇನೆ ಎಂದು ತಿಳಿಸಿದರು.