‘ಸ್ಟಾರ್ ಸ್ಟಾರ್ಟ್‌ಅಪ್’ ಅವಾರ್ಡ್ಸ್
- ನವೋದ್ಯಮ ಉತ್ತೇಜಿಸುವ ಸಲುವಾಗಿ 4 ವರ್ಷದ ಹಿಂದೆ ರಾಮಯ್ಯ ಇವೊಲ್ಯೂಟ್ ಕಾರ್ಯಕ್ರಮ ಆರಂಭ
- ಅತ್ಯುತ್ತಮ ಸ್ಟಾರ್ಟ್‌ಅಪ್ ಕಂಪನಿಗೆ 1 ಕೋಟಿ ರೂ. ವರೆಗೆ ಸಹಾಯಧನ
- ‘ಸ್ಟಾರ್ ಸ್ಟಾರ್ಟ್‌ಅಪ್’ಪ್ರಶಸ್ತಿಗೆ 500 ನವೋದ್ಯಮ ಕಂಪನಿಗಳು ಅರ್ಜಿ ಸಲ್ಲಿಕೆ
ಬೆಂಗಳೂರು: ದೇಶ ಮತ್ತು ರಾಜ್ಯದಲ್ಲಿ ನವೋದ್ಯಮಗಳನ್ನು(ಸ್ಟಾರ್ಟ್‌ಅಪ್) ಉತ್ತೇಜಿಸುವ ಸಲುವಾಗಿ 4 ವರ್ಷದ ಹಿಂದೆ ರಾಮಯ್ಯ ಇವೊಲ್ಯೂಟ್ ಕಾರ್ಯಕ್ರಮ ಆರಂಭಿಸಲಾಗಿದೆ. ಕಾರ್ಯಕ್ರಮದಡಿ ಅತ್ಯುತ್ತಮ ನವೋದ್ಯಮಗಳಿಗೆ ಈವರೆಗೆ 2.8 ಕೋಟಿ ರೂ.ಧನಸಹಾಯ ನೀಡಲಾಗಿದೆ ಎಂದು ಗೋಕುಲ ಶಿಕ್ಷಣ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಆರ್.ಸೀತಾರಾಂ ಹೇಳಿದ್ದಾರೆ.
ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮತ್ತಿಕೆರೆಯ ಕ್ಯಾಂಪಸ್‌ನಲ್ಲಿ ಬುಧವಾರ ಆಯೋಜಿಸಿದ್ದ ‘ರಾಮಯ್ಯ ಇವೊಲ್ಯೂಟ್’ ಹಾಗೂ ‘ಸ್ಟಾರ್ ಸ್ಟಾರ್ಟ್‌ಅಪ್’ ಅವಾರ್ಡ್ಸ್-2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವೋದ್ಯಮ ಸ್ಥಾಪನೆಗೆ ಈಗ ಸುವರ್ಣಯುಗ. ಆದರೆ, ನವೋದ್ಯಮಿಗಳಿಗೆ ಹೊಸ ಕಂಪನಿ ಆರಂಭಿಸಲು ಹಣಕಾಸು ಸೇರಿ ಸಾಕಷ್ಟು ಸವಾಲುಗಳು ಇರುತ್ತದೆ. ಹಾಗಾಗಿ, ಅಗತ್ಯ ಸಿದ್ಧತೆ ಮಾಡಿಕೊಡು ಸ್ಟಾರ್ಟ್‌ಅಪ್ ಕಂಪನಿ ಆರಂಭಿಸಿ ಯಶಸ್ವಿ ಉದ್ದಿಮೆದಾರರಾಗಿ ಬೆಳೆಯಬೇಕು. ಡಾ. ಸಮರ್ಥ ನಾಗಭೂಷಣಂ ನೇತೃತ್ವದಲ್ಲಿ ‘ರಾಮಯ್ಯ ಇವೊಲ್ಯೂಟ್’ ಕಾರ್ಯಕ್ರಮ’ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ವಿವಿಯಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡಲಾಗುತ್ತಿದೆ ಎಂದರು.
‘ರಾಮಯ್ಯ ಇವೊಲ್ಯೂಟ್’ ಸಹ ಸಂಸ್ಥಾಪಕ ಡಾ.ಸಮರ್ಥ ನಾಗಭೂಷಣಂ ಮಾತನಾಡಿ, ಈ ಬಾರಿ ‘ಸ್ಟಾರ್ ಸ್ಟಾರ್ಟ್‌ಅಪ್’ಪ್ರಶಸ್ತಿಗೆ 500 ನವೋದ್ಯಮ ಕಂಪನಿಗಳು ಅರ್ಜಿ ಸಲ್ಲಿಸಿವೆ. ಇದರಲ್ಲಿ 22 ನವೋದ್ಯಮ ಕಂಪನಿ ಗುರುತಿಸಿದ್ದೇವೆ. ಅತ್ಯುತ್ತಮ ಸ್ಟಾರ್ಟ್‌ಅಪ್ ಕಂಪನಿಗೆ 1 ಕೋಟಿ ರೂ. ವರೆಗೆ ಸಹಾಯಧನ ನೀಡಲಾಗುತ್ತಿದೆ. ಇವುಗಳಿಂದ ಹೆಚ್ಚಿನ ಮೌಲ್ಯಯುತ ಉದ್ಯೋಗ ಸೃಷ್ಟಿಯಾಗುತ್ತಿವೆ. ಮುಂದಿ ಬಾರಿ ‘ಸ್ಟಾರ್ ಸ್ಟಾರ್ಟ್‌ಅಪ್’ಪ್ರಶಸ್ತಿಗೆ ಸಾವಿರ ನವೋದ್ಯಮ ಕಂಪನಿಗಳು ಅರ್ಜಿ ಸಲ್ಲಿಸುವಂತೆ ಗುರಿ ಹಾಕಿಕೊಂಡಿದ್ದೇವೆ. ಡೀಪ್‌ಟೆಕ್ ಕಂಪನಿಗಳು ಬೆಳೆದರೆ ದೇಶವೂ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಟಾರ್ಟ್‌ಅಪ್ ಕಂಪನಿಗಳು ತಯಾರಿದ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.ಅತ್ಯುತ್ತಮ ನವೋದ್ಯಮ ಕಂಪನಿಗಳಿಗೆ ಪ್ರಶಸ್ತಿ ನೀಡಲಾಯಿತು. ರಾಮಯ್ಯ ತಾಂತ್ರಿಕ ವಿವಿ ನಿರ್ದೇಶಕರಾದ ಕೋದಂಡರಾಮ ರಾಮಯ್ಯ, ಎಂ.ಆರ್.ಸಂಪಂಗಿರಾಮಯ್ಯ, ಗೋಕುಲ ಶಿಕ್ಷಣ ಫೌಂಡೇಷನ್ ಕಾರ್ಯದರ್ಶಿ ಎಂ.ಆರ್. ಅನಂದರಾಮ್, ಪ್ರಾಂಶುಪಾಲ ಡಾ.ಎನ್.ವಿ.ಆರ್.ನಾಯ್ಡು, ಕಾರ್ಯಕಾರಿ ನಿರ್ದೇಶಕ ಡಾ.ಎಚ್.ವಿ.ಪಾಶ್ವನಾಥ್, ಶೈಕ್ಷಣಿಕ ಸಲಹೆಗಾರ ಡಾ.ಕರಿಸಿದ್ದಪ್ಪ ಮತ್ತಿತರರಿದ್ದರು.
ಭಾರತ-ಇಟಲಿ ಸಂಬಂಧ ವೃದ್ಧಿ: ಭಾರತದ ನಾವೀನ್ಯತೆ ರಾಜಧಾನಿ ಬೆಂಗಳೂರು. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೆಕ್ ಕಂಪನಿಗಳು ಮತ್ತು ನವೋದ್ಯಮಗಳ ತವರಾಗಿದೆ. ಸ್ಟಾರ್ಟ್‌ಅಪ್ ಕಂಪನಿ ಆರಂಭಿಸುವುದಕ್ಕೆ ಬೆಂಗಳೂರು ಉತ್ತಮ ಸ್ಥಳವಾಗಿದೆ. ಸಿಲಿಕಾನ್ ಸಿಟಿಯಲ್ಲಿ ನಾವೀನ್ಯತೆ ಕೇಂದ್ರ ತೆರೆಯಲು ನಾವು ಉತ್ಸುಕರಾಗಿದ್ದೇವೆ. ಇಟಲಿ-ಭಾರತ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸುಧಾರಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರಿನಲ್ಲಿರುವ ದಿ ಕಾನ್ಸುಲ್ ಜನರಲ್ ಆಫ್ ಇಟಲಿ ಕಚೇರಿಯ ಜಿಯಾಂಡೊಮೆನಿಕಾ ಮಿಲಾನೊ ಹೇಳಿದರು.
ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರವೂ ವೇಗವಾಗಿ ಬೆಳೆಯುತ್ತಿದೆ. ದೇಶದ ತಂತ್ರಜ್ಞಾನ ಕ್ಷೇತ್ರ ಅತ್ಯುತ್ತಮವಾಗಿದೆ.ದೇಶದ ಪ್ರತಿಭಾವಂತ ಇಂಜಿನಿಯರ್‌ಗಳು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ. ವಿಮಾನಯಾನ ಕ್ಷೇತ್ರದ ಉತ್ಪನ್ನಗಳಲ್ಲಿ ತಯಾರಿಕೆಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹೊಸ ನಾಯಕತ್ವವಾಗಿ ರೂಪುಗೊಳ್ಳುತ್ತಿದೆ.
| ಕೃಷ್ಣಕುಮಾರ್ ನಟರಾಜನ್, ವ್ಯವಸ್ಥಾಪಕ ಪಾಲುದಾರ, ಮೇಳ ವೆಂಚರ್ಸ್.