ಸಾಂದರ್ಭಿಕ ಚಿತ್ರ  
ರಾಜ್ಯ

ರಂಜಾನ್ ಕೇವಲ ಉಪವಾಸವಲ್ಲ, ಆತ್ಮಶುದ್ಧಿಯ ಪಯಣ

ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಅನ್ನ-ನೀರು ತ್ಯಜಿಸುವ ಉಪವಾಸ(ರೋಜಾ) ಕೇವಲ ಹಸಿವಿನ ಅನುಭವವಲ್ಲ; ಅದು ಆತ್ಮಶಾಸನದ ಅಭ್ಯಾಸ. ಇಂದ್ರಿಯಗಳ ಮೇಲೆ ಹಿಡಿತ ಸಾಧಿಸು ವುದು, ಕೆಟ್ಟ ಆಲೋಚನೆಗಳಿಂದ ದೂರವಿರುವುದು, ಕೋಪವನ್ನು ನಿಯಂತ್ರಿಸುವುದು, ಇವೆಲ್ಲವೂ ಉಪವಾಸದ ಮುಖ್ಯ ಉದ್ದೇಶಗಳು. ‘ನನ್ನ ಹಸಿವು ನನಗೆ ಬಡವನ ಹಸಿವನ್ನು ನೆನಪಿಸಲಿ’ ಎಂಬ ತಾತ್ವಿಕ ತಳಹದಿಯ ಮೇಲೆ ಈ ವ್ರತ ನಿಂತಿದೆ.

ಕುರಾನ್​ವಾಕ್ಯಗಳು:ನಿಶ್ಚಯವಾಗಿಯೂ ಅಲ್ಲಾಹ್ ಸಹನಶೀಲರ ಜೊತೆಗಿದ್ದಾನೆ. (ಇನ್ನಲ್ಲಾಹ್ ಮಅಸ್ಸಾಬಿರೀನ್)ನೀವು ಒಳ್ಳೆಯ ದನ್ನು ಮಾಡಿದರೆ, ಅದರಿಂದ ನಿಮಗೇ ಉಪಕಾರವಾಗುತ್ತದೆ. (ಸೂರಾ ಅಲ್ ಇಸ್ರಾ 17:7) ್ಝರ್ಮನಿಷ್ಠತೆ ಎಂದರೆ ಕೇವಲ ಆಚರಣೆ ಅಲ್ಲ; ಅದು ದಾನ, ಸಹನೆ ಮತ್ತು ಸತ್ಯನಿಷ್ಠೆಯಲ್ಲಿ ಇದೆ. (ಸೂರಾ ಅಲ್ ಬಕರಾ 2:177 ಸಾರಾಂಶ)

ದಾನಧರ್ಮಗಳ ಮಹತ್ವ (ಝುಕಾತ್ ಮತ್ತು ಸದ್ಕಾ): ರಂಜಾನ್​ನ ಅತ್ಯಂತ ಸುಂದರ ಅಂಶವೆಂದರೆ ದಾನ. ತಾನು ಗಳಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ಬಡವರಿಗೆ ನೀಡುವ ಝುಕಾತ್ ಪದ್ಧತಿ ಸಮಾಜದಲ್ಲಿ ಆರ್ಥಿಕ ಸಮತೋಲನವನ್ನು ಬೆಳೆಸುತ್ತದೆ. ಹಸಿದವನಿಗೆ ಅನ್ನ ನೀಡುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಈ ತಿಂಗಳ ಮಹತ್ವದ ಪುಣ್ಯ ಕಾರ್ಯಗಳು.

ಕುರ್​ಆನ್​ಅವತರಣ ಮತ್ತು ಪ್ರಾರ್ಥನೆ: ರಂಜಾನ್ ತಿಂಗಳಲ್ಲಿ ಕುರ್​ಆನ್ ಲೋಕಕ್ಕೆ ಪರಿಚಯಿಸಲ್ಪಟ್ಟಿತು ಎಂಬ ನಂಬಿಕೆ ಇದೆ. ಭಕ್ತರು ರಾತ್ರಿಯಲ್ಲಿ ‘ತಾರಾವೀಹ್’ ಪ್ರಾರ್ಥನೆಗಳಲ್ಲಿ ತೊಡಗಿ ದೈವಿಕ ಚಿಂತನೆಯಲ್ಲಿ ಮುಳುಗುತ್ತಾರೆ. ಈ ಪ್ರಾರ್ಥನೆಗಳು ಮನಸ್ಸಿಗೆ ಶಾಂತಿ ಮತ್ತು ಏಕಾಗ್ರತೆಯನ್ನು ನೀಡುತ್ತವೆ.

ಸಮಾನತೆ ಮತ್ತು ಸೌಹಾರ್ದ: ಮಸೀದಿಗಳಲ್ಲಿ ಅಥವಾ ಮನೆಗಳಲ್ಲಿ ನಡೆಯುವ ‘ಇಫ್ತಾರ್’ ಕೂಟಗಳು ಸಮಾನತೆಯ ಸಂಕೇತ.

ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಉಪವಾಸ ಮುರಿಯುವ ದೃಶ್ಯವು ವಿಶ್ವಬಂಧುತ್ವವನ್ನು ಸಾರುತ್ತದೆ. ವಿವಿಧ ಧರ್ಮದ ಜನರು ಸೇರಿ ಆಚರಿಸುವ ಇಫ್ತಾರ್ ಕೂಟಗಳು ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸುತ್ತವೆ.

ರಂಜಾನ್​ನ ನಿಜವಾದ ಪಾಠ: ರಂಜಾನ್ ಎಂದರೆ ಕೇವಲ ಹಬ್ಬವಲ್ಲ; ಅದು ಜೀವನ ಪಾಠ. ಅಹಂಕಾರವನ್ನು ತೊರೆದು, ಸರಳತೆಯನ್ನು ಅಪ್ಪಿಕೊಂಡು, ಬಡವರ ನೋವಿಗೆ ಸ್ಪಂದಿಸುವ ಮನಸ್ಸನ್ನು ಬೆಳೆಸುವುದು ಇದರ ಉದ್ದೇಶ. ಸುಳ್ಳು, ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿದ್ದು, ಪ್ರೀತಿ, ಸಹನೆ ಮತ್ತು ಸತ್ಯದ ಮಾರ್ಗದಲ್ಲಿ ನಡೆದುಕೊಳ್ಳುವುದೇ ನಿಜವಾದ ಉಪವಾಸದ ಅರ್ಥ. ಈ ತಿಂಗಳು ಕೇವಲ ಮುಸ್ಲಿಮರಿಗಷ್ಟೇ ಪವಿತ್ರ ಅಲ್ಲ, ಸಂಪೂರ್ಣ ಮಾನವಕುಲಕ್ಕೆ ಶಾಂತಿ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶವನ್ನು ನೀಡುತ್ತದೆ. ರಂಜಾನ್ ನಮಗೆ ಒಳ್ಳೆಯ ಮನುಷ್ಯರಾಗಲು ಕಲಿಸುವ ಶಾಲೆಯಾಗಿದೆ.

ತಿಂಗಳ ಪೂರ್ತಿ ನಡೆದ ಮೌನ ಪ್ರಾರ್ಥನೆ, ಆತ್ಮಾವಲೋಕನ ಮತ್ತು ಶಿಸ್ತಿನ ಪಯಣ ಇಂದು ಈದುಲ್ ಫಿತರ್ ಸಂಭ್ರಮದ ಹಂತಕ್ಕೆ ತಲುಪಿದೆ. ರಂಜಾನ್ ಕೇವಲ ಆಹಾರ ತ್ಯಜಿಸುವ ಕ್ರಿಯೆಯಲ್ಲ; ಅದು ನಮ್ಮೊಳಗಿನ ಅಹಂಕಾರವನ್ನು ತ್ಯಜಿಸಿ, ಪರರ ನೋವಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳುವ ತರಬೇತಿ. ಹಸಿವಿನ ಭಾಷೆ ಎಲ್ಲರಿಗೂ ಒಂದೇ. ಹಗಲಿಡೀ ಉಪವಾಸದ ಹೊತ್ತಿನಲ್ಲಿ ನಮ್ಮ ಹೊಟ್ಟೆಗೆ ಬಂದ ಹಸಿವು, ಜಗತ್ತಿನ ಬೇರೆಡೆ ಹಸಿವಿನಿಂದ ಬಳಲುವವರ ನೋವನ್ನು ನೆನಪಿಸುತ್ತದೆ. ಈ ಅರಿವು ನಮ್ಮಲ್ಲಿ ಕರುಣೆಯನ್ನು ಮೂಡಿಸುತ್ತದೆ.

ಈ ಹಬ್ಬದ ನಿಜವಾದ ಸಂತೋಷ ನಮ್ಮ ತಟ್ಟೆಯಲ್ಲಿರುವ ಅನ್ನವನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡಾಗಲೇ ಪೂರ್ಣ ಗೊಳ್ಳುತ್ತದೆ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಸಂಸ್ಕೃತಿ ನಮ್ಮೆಲ್ಲರದ್ದಾಗಲಿ. ಈದ್ ಹಬ್ಬದ ಜೊತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸಂದೇಶ: ಹಬ್ಬಗಳು ಕೇವಲ ಸಂಭ್ರಮಕ್ಕಾಗಿ ಅಲ್ಲ; ಅವು ಮನುಷ್ಯನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಲು ಬರುತ್ತವೆ. ಹಬ್ಬಗಳು ಕೇವಲ ಬೆಳಕು ನೀಡುವುದಿಲ್ಲ; ಅವು ಒಳಗಿನ ಅಂಧಕಾರವನ್ನು ದೂರ ಮಾಡುತ್ತವೆ.ಆದ್ದರಿಂದ, ರಂಜಾನ್

ನಮಗೆ ಕಲಿಸಿದ ಪಾಠಗಳನ್ನು ಕೇವಲ ಒಂದು ತಿಂಗಳಿಗೆ ಸೀಮಿತಗೊಳಿಸದೆ, ಪ್ರತಿದಿನದ ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಪ್ರೀತಿ, ಸಹನೆ, ದಯೆ ಮತ್ತು ಸತ್ಯದ ಮಾರ್ಗದಲ್ಲಿ ನಡೆದು, ಉತ್ತಮ ಸಮಾಜ ನಿರ್ವಣಕ್ಕೆ ಕೈಜೋಡಿಸೋಣ.

-ಮೊಹಮ್ಮದ್ ರಫೀ ಪಾಷ (ಲೇಖಕರು ಬರಹಗಾರರು ಮತ್ತು ಚಿಂತಕರು)