ರಾಜ್ಯ

ರಾಜ್ಯೋತ್ಸವ ಸಂಭ್ರಮ!

ಕನ್ನಡ ಭಾಷೆಯ ಮಾಧುರ್ಯಕ್ಕೆ ಬೆರಗಾಗದವರೇ ಇಲ್ಲ. ‘ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯು’ ಎಂಬ ಭಾವ ಈಗ ಯುವಮನಸ್ಸುಗಳಲ್ಲೂ ಉತ್ಸಾಹದಿಂದ ಮಿಡಿಯುತಿದೆ. ಕಾಲದ ಓಟದಲ್ಲಿ ಕನ್ನಡ ಭಾಷೆಯ ಪ್ರಭಾವ ಮತ್ತು ವ್ಯಾಪ್ತಿ ವಿಸ್ತಾರವಾಗುತ್ತಲೇ ಸಾಗಿರುವುದು ಭಾಷೆಯ ಶಕ್ತಿ ಮತ್ತು ಭವಿಷ್ಯದ ಕುರಿತಾದ ದೊಡ್ಡ ಭರವಸೆಯೂ ಹೌದು. ಇದಕ್ಕೆ ಮಾಹಿತಿ-ತಂತ್ರಜ್ಞಾನದ ಶಕ್ತಿ ಜತೆಯಾಗಿದೆ. ಈಗ ವಿದೇಶಗಳಲ್ಲೂ ಕನ್ನಡದ ದನಿಗಳು ಅನುರಣಿಸುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡ ಸಮರ್ಥವಾಗಿ ಬಳಕೆಯಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿನ ಪ್ರಭಾವಿಗಳು (ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್) ಜನರನ್ನು ಆಕರ್ಷಿಸುವ ವಿಷಯ ಆಯ್ಕೆ, ವಿಶಿಷ್ಟ ನಿರೂಪಣೆಯ ಮೂಲಕ ಕನ್ನಡದ ಸೊಗಡನ್ನು ಜಗದಗಲ ಪರಿಚಯಿಸುತ್ತಿದ್ದಾರೆ. ಡಿಜಿಟಲ್ ಲೋಕದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಇವರು ಕನ್ನಡದ ಬೆಳವಣಿಗೆ ನಿಟ್ಟಿನಲ್ಲಿ ಆಗಬೇಕಾದ ಸಾಮೂಹಿಕ ಪ್ರಯತ್ನಗಳ ಬಗ್ಗೆ ವಿಜಯವಾಣಿಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ದನಿ ಎತ್ತಲೇ ಬೇಕು!

ಈ ಸಮಾಜದಲ್ಲಿ ಕನ್ನಡಕ್ಕಾಗಿ, ಕಾನೂನಾತ್ಮಕ ಹಕ್ಕುಗಳಿಗಾಗಿ ದನಿ ಎತ್ತಲೇ ಬೇಕು. ಆಗಲೇ ನ್ಯಾಯ ಸಿಗುತ್ತದೆ ಎಂಬುದು ಅಪ್ಪಟ ಸತ್ಯ. ಮಾಹಿತಿಯ ಕೊರತೆ, ಅರಿವಿನ ಕೊರತೆಯಿಂದಲೇ ಸಮಸ್ಯೆಗಳು ಉದ್ಭವಿಸೋದು. ಮಹತ್ವದ ವಿಷಯಗಳು, ಕಾನೂನಿನ ಸಂಗತಿಗಳನ್ನು ಕನ್ನಡದಲ್ಲಿ ತಿಳಿಸಿಕೊಟ್ಟಾಗ ಅವು ಜನರಿಗೆ ಸುಲಭದಲ್ಲಿ ಅರ್ಥವಾಗುತ್ತವೆ ಮತ್ತು ಅವರನ್ನು ತಮ್ಮ ಹಕ್ಕುಗಳ ಕುರಿತಾಗಿ ಜಾಗೃತರನ್ನಾಗಿಸುತ್ತವೆ. ಈ ನಿಟ್ಟಿನಲ್ಲಿ ನನಗಾದ ಅನುಭವಗಳು ವಿಶಿಷ್ಟ. ಅನೇಕರಿಗೆ ನ್ಯಾಯ ಸಿಕ್ಕಿದೆ ಎಂಬ ಸಂತೃಪ್ತಿಯೂ ಇದೆ.

ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಕಂಟೆಂಟ್ ರೀಚ್ ಆಗುವುದಿಲ್ಲ ಎಂಬುದು ತಪು್ಪ ಕಲ್ಪನೆ. ಒಳ್ಳೆಯ ಮಾಹಿತಿ ಇರುವ ವಿಡಿಯೋಗಳು ಮಿಲಿಯನ್​ಗಟ್ಟಲೇ ಓಡುತ್ತವೆ. ಹಾಗಾಗಿಯೇ, ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡದಲ್ಲೇ ಮಾಹಿತಿ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರಸಕ್ತ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಎಂಬುದು ಸಮಾಜದ ಕನ್ನಡಿಯಾಗಿ ಬದಲಾಗಿದೆ. ಭಾಷೆಯ ಮೇಲೆ ಆಸಕ್ತಿ ಮತ್ತು ಭಾಷೆಯ ಮೇಲೆ ಹಿಡಿತ ಮನೆಯ ವಾತಾವರಣದಿಂದಲೇ ಬರಬೇಕು. ಅಂದರೆ, ಅಂಥ ಪೂರಕ ವಾತಾವರಣವನ್ನು ಪಾಲಕರು ಮಕ್ಕಳಿಗೆ ಕಲ್ಪಿಸಿಕೊಡಬೇಕು. ಪಠ್ಯದ ಓದಿನ ಜತೆಗೆ ಕಥೆ, ಕವನ, ಕಾದಂಬರಿಯಂಥ ಸೃಜನಶೀಲ ಸಾಹಿತ್ಯದ ಓದನ್ನು ಶಾಲಾದಿನಗಳಲ್ಲೇ ರೂಢಿ ಮಾಡಿಸಬೇಕು. ಸಾಂಸ್ಕೃತಿಕ ಸಂಸ್ಕಾರವೇ ಭಾಷೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ನಾಟಕ ಮತ್ತು ಸಿನಿಮಾಗಳ ಪಾತ್ರವೂ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಮಹಾನಗರಗಳಲ್ಲಿ ರಂಗಭೂಮಿ ಸಂಸ್ಕೃತಿಯೇ ಮರೆಯಾಗುತ್ತಿದ್ದು, ಹೊಸ ಪೀಳಿಗೆ ‘ನಾಟಕವೆಂದರೆ ಏನು?’ ಎಂದು ಕೇಳುವಂಥ ಪರಿಸ್ಥಿತಿ ಸೃಷ್ಟಿಯಾಗಿರುವುದು ಶೋಚನೀಯ. ನಾಟಕಗಳು ಭಾಷಾಪ್ರಯೋಗದ ವಿವಿಧ ಆಯಾಮಗಳನ್ನು ಪರಿಚಯಿಸಿ ಕೊಡುತ್ತವೆ.

ಡಿಜಿಟಲ್ ಜಗತ್ತಿನಲ್ಲಿ ಜವಾಬ್ದಾರಿ ಮತ್ತು ಉತ್ತರದಾಯಿತ್ವವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಹಿನಿಯ ಮಾಧ್ಯಮಗಳು ಮಾಹಿತಿಯನ್ನು ಖಚಿತ ಪಡಿಸಿಕೊಂಡೇ ಪ್ರಕಟಿಸುತ್ತವೆ ಅಥವಾ ಪ್ರಸಾರ ಮಾಡುತ್ತವೆ. ಅದೇ ರೀತಿ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವವರು ಯಾವುದು ವೆರಿಫೈಡ್ ಕಂಟೆಂಟ್ ಎಂಬುದನ್ನು ಅರ್ಥ ಮಾಡಿಕೊಂಡು, ಬಳಿಕವೇ ಪೋಸ್ಟ್ ಮಾಡಬೇಕು. ಈ ಡಿಜಿಟಲ್ ಜವಾಬ್ದಾರಿಯನ್ನು ಮರೆತರೆ ಸುಳ್ಳು ಮಾಹಿತಿಗಳೇ ಹರಿದಾಡುತ್ತವೆ. ವಾರಾಂತ್ಯದಲ್ಲಿ ಪುಸ್ತಕವನ್ನು ಓದುವ ಚಟುವಟಿಕೆ, ಸಾಮೂಹಿಕವಾಗಿ ಕನ್ನಡ ಗೀತೆಗಳನ್ನು ಹಾಡುವುದು ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಲೋಕದಲ್ಲಿ ಕನ್ನಡಕ್ಕೆ ಸಂಬಂಧಿಸಿ ಖಂಡಿತವಾಗಿಯೂ ವಿಶಿಷ್ಟ ಪ್ರಯೋಗಗಳಾಗುತ್ತಿವೆ ಮತ್ತು ಇವು ಜನರಿಗೆ ಇಷ್ಟವಾಗುತ್ತಿವೆ. ಹೊಸದು ಅಂದಾಕ್ಷಣ ಯುವಸಮೂಹದಲ್ಲಿ ಒಂದು ಬಗೆಯ ಸೆಳೆತ ಇದೆ. ಇವೆಲ್ಲ ಕನ್ನಡವನ್ನು ಕಟ್ಟುವ ಕೆಲಸಗಳೇ ಹೌದು. ಭಾಷೆಯನ್ನು ಪ್ರೀತಿಸುತ್ತ, ಪೋಷಿಸುತ್ತ ದಿನನಿತ್ಯವೂ ರಾಜ್ಯೋತ್ಸವ ಆಚರಿಸೋಣ, ಬದುಕನ್ನು ನಿತ್ಯೋತ್ಸವವಾಗಿಸೋಣ.

ಕನ್ನಡವನ್ನು ಬೆಳೆಸಬೇಕಿಲ್ಲ, ಬಳಸಬೇಕಿದೆ!

ರಾಮಾಯಣದ, ಮಹಾಭಾರತದ ಕಥೆಗಳು ತುಂಬ ಜೀವನಪಾಠಗಳನ್ನು ಒದಗಿಸುತ್ತವೆ. ನನಗೆ ಉಪಯೋಗವಾದ ಈ ಸಂಗತಿಗಳು ಇತರರಿಗೂ ದಕ್ಕಲಿ ಎಂಬ ಸದಾಶಯದಿಂದ ಈ ಕುರಿತಾದ ಕಂಟೆಂಟ್ ರೂಪಿಸುತ್ತಿದ್ದೇನೆ. ನಿಜಕ್ಕೂ, ಕನ್ನಡಕ್ಕೆ ಇರುವ ಶಕ್ತಿ ಅಗಾಧವಾದದ್ದು. ವಾಸ್ತವದಲ್ಲಿ ಕನ್ನಡ ಎಂಬುದು ಮಹಾವೃಕ್ಷ. ಸಾವಿರಾರು ವರ್ಷಗಳ ಇತಿಹಾಸ, ಪರಂಪೆಯಿಂದ ಸಮೃದ್ಧವಾಗಿರುವ ಕನ್ನಡ ಭಾಷೆ ವಟವೃಕ್ಷವಾಗಿ ಬೆಳೆದಿದೆ. ಇದನ್ನು ನಾವು ಇನ್ನೂ ಬೆಳೆಸಬೇಕಿಲ್ಲ. ಆದರೆ, ಕನ್ನಡವನ್ನು ನಾವು ಹೆಚ್ಚು ಹೆಚ್ಚು ಬಳಸಬೇಕಿದೆ. ಕನ್ನಡವನ್ನು ಎಷ್ಟು ಹೆಚ್ಚು ಬಳಸುತ್ತೇವೆಯೋ ಭಾಷೆ ಮತ್ತು ಸಂಸ್ಕೃತಿ ಅದೇ ವೇಗದಲ್ಲಿ ವಿಕಾಸವಾಗುತ್ತ ಹೋಗುತ್ತದೆ. ತುಂಬ ಬೇಜಾರಿನ ಸಂಗತಿ ಎಂದರೆ ಇಂದಿಗೂ ಕಾಪೋರೇಟ್ ಕ್ಷೇತ್ರದಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಮನ್ನಣೆ ದೊರೆಯುತ್ತಿಲ್ಲ ಎಂಬುದು. ರೆಸ್ಯೂಮ್ ನೋಡಿ, ಕನ್ನಡದವರು ಎಂದು ಗೊತ್ತಾದರೆ ಉದ್ಯೋಗ ನೀಡಲು ನಿರಾಕರಿಸುತ್ತಿರುವ ಭಯಾನಕ ಸ್ಥಿತಿಯಲ್ಲಿ ಇದ್ದೇವೆ. ಈ ಬಗ್ಗೆ ಸಾಫ್ಟ್​ವೇರ್ ಉದ್ಯೋಗಿಯೊಬ್ಬರು ಇತ್ತೀಚೆಗೆ ಮಾಡಿದ ವಿಡಿಯೋ ವೈರಲ್ ಆಗಿ, ಮುಖ್ಯಮಂತ್ರಿಗಳ ಗಮನಕ್ಕೂ ಬಂದು, ಅವರು ಕಂಪನಿಗಳಿಗೆ ಸೂಚನೆ ನೀಡುವಂತಾಗಿದೆ.

ನಾನು ಕೂಡ ಕಾಪೋರೇಟ್ ಕ್ಷೇತ್ರದಲ್ಲಿದ್ದೇನೆ. ಪರರಾಜ್ಯ, ಪರಭಾಷಿಕರ ಪ್ರಾಬಲ್ಯ ಮೀತಿಮೀರಿದೆ. ‘ಕನ್ನಡಿಗರು ವಿಶಾಲಹೃದಯದವರು’ ಎಂದು ಹೇಳಿಕೊಳ್ಳುತ್ತ ನಾವು ನಮ್ಮ ಭಾಷೆಯನ್ನೇ ಮೂಲೆಗುಂಪು ಮಾಡುತ್ತಿದ್ದೇವೆ. ಇದರ ಪರಿಣಾಮವೆಂದರೆ, ಕಾಪೋರೇಟ್ ಸಭೆಗಳನ್ನು ತಮಿಳು, ತೆಲುಗಿನಲ್ಲಿ ಮಾಡುತ್ತಾರೆ! ಆದರೆ, ಕನ್ನಡದಲ್ಲಿ ಮಾತನಾಡಿದರೆ ಕೀಳರಿಮೆಯಿಂದ ನೋಡುತ್ತಾರೆ. ಕಾಪೋರೇಟ್ ಕ್ಷೇತ್ರದಲ್ಲಿ ತುಂಬ ಬದಲಾಗಬೇಕಿದೆ. ಅಲ್ಲಿನ ರಾಜಕೀಯ ಅಂತ್ಯಗೊಂಡು ಕನ್ನಡ ಹಾಗೂ ಕನ್ನಡಿಗರಿಗೆ ಮನ್ನಣೆ ಸಿಗಬೇಕಿದೆ. ಇದಕ್ಕಾಗಿ ಖಾಸಗಿ ಕಂಪನಿಗಳಲ್ಲಿ ಕನ್ನಡವನ್ನು ವ್ಯಾವಹಾರಿಕ ಭಾಷೆಯನ್ನಾಗಿಸಬೇಕು. ಇದು ಕಡ್ಡಾಯ ಮಾಡಿ, ಅನುಷ್ಠಾನಕ್ಕೆ ತಂದರೆ ಕಾಪೋರೇಟ್ ಪ್ರಪಂಚದಲ್ಲಿ ಕನ್ನಡ ಅನುರಣಿಸಲು ಸಾಧ್ಯ.

ತಂತ್ರಜ್ಞಾನದ ಎಲ್ಲ ಆಯಾಮಗಳಲ್ಲಿ ಇಂದಿಗೂ ಕನ್ನಡ ಸುಲಭವಾಗಿ ಎಟುಕುತ್ತಿಲ್ಲ. ಡಿಜಿಟಲ್ ಪುಸ್ತಕ ಲೋಕದಲ್ಲಿ, ಆಡಿಯೋ ಬುಕ್​ಗಳಲ್ಲಿ ಇತರ ಭಾಷೆಗಳದ್ದೇ ಪ್ರಾಬಲ್ಯವಿದೆ. ಹುಡುಕಿದರೂ ಕನ್ನಡದ ಕೃತಿಗಳು ಸಿಗುವುದಿಲ್ಲ. ಒಟಿಟಿಯಲ್ಲೂ ಇದೇ ಸ್ಥಿತಿ. ಅಲ್ಲೂ ಪರಭಾಷಾ ಚಿತ್ರಗಳದ್ದೇ ಅಬ್ಬರ. ಈ ಪರಿಸ್ಥಿತಿಯನ್ನು ಹೊರಗಿನವರು ಬದಲಾಯಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವು ಕನ್ನಡಿಗರೇ, ಅದರಲ್ಲೂ ಯುವಮನಸ್ಸುಗಳು ಹೆಚ್ಚಾಗಿ ಕೆಲಸ ಮಾಡಬೇಕಿದೆ. ಇಲ್ಲೆಲ್ಲ ಒಳ್ಳೆಯ ಲೇಖಕರು, ನಿರ್ದೇಶಕರು ಬಂದು, ಕನ್ನಡ ಪುಸ್ತಕಗಳು, ಚಿತ್ರಗಳು ಸಿಗುವಂತಾಗಬೇಕು. ಎಲ್ಲ ಸ್ಥಳಗಳಲ್ಲೂ ಕನ್ನಡಕ್ಕೆ ಸ್ಥಾನ ಕಲ್ಪಿಸಬೇಕಿದೆ. ನಾವು ಯಾವ ಭಾಷೆಯಲ್ಲಿ ಕನಸು ಕಾಣುತ್ತೇವೆಯೋ, ಅದೇ ಭಾಷೆಯಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯ. ಹಾಗಾಗಿ, ಕನ್ನಡ ಮುಕ್ತವಾಗಿ ಬಳಕೆ ಆಗಬೇಕು. ಯಾವುದೇ ಹಿಂಜರಿಕೆ, ಕೀಳರಿಮೆ ಇಲ್ಲದೆ ಹೆಮ್ಮೆಯಿಂದ ಬಳಸಬೇಕು. ಕನ್ನಡವೆಂಬ ಹೆಮ್ಮರದ ನೆರಳಿನಲ್ಲಿ ಮುಂದೆ ಸಾಗೋಣ.

ಕನ್ನಡಕ್ಕೂ ಮಾರುಕಟ್ಟೆ ಇದೆ, ಮುಂದೆ ಬನ್ನಿ...

ಗುಜರಾತ್​ನಲ್ಲಿ ದೊಡ್ಡಮಟ್ಟದಲ್ಲಿ ವಲಸೆ ಇದ್ದರೂ ಅಲ್ಲಿ ಗುಜರಾತಿ ಭಾಷೆಗೆ ಆತಂಕ ಎನ್ನುವಂಥ ಪರಿಸ್ಥಿತಿ ಇಲ್ಲ. ಉದ್ಯಮಶೀಲತೆ ಜಾಸ್ತಿ ಇರುವ ಉತ್ತರದ ರಾಜಸ್ಥಾನ, ದಕ್ಷಿಣದ ತಮಿಳುನಾಡು-ಆಂಧ್ರಪ್ರದೇಶದಲ್ಲೂ ಅಂಥ ಪರಿಸ್ಥಿತಿ ಇಲ್ಲ. ಕರ್ನಾಟಕದಲ್ಲಿ ಏಕೆ ಕನ್ನಡದ ಬಗ್ಗೆ ಆತಂಕ ಇದೆ ಎಂಬುದನ್ನು ವಿಶ್ಲೇಷಿಸಿದಾಗ ಅದಕ್ಕೆ ಉದ್ಯಮಶೀಲತೆಯ ಕೊರತೆ ಕಾರಣ ಎಂಬುದು ತಿಳಿಯಿತು. ಅಲ್ಲಿನವರು ಸ್ವಂತ ಉದ್ದಿಮೆ ನಡೆಸುತ್ತಾರೆ, ನಮ್ಮಲ್ಲಿ ಆ ಥರ ಮಾಲೀಕತ್ವ ಕಡಿಮೆ. ಹೀಗಾಗಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಹೇಗೆ ಎಂಬ ಆಲೋಚನೆಯಲ್ಲಿ ಮೂಡಿಬಂದಿದ್ದೇ ಈ ‘ಮುಂದೆ ಬನ್ನಿ’ ಕಲ್ಪನೆ. ಸಾಂಪ್ರದಾಯಿಕ ಉದ್ಯಮಕ್ಕಿಂತ ಜ್ಞಾನಾಧಾರಿತ ಉದ್ಯಮದಿಂದ ಅಂಥದ್ದೊಂದು ಉದ್ಯಮಶೀಲತೆ ಸೃಷ್ಟಿಸಬಹುದು ಎನ್ನುವುದಕ್ಕೆ ಇನ್ಪೋಸಿಸ್-ಜೆರೋಧಗಳೇ ಉದಾಹರಣೆ. ‘ನಮಗೂ ಅದು ಸಾಧ್ಯ’ ಅಂತ ಕನ್ನಡಿಗರಿಗೆ ಅನಿಸುವಂತೆ ಮಾಡಬೇಕಾದರೆ ಕನ್ನಡದಲ್ಲೇ ಅದನ್ನು ಹೇಳಬೇಕಂತ ಈ ಪಾಡ್​ಕಾಸ್ಟ್ ಆರಂಭಿಸಿದೆವು.

ಕನ್ನಡದಲ್ಲಿ ಕಂಟೆಂಟ್ ಸೃಷ್ಟಿಸುವವರಿಗೆ ಮೊದಲಿಗೆ ಕಾಡುವ ಆತಂಕ ಎಂದರೆ ರೀಚ್ ಮತ್ತು ವ್ಯಾಪ್ತಿಯದ್ದು. ಅದೇ ಕಾರಣಕ್ಕೆ ಕೆಲವರು ಇಂಗ್ಲಿಷ್-ಹಿಂದಿಯ ಮೊರೆ ಹೋಗುತ್ತಾರೆ. ಉದ್ಯಮಿಗಳೂ ಅದಕ್ಕೆ ಒಲವು ತೋರಿಸುತ್ತಾರಾದರೂ ಸಾಧಕ ಕನ್ನಡಿಗರಿಗೆ ತಮ್ಮ ಸಾಧನೆ ನಮ್ಮವರಿಗೂ ತಿಳಿಯಬೇಕು ಎಂಬ ಆಸೆ ಇರುತ್ತದೆ, ಒಳ್ಳೆಯ ಕಂಟೆಂಟ್ ಕೊಡಲು ಆರಂಭಿಸಿದರೆ ಸ್ಪಂದನೆ ಚೆನ್ನಾಗಿರುತ್ತದೆ ಎನ್ನುವುದಕ್ಕೆ ನಮ್ಮದೇ ನಿದರ್ಶನವಿದೆ.

ಹಾಗಂತ ಸವಾಲುಗಳು ಇಲ್ಲ ಅಂತ ಅಲ್ಲ. ಯಾರನ್ನು ಹೇಗೆ ಅಪ್ರೋಚ್ ಮಾಡಬೇಕು, ಯಾವ ಥರ ತಯಾರಿ ಇರಬೇಕು ಎನ್ನುವ ಜತೆಗೆ ವಿಷಯದ ಬಗ್ಗೆ ಹೆಚ್ಚಿನ ವಿವರ ತಿಳಿದಿರಬೇಕು. ಒಂದು ಹಂತದ ಬಳಿಕ ಬ್ರಾ್ಯಂಡಿಂಗ್, ಪ್ರಾಯೋಜಕತ್ವ ಪಡೆಯುವುದು ಕೂಡ ಸವಾಲಿನದ್ದೇ. ಆದರೆ ಇಂದು ಎಐ ಬಳಸಿಕೊಂಡು ಏನನ್ನು ಬೇಕಾದರೂ ಕಲಿಯಬಹುದು.

ಕನ್ನಡದ ಉಳಿವಿಗೆ ಡಿಜಿಟಲ್ ಪ್ರೆಸೆನ್ಸ್ ಕೂಡ ಮುಖ್ಯ. ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದಂಥ ಸಂಸ್ಥೆಗಳು ಡಿಜಿಟಲ್​ನಲ್ಲಿ ಕನ್ನಡದ ಅಸ್ತಿತ್ವವನ್ನು ಉತ್ತೇಜಿಸಲು ಸ್ಪರ್ಧೆ-ಸಂವಾದ ಇತ್ಯಾದಿಗಳನ್ನು ಏರ್ಪಡಿಸಬೇಕು. ಅಗತ್ಯ ತರಬೇತಿ ವಿಷಯಗಳನ್ನು ರೂಪಿಸಬೇಕು.

ಕನ್ನಡಕ್ಕೆ ಮಾರುಕಟ್ಟೆ ಇದೆಯೋ ಇಲ್ಲವೋ ಎಂಬ ಭಯ ಅನಗತ್ಯ. ಏಕೆಂದರೆ ಕನ್ನಡದಲ್ಲೂ ಒಳ್ಳೆಯ ಕನ್ಸಂಪ್ಷನ್(ಬಳಕೆ) ಇದೆ. ಕನ್ನಡಿಗರ ಸಂಖ್ಯೆ ಸಣ್ಣದಾದರೂ ಅದು ಕಡಿಮೆ ಏನಲ್ಲ, ಸಂಖ್ಯೆಯ ಲೆಕ್ಕದಲ್ಲಿ ಅದು ಯುನೈಟೆಡ್ ಕಿಂಗ್​ಡಮ್ ಜನಸಂಖ್ಯೆಯಷ್ಟಾಗುತ್ತದೆ. ಒಳ್ಳೆಯ ಕಂಟೆಂಟ್ ಕೊಟ್ಟರೆ ಕನ್ನಡಿಗರು ನೋಡೇ ನೋಡುತ್ತಾರೆ. ಕನ್ನಡದ ಅಸ್ತಿತ್ವದ ಕುರಿತ ಆತಂಕಗಳನ್ನು ಕಡೆಗಣಿಸುವಂತಿಲ್ಲವಾದರೂ ಕನ್ನಡದವರು ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಳ್ಳಬೇಕು, ಆತ್ಮವಿಶ್ವಾಸದಿಂದ ಮುಂದೆ ಬನ್ನಿ.

ಸಂಸ್ಕೃತಿಯ ದನಿ

ನಾನೊಂದು ಸಾಂಪ್ರದಾಯಿಕ ಕಂಬಳದ ವಿಡಿಯೋ ಮಾಡಲು ಹೋಗಿದ್ದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವದು. ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗದ ಕಾಡಿನ ನಡುವಿನ ಊರದು. ಕಂಬಳ ನಡೆಸುವ ಮನೆಯವರ ಜೋಡಿ ಕಂಬಳಗಳ ಕಾಲಿಗೆ ದೈವಗಳ ಕಾಲಿಗೆ ಹಾಕುವಂತೆ ಗಗ್ಗರ ಹಾಕಿತ್ತು. ಕುತೂಹಲಗೊಂಡು ಅಲ್ಲೋರ್ವ ಹಿರಿಯರ ಬಳಿ ಆ ಕುರಿತು ಮಾಹಿತಿ ಪಡೆದು, ಅವರಿಂದಲೇ ಮಾತಾಡಿಸಿ ವಿಡಿಯೋ ಮಾಡಿ, ಪೋಸ್ಟ್ ಮಾಡಿ ಮರೆತು ಬಿಟ್ಟಿದ್ದೆ. ಒಂದು ವರ್ಷವೇ ಉರುಳಿತು. ಮತ್ತೊಮ್ಮೆ ಅಲ್ಲಿನ ಕಂಬಳ ಬಂತು. ನಾನು ಸಂಬಂಧಿಕರ ಚಿಕಿತ್ಸೆಯ ಸಲುವಾಗಿ ಮಣಿಪಾಲದಲ್ಲಿದ್ದೆ. ಕಂಬಳಕ್ಕೆ ಹೋಗಿರಲಿಲ್ಲ. ಆದರೆ ಅಲ್ಲಿನ ಪತ್ರಕರ್ತರೊಬ್ಬರ ಕರೆ ಬಂತು. ನಿಮ್ಮನ್ನು ಮಾತಾಡಿಸಲೇಬೇಕೆಂದು ಹಿರಿಯರೊಬ್ಬರು ಕಾಯುತ್ತಿದ್ದಾರೆ ಎಂದರು. ಆ ಹಿರಿಯರು ಕಣ್ಣೀರು ಸುರಿಸುತ್ತ ಬಳಿ ಬಂದು ಧನ್ಯವಾದ ಹೇಳಿದರು.

ಕಳೆದ ವರ್ಷ ಮಾಡಿದ್ದ ಕಂಬಳದ ವಿಡಿಯೋ ಎಲ್ಲೆಲ್ಲೋ ತಲುಪಿತು. 28 ವರ್ಷದ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದ ಒಬ್ಬನೇ ಗಂಡುಮಗ, ಅಪ್ಪ ಈ ಇಳಿವಯಸ್ಸಿನಲ್ಲೂ ದೈವದ ಚಾಕರಿ ಮಾಡುತ್ತಿದ್ದಾರೆ, ಕಂಬಳ ಕೋಣಗಳ ಸೇವೆಯಲ್ಲಿ ನಿರತರಾಗಿದ್ದಾರೆ. ನಾನು ಅವರ ಜೊತೆಗಿದ್ದಿದ್ದರೆ ಅವರ ಬದುಕಿಗೆ ನೆರವಾಗುತ್ತಿತ್ತು. ನಾನು ಮತ್ತೆ ಮನೆ ಸೇರಬೇಕು ಎಂದು ಮನಕರಗಿ ಮಗ ಮನೆಗೆ ಬಂದಿದ್ದರಂತೆ. ಇದು ನಮ್ಮ ಮಣ್ಣು, ಸಂಸ್ಕೃತಿ, ಭಾಷೆ ಮತ್ತು ಸಾಮಾಜಿಕ ಜಾಲತಾಣಗಳ ತಾಕತ್ತು. ಉಪನ್ಯಾಸಕ ವೃತ್ತಿ ಬಿಟ್ಟು ಬಂದ ಮೂರೂವರೆ ವರುಷ ನಿಜಕ್ಕೂ ಬೆರಗಿನಿಂದಲೇ ಕಳೆದಿದ್ದೇನೆ. ಮತ್ತಷ್ಟು ಪವಾಡಗಳ ನಿರೀಕ್ಷೆಯಲ್ಲೇ ಕಂಟೆಂಟ್ ಕ್ರಿಯೇಷನ್ ಮುಂದುವರಿಸಿದ್ದೇನೆ.

ಹಳ್ಳಿಯ ಸರಳ ಸುಂದರ ಬದುಕು, ಕುಲಕಸುಬುಗಳು ಜನರಿಗೆ ಈಗಲೂ ಇಷ್ಟ. ಇದರ ವೈಶಿಷ್ಟ್ಯವನ್ನು ಸಾಮಾಜಿಕ ಮಾಧ್ಯಮಗಳು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಡಬಲ್ಲವು. ಹಾಗೆಯೇ, ಸ್ಥಳೀಯ ಸಂಸ್ಕೃತಿಯ ಪರಿಚಯ ಮತ್ತು ಸಂವರ್ಧನೆ ದೃಷ್ಟಿಯಲ್ಲೂ ಡಿಜಿಟಲ್ ಲೋಕ ಪ್ರಮುಖ ಪಾತ್ರ ವಹಿಸಿದೆ. ‘ಉಡುಪಿಯ ಕಂಡೀರಾ’ ಜನರಿಗೆ ಹತ್ತಿರವಾಗಿದ್ದೇ ಸಂಸ್ಕೃತಿ, ಧಾರ್ವಿುಕ, ಸಾಹಿತ್ಯದ ಮೂಲಕ. ಯಕ್ಷಗಾನ, ಕಂಬಳ, ಭೂತಕೋಲಗಳ ಕುರಿತ ಯುವಕರ ಆಸಕ್ತಿ ಮೆಚ್ಚುವಂಥದ್ದು. ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ಹಬ್ಬಿದ್ದರೂ ಪ್ರಾದೇಶಿಕ ಭಾಷೆಗಳಿಗೆ, ನಮ್ಮದೇ ಸಂಸ್ಕೃತಿಗಳಿಗೆ ಅಲ್ಲಿ ಇರುವ ಬೇಡಿಕೆ ಕಂಡು ನಿಜಕ್ಕೂ ನಾನೇ ಬೆರಗಾಗಿದ್ದೇನೆ.

ಆಲೋಚನೆ ಬದಲಾಗಲಿ

ಕನ್ನಡಾಂಬೆ ನನ್ನ ತಾಯಿ. ಕನ್ನಡ ನನ್ನ ಮಾತೃಭಾಷೆ. ವಾಸಸ್ಥಳ ಬದಲಿಸಿದ ಮಾತ್ರಕ್ಕೆ ಅಮ್ಮನನ್ನು ಬದಲಿಸಲು ಹೇಗೆ ಸಾಧ್ಯ, ಅಲ್ವಾ!? ನನ್ನ ಕಂಟೆಂಟ್ ಜರ್ನಿ ಪ್ರಾರಂಭವಾದದ್ದು ನನ್ನ ಅಮ್ಮ ಹಾಗೂ ಮನೆಯವರ ಪ್ರೇರಣೆ, ಅದರಲ್ಲೂ ಚಿಕ್ಕಮ್ಮನ ಒತ್ತಾಯದಿಂದ. ಯಾವುದೇ ಕೆಲಸ ಸಮಾಜ-ದೇಶಕ್ಕೆ ಏನೋ ಒಂದು ಸಹಾಯ ಆಗುವಂತಿರಬೇಕು ಎಂಬುದು ಮನೆಯಲ್ಲಿ ತಿಳಿಸಿದ ಪಾಠ. ಅದೇ ಉದ್ದೇಶದಿಂದ ಪ್ರಾರಂಭಿಸಿದ ಈ ಪ್ರಯಾಣದಲ್ಲಿ ಇಂದು ನನ್ನ ಆನ್​ಲೈನ್ ಫ್ಯಾಮಿಲಿ ಸುಮಾರು 3.5 ಲಕ್ಷದ ದೊಡ್ಡ ಕುಟುಂಬವಾಗಿದೆ. ಚೀನಾದಲ್ಲಿ ಸುಮಾರು ಕನ್ನಡಿಗರಿದ್ದು, ಬೇರೆ ಬೇರೆಡೆ ಚದುರಿದಂತೆ ಇದ್ದರೂ ಎಲ್ಲರ ವಿಡಿಯೋ ನೋಡುತ್ತಿರುತ್ತೇವೆೆ. ಎಲ್ಲರಿಗೂ ನಮ್ಮ ಭಾಷೆ ಮೇಲಿರುವ ಪ್ರೀತಿ ನೋಡಿ ಬಹಳ ಖುಷಿಯಾಗುತ್ತದೆ. ಭಾಷೆ ಪ್ರಪಂಚವನ್ನು ಒಂದುಗೂಡಿಸುವ ಸೇತುವೆ. ನನ್ನ ಉದ್ದೇಶವೇ ಕನ್ನಡಿಗರ ಬಳಿ ನನ್ನ ಚಾನಲ್ ಮೂಲಕ ಮಾತನಾಡುವುದು, ಅವರಿಗೆ ಉತ್ತಮ ಸಂದೇಶಗಳನ್ನು ತಿಳಿಸುವುದು, ಚೀನಾ ನೋಡಲು ಆಸಕ್ತಿ ಇರುವವರಿಗೆ ಅದನ್ನು ತೋರಿಸುವುದು. ಇಂಥ ಕಂಟೆಂಟುಗಳು ನಮ್ಮ ದೇಶಕ್ಕೆ, ಜನರಿಗೆ ಅಗತ್ಯ ಹಾಗೂ ಸಹಾಯಕ. ಕಂಟೆಂಟ್ ಕ್ರಿಯೇಟರ್ ಆಗಿ ಅನುಭವಿಸಿದ ಒಂದೇ ಒಂದು ಸವಾಲೆಂದರೆ ಕೆಲ ಕೀಳು ಮನಸ್ಥಿತಿಯವರ ಹೇಸಿಗೆ ಅನಿಸುವಂಥ ಕಮೆಂಟುಗಳು.

ಸಾಮಾಜಿಕ ಮಾಧ್ಯಮದಲ್ಲಿ ಅದು ಸಾಮಾನ್ಯ ಎಂಬಂತಿರುವ ಮನಸ್ಥಿತಿ ಬದಲಾಗಬೇಕಾಗಿದೆ. ಕಳೆಗಳನ್ನು ತೆಗೆಯದಿದ್ದರೆ ಅವು ಹೇಗೆ ಪಸರಿಸುತ್ತವೆಯೋ ಅದೇ ರೀತಿ, ಕೆಟ್ಟ ಮನಸ್ಥಿತಿ ವ್ಯಕ್ತಿತ್ವಕ್ಕೆ ಸರಿಯಾದ ಸಮಯಕ್ಕೆ ಛೀಮಾರಿ ಹಾಕದಿದ್ದರೆ ಅಂಥ ಮನಸ್ಥಿತಿಗಳು ಹೆಚ್ಚಾಗುತ್ತವೆ. ಸಮಾಜಕ್ಕೆ ಇದರಿಂದಾಗುವ ತೀವ್ರ ಪರಿಣಾಮಗಳನ್ನರಿತು ಕಂಟೆಂಟ್ ಕ್ರಿಯೇಟರ್ಸ್ ಜವಾಬ್ದಾರಿಯುತರಾಗಿ ಸಮಾಜಕ್ಕೆ ಒಳಿತಾಗುವ ಕಂಟೆಂಟುಗಳನ್ನು ಕೊಡುತ್ತ, ಇಂಥ ಕೆಟ್ಟ ಮನಸ್ಥಿತಿಯವರ ವಿರುದ್ಧ ಮಾತಾಡಿದರೆ ಎಲ್ಲ ವಿಚಾರಗಳೂ ಸ್ವಚ್ಛವಾಗಲು ಸಾಧ್ಯ. ಕನ್ನಡದ ಡಿಜಿಟಲ್ ಪ್ರೆಸೆನ್ಸ್ ಹೆಚ್ಚಾಗಬೇಕಾದರೆ ಮೊದಲು ನಾವು ಕನ್ನಡದ ವ್ಯಾಪ್ತಿಯ ಬಗ್ಗೆ ನಮ್ಮ ಆಲೋಚನೆ ಬದಲಾಯಿಸಿಕೊಳ್ಳಬೇಕು. ಕನ್ನಡದಲ್ಲಿ ಕಂಟೆಂಟ್ ಎಂದರೆ ಕೇವಲ ಸಿನಿಮಾ, ಹಾಸ್ಯ ಅಥವಾ ಮನರಂಜನೆಗೆ ಸೀಮಿತ ಆಗಬಾರದು.

ಇಂದು ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿ ಬೆಳವಣಿಗೆಯ ಬಗ್ಗೆಯೂ ಕನ್ನಡದಲ್ಲಿ ಮಾತನಾಡುವಂಥ ವಾತಾವರಣ ನಿಮಾಣ ಆಗಬೇಕು. ವಿಜ್ಞಾನ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಅಂತಾರಾಷ್ಟ್ರೀಯ ಸಂಬಂಧಗಳು, ಪ್ರವಾಸೋದ್ಯಮ, ಶಿಕ್ಷಣ, ಉದ್ಯಮಶೀಲತೆ ಹೀಗೆ ಪ್ರತಿ ಕ್ಷೇತ್ರದಲ್ಲೂ ಕನ್ನಡದ ಬಳಕೆಯಾಗಬೇಕು. ಕನ್ನಡದ ಡಿಜಿಟಲ್ ಭವಿಷ್ಯ ಬಲಪಡಿಸಲು ಕನ್ನಡಿಗರು ಕೇವಲ ಕನ್ನಡ ಕಂಟೆಂಟ್ ನೋಡುವವರಾಗಿರದೆ, ಕನ್ನಡದಲ್ಲಿ ಹೊಸ ವಿಷಯಗಳನ್ನು ಸೃಷ್ಟಿಸುವವರಾಗಬೇಕು. ಕನ್ನಡದಲ್ಲಿ ಬರೀ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವುದಷ್ಟೇ ಅಲ್ಲ, ಜಗತ್ತಿನ ಜ್ಞಾನವನ್ನೂ ಕನ್ನಡಿಗರಿಗೆ ತಲುಪಿಸುವ ಕೆಲಸವಾಗಬೇಕು. ಆದ್ದರಿಂದ ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿ ಓದಿ, ಕನ್ನಡದಲ್ಲಿ ಬರೆಯಿರಿ ಮತ್ತು ಡಿಜಿಟಲ್ ವೇದಿಕೆಗಳಲ್ಲಿಯೂ ಕನ್ನಡವನ್ನು ಬಳಸಿ. ನಾನು ಜಗತ್ತನ್ನು ಸುತ್ತಲು ಬಯಸುತ್ತೇನೆ, ಜಗತ್ತಿನ ಭಾಷೆಗಳನ್ನು ಕಲಿಯಲು ಇಷ್ಟಪಡುತ್ತೇನೆ. ಆದರೆ ಜಗತ್ತಿಗೆ ನನ್ನನ್ನು ಪರಿಚಯಿಸುವಾಗ ನನ್ನ ಕನ್ನಡದ ಗುರುತನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಯಾಕಂದ್ರೆ ನಾನು ಕರ್ನಾಟಕದ ಮನೆ ಮಗಳು. ಕನ್ನಡ ನನ್ನ ಅಮ್ಮ.

ಈ ನಾಡು ಚೆನ್ನ, ಈ ಭಾಷೆ ಚಿನ್ನ

ನನಗೆ ತುಂಬ ಭಾಷೆಗಳು ಬರುತ್ತವೆ. ಆದರೂ ನನಗೆ ಕಂಫರ್ಟ್ ಇರೋ ಭಾಷೆಯಲ್ಲಿ ಮಾತಾಡಿದರೆ ಜನರ ಜತೆ ಕನೆಕ್ಟ್ ಆಗುವುದು ಸುಲಭ ಅಂತ ಕನ್ನಡದಲ್ಲೇ ಕಂಟೆಂಟ್ ಕ್ರಿಯೇಷನ್ ಆರಂಭಿಸಿದೆ. ಕಂಟೆಂಟ್ ಕ್ರಿಯೇಷನ್​ನಲ್ಲಿ ಸಾಮಾನ್ಯವಾಗಿ ಎರಡು ವಿಧ, ಒಂದು ನಾವು ಜನರಿಗೆ ಉಪಯೋಗ ಆಗುವಂಥದ್ದನ್ನು ಏನಾದರೂ ಮಾಡುವುದು, ಇನ್ನೊಂದು ಸುಮ್ಮನೆ ಟ್ರೆಂಡ್ಸ್ ಫಾಲೋ ಮಾಡುತ್ತ ಡಾನ್ಸ್, ಸಿಂಗಿಂಗ್ ಅಥವಾ ಸಿನಿಮಾ ಡೈಲಾಗ್ಸ್​ಗೆ ಡಬ್ಬಿಂಗ್ ಮಾಡುವುದು. ಹೀಗೆ ಟ್ರೆಂಡ್ ಫಾಲೋ ಮಾಡುವುದರಲ್ಲಿ ನಮ್ಮದೇ ಒಂದು ಪರ್ಸನಲ್ ಬ್ರಾ್ಯಂಡ್ ಅಂತ ಇರಲ್ಲ.

ನಾನು ಅನುಭವಗಳನ್ನು ಹಂಚಿಕೊಂಡು ಹೋಗುತ್ತೇನೆ ಹೊರತು ಅಭಿಪ್ರಾಯಗಳನ್ನು ಹೇರುವುದಿಲ್ಲ. ಕಂಟೆಂಟ್ ಕ್ರಿಯೇಟರ್ಸ್ ಯಾವತ್ತೂ ಅಭದ್ರತೆಯ ಭಾವನೆಗೆ ಒಳಗಾಗಬಾರದು. ಕಂಟೆಂಟ್ ಕ್ರಿಯೇಷನ್ ಕೂಡ ಬಿಜಿನೆಸ್ ಥರ, ವರ್ಕ್ ಆಗುತ್ತಾ ಇಲ್ವಾ ಅಂತ ಮೊದಲೇ ಹೇಳಲು ಆಗುವುದಿಲ್ಲ. ಹೀಗಾಗಿ ಉದ್ಯೋಗದ ಮಧ್ಯೆ ಹವ್ಯಾಸವಾಗಿ ಆರಂಭಿಸಿ. ಕೆಲಸ ಬಿಟ್ಟು ಮಾಡಬೇಕೆಂದರೆ ಒಂದಷ್ಟು ಉಳಿತಾಯ ಅಥವಾ ಒಂದು ಸೈಡ್ ಇನ್​ಕಂ ಇಟ್ಟುಕೊಂಡೇ ಆರಂಭಿಸಿ. ಒಮ್ಮೆ ಆರಂಭಿಸಿದ ಮೇಲೆ ಕನಿಷ್ಠ ಒಂದು ವರ್ಷ ಮುಂದುವರಿಸಿ. ಅಲ್ಲದೆ, ನೀವು ಯಾವ ಥರದ ಕಂಟೆಂಟ್ ಮಾಡಬೇಕೆಂದು ನಿರ್ಧರಿಸಿ ಆ ವಿಷಯಕ್ಕೆ ಸೀಮಿತವಾಗಿ ಕಂಟೆಂಟ್ಸ್ ಮಾಡುತ್ತಿರಿ. ನಾನು ಸುಮಾರು 15 ದೇಶಗಳಿಗೆ ಭೇಟಿ ನೀಡಿದ್ದೇನೆ, ಯುರೋಪ್​ನಲ್ಲಿ ಮೂರು ವರ್ಷ ಇದ್ದೆ. ಅಲ್ಲಿನ ಜನರು ಅವರ ಭಾಷೆಯನ್ನು ಬಿಟ್ಟುಕೊಡುವುದಿಲ್ಲ, ಅದನ್ನು ಕಲಿಯುವ ಅನಿವಾರ್ಯತೆ ಸೃಷ್ಟಿಸುತ್ತಾರೆ.

ಹೀಗಿರುವಾಗ ನಮ್ಮವರಿಗೆ ಏಕೆ ಇಂಗ್ಲಿಷ್ ಮೋಹವೋ ಅರ್ಥವಾಗುವುದಿಲ್ಲ. ನಾವು ಕನ್ನಡಿಗರು ಮೊದಲಿಗೆ ನಮ್ಮ ಭಾಷೆಯಲ್ಲಿ, ನಮ್ಮ ಜನರ ಜತೆ ಕನೆಕ್ಟ್ ಆಗಬೇಕು. ನಿಜ ಹೇಳಬೇಕೆಂದರೆ ಕಂಟೆಂಟ್ ಕ್ರಿಯೇಷನ್​ಗೆ ಪ್ರಾದೇಶಿಕ ಭಾಷೆ ಚಿನ್ನ. ಪ್ರಾದೇಶಿಕ ಭಾಷೆಯಲ್ಲಿ ಕಂಟೆಂಟ್ ಮಾಡುವಾಗ ಬರುವ ಕೊಲ್ಯಾಬೊರೇಷನ್ ಕೂಡ ಸ್ಥಳೀಯವಾಗಿಯೇ ಇರುತ್ತದೆ. ಆಗ ನಾವು ಮತ್ತಷ್ಟು ಕನ್ನಡಿಗರ ಜತೆ ಕನೆಕ್ಟ್ ಆಗುತ್ತ ಹೋಗುತ್ತೇವೆ. ಹಾಗಂತ ಬೆಂಗಳೂರಿನಲ್ಲಿ ಇದ್ದುಕೊಂಡು ಇಂಗ್ಲಿಷ್​ನಲ್ಲಿ ಕಂಟೆಂಟ್ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದ ಬ್ರಾ್ಯಂಡ್ ಕೊಲ್ಯಾಬೊರೇಷನ್ ಸಿಗುತ್ತದೆಯಾದರೂ ಅದರ ಪ್ರಮಾಣ ತೀರಾ ಕಮ್ಮಿ ಹಾಗೂ ಆಗ ನಾವು ಜಾಗತಿಕ ಮಟ್ಟದ ಇನ್​ಫ್ಲುಯೆನ್ಸರ್ಸ್ ಜತೆ ಸ್ಪರ್ಧಿಸಬೇಕಾಗುತ್ತದೆ.