ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ( ಆರ್‌ಜಿಯುಎಚ್‌ಎಸ್), ಮಂಗಳವಾರ (ಜೂ 16) ಬೆಳಗ್ಗೆ 10ಕ್ಕೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ‘ಘಟಿಕೋತ್ಸವ’ ಆಯೋಜಿಸಿದ್ದು, 72,741 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಆರ್‌ಜಿಯುಎಚ್‌ಎಸ್ ಕುಲಪತಿ ಡಾ.ಬಿ.ಸಿ.ಭಗವಾನ್ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಪಾಲ ಥಾವರ್‌ಚಂದ್ ಗೆಹಲ್ಲೋತ್, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ವೈದ್ಯಕೀಯ ಸಚಿವ ಡಾ.ಆರ್.ಶರಣಪ್ರಕಾಶ್ ಪಾಟೀಲ್ ಉಪಸ್ಥಿತಿರಲಿದ್ದಾರೆ. 103 ವಿದ್ಯಾರ್ಥಿಗಳು 115 ಚಿನ್ನದ ಪದಕ ನೀಡಲಾಗುವುದು. ಪ್ರತಿ ಚಿನ್ನದ ಪದಕ 5 ಗ್ರಾಂ ಹೊಂದಿದೆ. ಚಿನ್ನದ ಪದಕ ಪಡೆಯಲು ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ ವಿವಿ ಮತ್ತು ದಾನಿಗಳ ದೇಣಿಗೆ ನಿಧಿಯಿಂದ ವೆಚ್ಚ ಭರಿಸಲಾಗುವುದು. ಪದ್ಮಶ್ರೀ ಇನ್‌ಸ್ಟಿಟ್ಯೂಟ್ ಆ್ ಫಿಸಿಯೋಥೆರಪಿ ಸಂಸ್ಥೆಯಲ್ಲಿ ಬಿಪಿಟಿ ಕೋರ್ಸ್ ಓದುತ್ತಿರುವ ಐ ಸ್ಪಂದನ 3 ಚಿನ್ನದ ಪದಕ ಪಡೆಯಲಿದ್ದಾರೆ ಎಂದರು.
ಡಾ.ನೈಲಾಡಿ ಶ್ರೀಧರ್ ಶೆಟ್ಟಿ, ಡಾ.ಹರ್ಷಿಣಿಗಿ ವೀರಭದ್ರಪ್ಪ ಮತ್ತು ಡಾ.ಎ.ಸಿ.ಷಣ್ಮುಗಂಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. 71 ವಿದ್ಯಾರ್ಥಿಗಳಿಗೆ ಪಿ.ಎಚ್‌ಡಿ ಮತ್ತು 9,761 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಸ್ವೀಕರಿಸಲಿದ್ದಾರೆ.ವಿಶ್ವವಿದ್ಯಾಲಯದ ಒಟ್ಟಾರೆ ಫಲಿತಾಂಶ ಶೇ.89.22ರಷ್ಟಿದ್ದು, ಇದು ಆರೋಗ್ಯ ಮತ್ತು ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ವಿವಿಯ ಶೈಕ್ಷಣಿಕ ಸಾಧನೆ ಪ್ರತಿಬಿಂಬಿಸುತ್ತದೆ. ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಅತಿ ದೊಡ್ಡ ವಿಶ್ವವಿದ್ಯಾಲಯ ಆಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆರ್‌ಜಿಯುಎಚ್‌ಎಸ್ ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ರಿಯಾಜ್ ಬಾಷಾ, ಹಣಕಾಸು ಅಧಿಕಾರಿ ಗಂಗಾಧರ್ ಇದ್ದರು.
ಸ್ಥಳಾಂತರ ಪ್ರಕ್ರಿಯೆಗೆ ವೇಗ:
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬೆಂಗಳೂರಿಂದ ಬೆಂ.ದಕ್ಷಿಣಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯು ವೇಗವಾಗಿ ನಡೆಯುತ್ತಿದೆ. ಇದಕ್ಕಾಗಿ ಹೊಸ ಕ್ಯಾಂಪಸ್ ನಿರ್ಮಾಣವಾಗುತ್ತಿದ್ದು, ಕಾಮಗಾರಿಗಳು ತ್ವರಿತವಾಗಿ ಸಾಗಿವೆ. ಮುಂದಿನ ವರ್ಷದ ವೇಳೆಗೆ ಜಯನಗರದಲ್ಲಿರುವ ಪ್ರಸ್ತುತ ಮುಖ್ಯ ಕಚೇರಿಯಿಂದ ಆಡಳಿತಾತ್ಮಕ ಬ್ಲಾಕ್ ಸ್ಥಳಾಂತರವಾಗಲಿದೆ. ಮೌಲ್ಯಮಾಪನ ಮತ್ತು ಪರೀಕ್ಷಾ ವಿಭಾಗಗಳು ಬೆಂಗಳೂರಿನಿಂದಲೇ ಕಾರ್ಯನಿರ್ವಹಿಸಲಿವೆ. ಹೊಸ ಕ್ಯಾಂಪಸ್‌ನಲ್ಲಿ ಸುಸಜ್ಜಿತವಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ವೈದ್ಯಕೀಯ ಸೀಟು ಹೆಚ್ಚಳ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಾ.ಬಿ.ಸಿ.ಭಗವಾನ್ ಮಾಹಿತಿ ನೀಡಿದರು.