ಬೆಂಗ್ಳೂರಲ್ಲಿ ಹಲವೆಡೆ ಜಿಟಿಜಿಟಿ ಮಳೆ 
ರಾಜ್ಯ

ಬೆಂಗ್ಳೂರಲ್ಲಿ ಹಲವೆಡೆ ಜಿಟಿಜಿಟಿ ಮಳೆ -Bangalore rain

ಬೆಂಗಳೂರು: ಬಂಗಾಳಕೊಲ್ಲಿ ಮತ್ತು ತಮಿಳುನಾಡಿನ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಪರಿಣಾಮ, ನಗರದ ಹಲವೆಡೆ ಸುರಿಯುತ್ತಿರುವ ಜಿಟಿಜಿಟಿ ಮಳೆ,ಶನಿವಾರವೂ ಮುಂದುವರಿದಿದೆ.

ಇದರಿಂದಾಗಿ ಜನಜೀವನ ಮೇಲೆ ತುಸು ಪರಿಣಾಮ ಬೀರಿತು.ಉಷ್ಣಾಂಶ ಇಳಿಕೆಯಿಂದ ಥಂಡಿ ವಾತಾವರಣ ನಿರ್ಮಾಣವಾಗಿದೆ.ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಉಂಟಾಗಿತ್ತು. ಸಂಜೆ 4 ಗಂಟೆ ವೇಳೆ ನಗರದ ವಿವಿಧ ಪ್ರದೇಶಗಳಲ್ಲಿ ಜಿಟಿಜಿಟಿ ಮಳೆಯಾಯಿತು.


ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತರಹಳ್ಳಿ, ಪದ್ಮನಾಭನಗರ, ಬನಶಂಕರಿ, ಹೆಸರುಘಟ್ಟ, ಜಾಲಹಳ್ಳಿ ಕ್ರಾಸ್, ಪೀಣ್ಯ ಕೈಗಾರಿಕಾ ಪ್ರದೇಶ, ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜೇಂದ್ರ ಮಾರುಕಟ್ಟೆ, ಚಾಮರಾಜಪೇಟೆ, ಚಿಕ್ಕಪೇಟೆ, ಕಾಟನ್‌ಪೇಟೆ, ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಶಾಂತಿನಗರ, ಜಯನಗರ, ಜೆ.ಪಿ. ನಗರ, ಜೆ.ಸಿ. ನಗರ, ಬನಶಂಕರಿ, ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ ಮತ್ತು ಶೇಷಾದ್ರಿಪುರದಲ್ಲಿ ಸಾಧಾರಣ ಪ್ರಮಾಣದ ಮಳೆಯಾಯಿತು.
ಸಂಜೆ ವೇಳೆ ಹೊರಗಡೆ ತೆರಳಿದ್ದವರು ಪರದಾಡಿದರು. ಬಸ್ ನಿಲ್ದಾಣಗಳು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಯಿತು. ಕೆಲ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ಸವಾರರು ವಾಹನ ಚಲಾಯಿಸಲು ಸಂಕಷ್ಟ ಅನುಭವಿಸಿದರು. ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದವರು ಮಳೆಗೆ ಸಿಲುಕಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
13ವರೆಗೆ ಸಾಧಾರಣ ಮಳೆ:
ನಗರದಲ್ಲಿ ಸುರಿಯುತ್ತಿರುವ ಮಳೆ ಆ.13ವರೆಗೆ ಮುಂದುವರಿಯಲಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವೂ ಕ್ರಮವಾಗಿ 27 ಡಿ.ಸೆ. ಮತ್ತು 21 ಡಿ.ಸೆ. ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.