ರಾಜಧಾನಿಯಲ್ಲಿ ಏ.29ರಿಂದ ಮುಂದಿನ 3 ದಿನ ಮಳೆ  
ರಾಜ್ಯ

ಏ.29ರಿಂದ ರಾಜಧಾನಿಯಲ್ಲಿ ಮಳೆ ಸಿಂಚನ: ಹವಾಮಾನ ಇಲಾಖೆ ಮುನ್ಸೂಚನೆ-Rain

ಬೆಂಗಳೂರು: ಬೇಸಿಗೆಯ ಬೇಗೆಯಲ್ಲಿ ಬೇಯುತ್ತಿರುವ ರಾಜಧಾನಿಯಲ್ಲಿ ಏ.29ರಿಂದ ಮುಂದಿನ 3 ದಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಗರಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ 34 ಡಿ.ಸೆ. ಉಷ್ಣಾಂಶ ದಾಖಲಾಗಬೇಕಿತ್ತು. ಆದರೆ, 36 ಡಿ. ಸೆ. ಉಷ್ಣಾಂಶ ದಾಖಲಾಗುತ್ತಿದ್ದು, ವಾಡಿಕೆಗಿಂತ 2 ಡಿ.ಸೆ. ಉಷ್ಣಾಂಶ ಅಧಿಕವಾಗಿದೆ. ಕನಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ 22.5 ಡಿ.ಸೆ. ಉಷ್ಣಾಂಶ ಇರಬೇಕಿತ್ತು. ಆದರೆ, 24.8 ಡಿ.ಸೆ. ಉಷ್ಣಾಂಶ ಕಂಡುಬಂದಿದ್ದು, ವಾಡಿಕೆಗಿಂತ 2.3 ಡಿ.ಸೆ. ಅಧಿಕವಾಗಿದೆ. ಈ ಹಿನ್ನೆಲೆ ಉಷ್ಣಾಂಶ ಹೆಚ್ಚಳವಾದ ಪರಿಣಾಮ ನಗರದಲ್ಲಿ ಬಿಸಿಲಿನ ಪ್ರಖರತೆಗೆ ಜನರ ನೆತ್ತಿ ಸುಡುತ್ತಿದೆ.
ಐದಾರು ತಿಂಗಳು ಕಳೆದರೂ ರಾಜಧಾನಿಯಲ್ಲಿ ರಭಸವಾಗಿ ಮಳೆ ಸುರಿದಿಲ್ಲ. ಕಳೆದ ವರ್ಷ ಮುಂಗಾರು ಬಳಿಕ ಹಿಂಗಾರು ಹಂಗಾಮಿನಲ್ಲೂ ಉತ್ತಮ ಮಳೆಯಾಗಿತ್ತು. ಆದರೆ ಈ ವರ್ಷ ಹಿಂಗಾರಿನಲ್ಲಿ ಮಳೆ ಕಡಿಮೆಯಾಗಿತ್ತು. ತೇವಾಂಶಭರಿತ ಮೋಡಗಳ ಕೊರತೆ ಮತ್ತು ಶುಭ್ರ ವಾತಾವರಣದಿಂದ ಬಿಸಿಲಿನಿಂದ ಸೆಖೆ ಕಾಣಿಸಿ ಬಟ್ಟೆ ಒದ್ದೆಯಾಗಿಸುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಮುಂದಿನ 2 ದಿನ ಶುಭ್ರ ವಾತಾವರಣ ಇರಲಿದೆ. ಮಧ್ಯಾಹ್ನ ವೇಳೆ ಭಾಗಶಃ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಡಿ.ಸೆ. ಮತ್ತು 23 ಡಿ.ಸೆ. ದಾಖಲಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನವೂ ವಾಡಿಕೆಗಿಂತ 3 ಡಿ.ಸೆ. ಹೆಚ್ಚಳವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.