ಶೇ.45 ಮಳೆ ಕುಂಠಿತ 
ರಾಜ್ಯ

ಪ್ರಸಕ್ತ ತಿಂಗಳಲ್ಲಿ ರಾಜ್ಯಾದ್ಯಂತ ಶೇ.45 ಮಳೆ ಕುಂಠಿತ: ಕರಾವಳಿಯಲ್ಲಿ 790 ಮಿಮೀ ಬದಲು 360 ಮಿಮೀ ಮಳೆ-Rain has decreased by 45%

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪ್ರವೇಶಿಸಿ ತಿಂಗಳು ಸಮೀಪಿಸುತ್ತಿದ್ದು, ಆರಂಭದಲ್ಲೇ ಮಾನ್ಸೂನ್ ದುರ್ಬಲಗೊಂಡ ಪರಿಣಾಮ ಪ್ರಸ್ತಕ ತಿಂಗಳಲ್ಲಿ ಶೇ.45 ಮಳೆ ಕುಂಠಿತವಾಗಿದೆ.
ಈ ಅವಧಿಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಾವಣಗೆರೆ ಮತ್ತು ಬೀದರ್ ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ತೀವ್ರ ಮಳೆ ಅಭಾವ ಎದುರಾಗಿದೆ.
ರಾಜ್ಯಾದ್ಯಂತ ಜೂ 1ರಿಂದ ಜೂ 29ವರೆಗೆ 191 ಮಿಮೀ ವರ್ಷಧಾರೆಯಾಗಬೇಕಿತ್ತು. ಆದರೆ, 105 ಮಿಮೀ ಸುರಿದಿದ್ದು, ಶೇ.45ಕ್ಕಿಂತ ಕಡಿಮೆ ಮಳೆಯಾಗಿದೆ. ಕರಾವಳಿಯಲ್ಲಿ 790 ಮಿಮೀ ಮಳೆಯಾಗುವ ಬದಲು 360 ಮಿಮೀ ಬಿದ್ದಿದ್ದು, ಶೇ.54 ಅಭಾವವಾಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ 343 ಮಿಮೀ ಮಳೆಯಾಗಬೇಕಿತ್ತು. 130 ಮಿಮೀ ಮಳೆಯಾಗಿದ್ದು, ಶೇ.62 ಕುಂಠಿತವಾಗಿದೆ. ಉತ್ತರ ಕರ್ನಾಟಕದಲ್ಲಿ ಶೇ. 30 ಮತ್ತು ದಕ್ಷಿಣ ಕರ್ನಾಟಕದಲ್ಲಿ ಶೇ.6 ಮಳೆ ಅಭಾವ ಉಂಟಾಗಿದೆ.
ಜು.6ವರೆಗೆ ಉತ್ತಮ ಮಳೆ:
ಕರಾವಳಿ, ಮಲೆನಾಡಿನ ಘಟ್ಟಪ್ರದೇಶಗಳಲ್ಲಿ ಜುಲೈ ಮೊದಲ ವಾರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 30ರಿಂದ ಜು.6ವರೆಗೆ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಗಾಳಿ ವೇಗ ಹೆಚ್ಚಿರುವ ಕಾರಣ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಕೊಡಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಜು.2ರಿಂದ ಮುಂದಿನ 5 ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದೆಡೆ ಲಘು ಪ್ರಮಾಣದಲ್ಲಿ ಮಳೆ ಬೀಳಲಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ. ಮುಂಗಾರು ಚುರುಕುಗೊಳ್ಳಲು ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ಪೂರಕ ವಾತಾವರಣ ಇಲ್ಲ. ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಮತ್ತು ತೇವಾಂಶ ಭರಿತ ಮೋಡಗಳು ಉಂಟಾಗುತ್ತಿಲ್ಲ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದರು.