ವಿಷ ಜಂತುಗಳ ಬಗ್ಗೆ ಇರಲಿ ಎಚ್ಚರ 
ರಾಜ್ಯ

ವಿಷ ಜಂತುಗಳ ಬಗ್ಗೆ ಇರಲಿ ಎಚ್ಚರ

ಪ್ರಮುಖ ಮುಖ್ಯಾಂಶಗಳು

  • ವಿಷ ಜಂತುಗಳ ಬಗ್ಗೆ ಇರಲಿ ಎಚ್ಚರ
  • ಮಳೆಗಾಲದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚು
  • ಭಯ ಬೇಡ ಎಚ್ಚರವಿರಲಿ
  • ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದ ಪ್ರಕರಣ
ವಿಷ ಜಂತುಗಳ ಬಗ್ಗೆ ಇರಲಿ ಎಚ್ಚರ
| ಮಳೆಗಾಲದಲ್ಲಿ ಹಾವು ಕಡಿತ ಪ್ರಕರಣ
ಆನಂದ ಭಮ್ಮನ್ನವರ ಚಿಕ್ಕೋಡಿ:
ಮಳೆಗಾಲ ಆರಂಭಗೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿದ್ದಾರೆ. ಆದರೆ ಪ್ರತಿ ಮಳೆಗಾಲದಲ್ಲಿ ಜಮೀನಿನಲ್ಲಿ ರೈತರಿಗೆ, ಶಾಲಾ-ಕಾಲೇಜು, ತೋಟದ ಮನೆ, ನಿರ್ವಹಣೆ ಇಲ್ಲದ ಕಟ್ಟಡಗಳ ಸುತ್ತಲೂ ಹಾವುಗಳು ಕಾಣಿಸಿಕೊಳ್ಳುತ್ತವೆ.ಪರಿಣಾಮ ವಿಷ ಜಂತುಗಳಿಆದ ಜೀವ ಭಯದಲ್ಲಿಯೇ ರೈತರು ಹೊಲ ಗದ್ದೆಗಳಲ್ಲಿ ಕೆಲಸ ಮಾಡಬೇಕಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾವುಗಳು ಹೆಚ್ಚಾಗಿ ಕಂಡುಬರುತ್ತವೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಹಾವುಗಳ ವಂಶಾಭಿವೃದ್ಧಿಗೆ ಸೂಕ್ತ ಸಮಯವಾಗಿದ್ದು, ಮಳೆ ನೀರಿನೊಂದಿಗೆ ಹಾವಿನ ಮರಿಗಳು ಹೆಚ್ಚಾಗಿವೆ ಕಾಣಸಿಗುತ್ತವೆ.ಮಳೆಯ ಸಮಯದಲ್ಲಿ ಸುರಕ್ಷಿತ ಪ್ರದೇಶದಲ್ಲಿ ಅಡಗಿಕೊಳ್ಳುವ ಭರದಲ್ಲಿ ಜನ ವಸತಿ ಪ್ರದೇಶ, ಕೊಟ್ಟಿಗೆ, ಅಥವಾ ಶೌಚಾಲಯಗಳು ಸಂದುಗಳಲ್ಲಿ ಸೇರಿಕೊಳ್ಳುತ್ತವೆ ಎನ್ನುತ್ತಾರೆ ಉರಗ ತಜ್ಞರು.
ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣ:
ಗಡಿ ಜಿಲ್ಲೆಯ ಬೆಳಗಾವಿಯಲ್ಲಿ ವಿಷ ಜಂತು ಕಡಿತ ಪ್ರಕರಣಗಳು ಕಳೆದೆರಡು ನಂತರ ಅಲ್ಪ ಏರಿಕೆ ಕಂಡಿದೆ. ೨೦೨೪ ರಲ್ಲಿ ೨೧೪ ಪ್ರಕರಣದಲ್ಲಿ ಮೂವರು, ೨೦೨೫ರಲ್ಲಿ ೨೨೮ ಪ್ರಕರಣದಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ. ಪ್ರಸ್ತುತ ೨೦೨೬ ರಲ್ಲಿ ಜನವರಿಯಿಂದ ಮೇ ವರೆಗೆ ಒಟ್ಟು ೧೧೪ ಪ್ರಕರಣಗಳು ದಾಖಲಾಗಿವೆ. ಸವದತ್ತಿ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ.
ಒಂದೇ ತಿಂಗಳಲ್ಲಿ ಎರಡು ಸಾವು:
ಪ್ರಸ್ತುತ ಮುಂಗಾರು ಮಳೆ ಆರಂಭವಾದ ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣದಲ್ಲಿ ಇಬ್ಬರು ಸಾವಿಗಿಡಾದ ಕುರಿತು ವರದಿಯಾಗಿದೆ. ಹುಕ್ಕೇರಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಮಹಿಳೆ ಶಾಂತಾ ಕಳವಿಕಟ್ಟಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ವಿಷ ಸರ್ಪ ಕಚ್ಚಿದ ಪರಿಣಾಮ ದುರ್ಮರಣ ಹೊಂದಿದ್ದು, ಹಾಗೂ ಅಥಣಿ ತಾಲೂಕಿನ ಅಡಹಳಿಟ್ಟಿ ಗ್ರಾಮದಲ್ಲಿ ಬಣವಿಯಿಂದ ಮೇವು ತರಲು ಹೋಗಿದ್ದ ರಾಕೇಶ ತಾಂವಂಶಿ ಹಾವು ಕಡಿದು ಮೃತನಾಗಿದ್ದಾನೆ.
ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ಅವಶ್ಯ:
ಹಾವು ಕಡಿತಕ್ಕೆ ಒಳಗಾದವರು ಸಾಮಾನ್ಯವಾಗಿ ಆತಂಕಕ್ಕೆ ಒಳಗಾಗುತ್ತಾರೆ. ಹಾವು ಕಚ್ಚಿದ ವ್ಯಕ್ತಿಗೆ 45 ನಿಮಿಷದ ಒಳಗಾಗಿ (ಗೋಲ್ಡನ್ ಅವರ)ಆಸ್ಪತ್ರೆಗೆ ಕರೆ ತಂದರೆ ಜೀವ ಉಳಿಸಬಹುದು, ಹಾವು ಕಡಿತಕ್ಕೆ ಒಳಗಾದವರಿಗೆ ದೈರ್ಯ ತುಂಬಬೇಕು, ಕಡಿತದ ಜಾಗೆಯಲ್ಲಿ ಬಿಗಿಯಾಗಿ ಕಟ್ಟುವುದು, ಬ್ಲೇಡ್ ಅಥವಾ ಚಾಕುವಿನಿಂದ ಕೊಯುವುದು, ಬಾಯಿ ಹಾಕಿ ರಕ್ತ ತೆಗೆಯುವುದು ಮತ್ತು ನಾಟಿ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಮಾಡಬಾರದು ಎನ್ನುತ್ತಾರೆ ವೈದ್ಯರು.
ಇರಲಿ ಎಚ್ಚರಿಕೆ:
ವಿಶೇಷವಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೈತರು ಮಳೆಗಾಲದಲ್ಲಿ ನೀರು ಉಣಿಸುವಾಗ ಮತ್ತು ಕಳೆ ತೆಗೆಯುವಾಗ ಎಚ್ಚರ ವಹಿಸಬೇಕು, ಕಾಲಿಗೆ ಉದ್ದನೆಯ ಬೂಟ್(ಗಂಬೂಟ್) ಧರಿಸಬೇಕು, ಜೊತೆಗೆ ಅತಿಯಾದ ಹುಲ್ಲು ಇದ್ದಲ್ಲಿ ನೋಡಿಕೊಂಡು ಕೆಲಸ ಮಾಡಬೇಕು. ಹಾಗೂ ಪಾಳು ಬಿದ್ದ ಪಂಪ್ ಹೌಸ್, ಮೇವಿನ ಬಣವೆಗಳ ಬಾಳಿ ತಡೆಯಲು ಎಚ್ಚರವಹಿಸುವುದು.
ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ:
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವಿ ಕಡಿತಕ್ಕೆ ಆಯಂಟಿ ಸ್ನೇಕ್ ವೆನಮ್ (ಎಎಸ್ ವಿ) ಚುಚ್ಚುಮದ್ದು ಲಭ್ಯವಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸೇರಿ ಒಟ್ಟು 6471 ಚುಚ್ಚುಮದ್ದು ಸಂಗ್ರಹವಿದ್ದು, , ಮಳೆಗಾಲದ ಹಾವು ಕಡಿತ ಪ್ರಕರಣ ಹೆಚ್ಚಿನ ಸಾಧ್ಯತೆಯಿಂದ ಕೊರತೆಯಾಗದಂತೆ ವೆನಮ್ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕೋಟ್-
ಮಳೆಗಾಲದಲ್ಲಿ ಸಾಮಾನ್ಯವಾಗಿ ಹಾವುಗಳು ಹೆಚ್ಚಾಗಿ ಹೊಲಗದ್ದೆಗಳಲ್ಲಿ ಕಂಡು ಬರುತ್ತವೆ. ರೈತರು ಸಾಧ್ಯವಾದಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲು ಸೂಚನೆ ನೀಡಲಾಗುವುದು.
ಮಂಜುನಾಥ ಚೌಹಾನ
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವೃತ್ತ.