ದಕ್ಷಿಣ ಕರ್ನಾಟಕದಲ್ಲಿ 2 ದಿನ ವರ್ಷಧಾರೆ 
ರಾಜ್ಯ

ರಾಜ್ಯದಲ್ಲೆಡೆ ಆಲಿಕಲ್ಲು ಸಹಿತ ಮಳೆ: ದಕ್ಷಿಣ ಕರ್ನಾಟಕದಲ್ಲಿ 2 ದಿನ ವರ್ಷಧಾರೆ-Rain

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ತೇವಾಂಶ ಭರಿತ ಮೋಡದ ಕಾರಣದಿಂದ ಬೆಂಗಳೂರು ನಗರ ಸೇರಿ ರಾಜ್ಯದ ಹಲವೆಡೆ ಗುಡುಗು, ಮಿಂಚು, ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಧಾರಾಕಾರ ಮಳೆ ಬುಧವಾರ ಸುರಿದಿದೆ. ಇದರಿಂದಾಗಿ ಬಿಸಿಲು ಬೇಗೆಗೆ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ವಿಜಯನಗರದಲ್ಲಿ ಏ.30 ಮತ್ತು ಮೇ 1ರಂದು ಆಲಿಕಲ್ಲು ಸಹಿತ ಜೋರು ಮಳೆಯಾಗಲಿದೆ. ಈ ವೇಳೆ ಮಳೆಗಿಂತ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ, ದಕ್ಷಿಣ ಕರ್ನಾಟಕ ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕೊಟ್ಟಿದೆ.
ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ 2 ದಿನ ಸಾಧಾರಣ ವರ್ಷಧಾರೆಯಾಗಲಿದೆ. ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮುಂದಿನ 2 ದಿನ ಬಿಸಿ ವಾತಾವರಣ ಮುಂದುವರಿಯಲಿದೆ.
ರಾಜ್ಯದಲ್ಲಿ ಮುಂದಿನ 5 ದಿನ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ಮಳೆ ಸುರಿಯುತ್ತಿರುವ ಹಿನ್ನೆಲೆ ಹಲವೆಡೆ ಹೆಚ್ಚಳವಾಗಿದ್ದ ಉಷ್ಣಾಂಶವೂ 1-2 ಡಿ.ಸೆ.ಗೆ ಇಳಿಮುಖವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.