ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ 2 ದಿನ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಜ.13 ಮತ್ತು 14ರಂದು ಮೋಡ ಕವಿದ ವಾತಾವರಣದೊಂದಿಗೆ ಲಘು ಪ್ರಮಾಣದಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ. ದಕ್ಷಿಣ, ತುಮಕೂರು, ಕೋಲಾರ, ಚಿತ್ರದುರ್ಗ ಸೇರಿ ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಮುಂದಿನ 3-4 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮೈಸೂರು, ಹಾಸನ ಮತ್ತು ಬೀದರ್‌ನಲ್ಲಿ ಕನಿಷ್ಠ ತಾಪಮಾನದಲ್ಲಿ ಸಾಮಾನ್ಯಕ್ಕಿಂತ 2-3 ಡಿ. ಸೆ. ಕುಸಿತವಾಗಲಿದೆ.
ಶೀತಗಾಳಿ ಮುಂದುವರಿಕೆ: ಕರ್ನಾಟಕದಲ್ಲಿ ತಾಪಮಾನ ಮತ್ತು ಚಳಿ ಏರಿಳಿತವಾಗುತ್ತಿದ್ದರೆ ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿ ಉತ್ತರ ಭಾರತದಲ್ಲಿ ಮುಂದಿನ 5 ದಿನ ಶೀತ ಗಾಳಿ ಮುಂದುವರಿದಿದೆ. ವಾಯುವ್ಯ ಭಾರತ, ಬಿಹಾರದಲ್ಲಿ ದಟ್ಟವಾದ ಮಂಜು ಬೀಳುತ್ತಿದ್ದು, ಇದರಿಂದ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.