ಮುಂಗಾರು ಮಳೆಯ ದರ್ಶನವಿಲ್ಲದೆ ಕಂಗಾಲಾದ ಭಾಲ್ಕಿ ತಾಲೂಕಿನ ಜಾಡವಾಡಿ ಗ್ರಾಮದ ರೈತ ಸಿದ್ದಪ್ಪ ಜೋಡೆತ್ತುಗಳೊಂದಿಗೆ ಆಕಾಶದತ್ತ ಮುಖ ಮಾಡಿರುವುದು.
- ಜಿಲ್ಲೆಯಲ್ಲೇ ಭಾಲ್ಕಿಯಲ್ಲಿ ಅತಿ ಕಮ್ಮಿ ಮಳೆ
- ಬಿತ್ತಿದ ಅಲ್ಪಸ್ವಲ್ಪ ಬೆಳೆಯೂ ಹಾಳಾಗುವ ಆತಂಕ
ಭಾಲ್ಕಿ: ಮಳೆಗಾಲ ಶುರುವಾಗಿ ಮೂರು ವಾರವಾದರೂ ವರುಣ ಕೃಪೆ ತೋರದ್ದರಿಂದ ಅನ್ನದಾತರು ತೀವ್ರ ಸಂಕಟಕ್ಕೆ ಸಿಲುಕಿದ್ದಲ್ಲದೆ ಮುಂದೇನು ಎಂಬ ಚಿಂತೆಯಲ್ಲಿ ದಿನದೂಡುವಂತಾಗಿದೆ.
ಜೂನ್ ಮೊದಲ ವಾರ ಸ್ವಲ್ಪ ಮಳೆಯಾಗಿದ್ದರಿಂದ ಭಾಗ್ಯನಗರ, ದಾಡಗಿ, ಹರನಾಳ, ಕಪಲಾಪುರ, ಹುಪಳಾ, ಮೇಳಕುಂದಾ ಗ್ರಾಮದ ರೈತರು ಬಿತ್ತನೆ ಮಾಡಿದ್ದರೆ, ಉಳಿದೆಡೆ ಒಂದ್ಹನಿಯೂ ಮಳೆ ಸುರಿಯದೆ ಬಿತ್ತನೆ ಕುಂಠಿತಗೊಂಡಿದೆ. ಜೂನ್ ಅಂತ್ಯಕ್ಕೆ ತಾಲೂಕಿನಲ್ಲಿ ಶೇ.80 ಬಿತ್ತನೆ ಆಗಬೇಕು. ಆದರೆ ಇದುವರೆಗೆ ಆಗಿದ್ದು ಕೇವಲ ಶೇ.25.
ಬೀದರ್ ಜಿಲ್ಲೆಯ ಉಳಿದ ತಾಲೂಕುಗಳ ಮಳೆ ಪ್ರಮಾಣ ಗಮನಿಸಿದರೆ ಭಾಲ್ಕಿಯಲ್ಲಿ ತೀವ್ರ ಕಮ್ಮಿ. ಈವರೆಗೆ ಸರಾಸರಿ 155 ಮಿಮೀ ಪೈಕಿ ಸುರಿದಿದ್ದು 50 ಮಿಮೀ ಮಾತ್ರ. 10&12 ಹಳ್ಳಿಗಳಲ್ಲಿ ಅಷ್ಟೂ&ಇಷ್ಟು ಮಳೆಯಾಗಿದ್ದರೆ, ಭಾತಂಬ್ರಾ, ಲಖನಗಾಂವ್, ಮೇಹಕರ್, ಸಾಯಗಾಂವ, ಹಲಸಿ, ಜವಳಗಾ, ಗೋರಚಿಂಚೋಳಿ, ಅಟ್ಟರಗಾ, ಲಾಧಾ, ಇಂಚೂರ, ಆಳಂದಿ, ಡೋಣಗಾಪುರ ಇತರೆಡೆ ಮಳೆರಾಯನ ದರ್ಶನ ಆಗದಿರುವುದು ರೈತರಿಗೆ ದಿಕ್ಕು ತೋಚದಂತೆ ಮಾಡಿದೆ.
ಇಂಥದರಲ್ಲೂ ಹೆಚ್ಚೂ&ಕಮ್ಮಿ ಮಳೆಯಾದರೂ ಕೈಹಿಡಿಯುವ ನಿರೀೆಯೊಂದಿಗೆ ಸೋಯಾಬೀನ್ ಬಿತ್ತನೆಗೆ ಹೆಚ್ಚಿನ ರೈತರು ಒಲವು ತೋರುತ್ತಿದ್ದಾರೆ. ಅಂತಲೇ ಸೋಯಾ ಬೀಜಕ್ಕೆ ಈ ವರ್ಷ ಅಧಿಕ ಬೇಡಿಕೆ ಬಂದಿದೆ.
ಈಗಾಗಲೇ ಬಿತ್ತನೆ ಮಾಡಿದ ಕಡೆ ಒಂದೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಮೊಳಕೆಗಳು ಒಣಗಿ ಹಾಳಾಗುವ ಸಾಧ್ಯತೆ ಹೆಚ್ಚು. ತಾಲೂಕಿನ ಬಹುತೇಕ ಹಳ್ಳ&ಕೊಳ್ಳ, ಕರೆ&ಕಟ್ಟೆಗಳ ಒಡಲು ಬರಿದಾಗಿದ್ದರಿಂದ ಜನ ಮಾತ್ರವಲ್ಲ ಜಾನುವಾರು, ಪಶು&ಪಗಳಿಗೂ ಜೀವಜಲದ ಸಮಸ್ಯೆ ಕಾಡಲಾರಂಭಿಸಿದೆ. ಇನ್ನು ದನಕರುಗಳ ಹೊಟ್ಟೆ ತುಂಬಿಸಲು ಮೇವಿಗಾಗಿ ಕೃಷಿಕರು ಪರದಾಡುವಂತಾಗಿದೆ.
ನಮ್ ಬೆಳಿ ಮಳಿ ಇಲ್ದೆ ಒಣಗ್ಲತುದ್, ರೈತರ ಮ್ಯಾಗ ಮಳಿದೇವ್ರು ಸಿಟ್ಟ ಆಗ್ಯಾನೋ ಏನೋ ಎಂದು ವರುಣ ದೇವನ ಒಲಿಸಿಕೊಳ್ಳಲು ಗ್ರಾಮೀಣ ಪ್ರದೇಶದ ಗುಡಿ&ಗುಂಡಾರಗಳಲ್ಲಿ ಪೂಜೆ, ಹೋಮ&ಹವನ, ಪಾರಾಯಣ, ಕಪ್ಪೆರಾಯನ ಮದುವೆ ಹೀಗೆ ಹತ್ತು ಹಲವು ರೀತಿಯಲ್ಲಿ ಕೃಷಿಕರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಎರಿ ಮಣ್ಣಿನ ಕರಿ ರ್ಯಾಗಡಿ ಹೊಲಗಳಿಗೆ ಸ್ವಲ್ಪ ಮಳಿ ಏನೂ ಆಗುದಿಲ್ರಿ, ಒಣ ಮಣ್ಣಿನಾಗ ಬಿತ್ತಿದ ಬೀಜಗಳಿಗೆ ಹುಳಗಳು ತಿನ್ನುತ್ತಿದ್ದವ್ರಿ ಎಂದು ನಿಡೇಬಾನ ಗ್ರಾಮದ ಬಾಲಾಜಿ ಕಾರಬಾರಿ ಗೋಳಿಟ್ಟರೆ, ೂಂಗಡಿ ತೊಯ್ಯುವಷ್ಟಬಿ ಮಳಿ ಬಿದ್ದಿಲ್ರಿ ಎನ್ನುತ್ತಾರೆ ಕುಂಟೆರ್ಸಿಸಿಯ ಸತೀಶ್ ಮಠ.
"
ಭಾಲ್ಕಿ ತಾಲೂಕಿನಾದ್ಯಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ಒಂದೆರಡು ದಿನಗಳಲ್ಲಿ ವರುಣದೇವ ಕೃಪೆ ತೋರದಿದ್ದರೆ ರೈತರ ಸ್ಥಿತಿ ಗಂಭೀರವಾಗಲಿದೆ. ಸಾಲಬಾಧೆಯಿಂದ ಒದ್ದಾಡಬೇಕಾಗುತ್ತದೆ.
— > ನಾಗೇಶ ಟೊಪಾರೆ ಪ್ರಗತಿಪರ ರೈತ