4 ದಿನ ಬಿರುಸಾಗಿ ಮಳೆಯಾಗಲಿದೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಅಂಡಮಾನ್ - ನಿಕೋಬಾರ್ ದ್ವೀಪದಲ್ಲಿ ತೇವಾಂಶ ಭರಿತ ಮೋಡದ ಕಾರಣ ರಾಜ್ಯದಲ್ಲಿ ಮುಂದಿನ 4 ದಿನ ಬಿರುಸಾಗಿ ಮಳೆಯಾಗಲಿದೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ. ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು ಮತ್ತು ವಿಜಯನಗರದಲ್ಲಿ ಏ.15ರಿಂದ ಏ.18ವರೆಗೆ ಬಿರುಗಾಳಿ ಸಹಿತ ವರ್ಷಧಾರೆಯಾಗಲಿದೆ. ಈ ಸಂದರ್ಭದಲ್ಲಿ ಕೆಲ ಜಿಲ್ಲೆಗಳಲ್ಲಿ ಜೋರಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ 4 ಜಿಲ್ಲೆಗಳಿಗೆ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.
ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮೇ 15ರಂದು ಮಳೆ ಸುರಿಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂದಿನ 2 ದಿನ ಸಾಧಾರಣ ಮಳೆಯಾಗಲಿದೆ.
ಪೂರಕ ವಾತಾವರಣ:ಬಂಗಾಳಕೊಲ್ಲಿಯ ದಕ್ಷಿಣ ಭಾಗ ಮತ್ತು ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಮುಂಗಾರು (ನೈಋತ್ಯ ಮಾನ್ಸೂನ್) ಮುನ್ನಡೆಯಲು ಪರಿಸ್ಥಿತಿ ಅನುಕೂಲಕರವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನ ಮಳೆ ಬೀಳಲಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದರು.