ಪ್ರಸಕ್ತ ತಿಂಗಳ ಕೊನೆಯ ವಾರದಲ್ಲಿ ಮಳೆ
ಬೆಂಗಳೂರು: ರಾಜ್ಯದ ಕರಾವಳಿ,ಮಲೆನಾಡಿನ ಭಾಗದಲ್ಲಿ ಪ್ರಸಕ್ತ ತಿಂಗಳ ಕೊನೆಯ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಪ್ರದೇಶಗಳಲ್ಲಿ ಮಳೆ ಅಭಾವ ಮುಂದುವರಿಯಲಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ಡಿ.ಸೆ.ನಿಂದ 7 ಡಿ.ಸೆ.ವರೆಗೆ ಉಷ್ಣಾಂಶ ಹೆಚ್ಚಳವಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬಿಸಿಗಾಳಿ,ತೇವಾಂಶ ಪರಿಸ್ಥಿತಿಗಳು ಹೆಚ್ಚಾಗುವ ಸಂಭವವಿದೆ.ಗರಿಷ್ಠ ತಾಪಮಾನದಲ್ಲಿ ರಾಯಚೂರು 38.4, ಕಲಬುರಗಿ 38.3 ಮತ್ತು ಬೀದರ್ 37.6 ಡಿ.ಸೆ.ಉಷ್ಣಾಂಶ ಮಂಗಳವಾರ ದಾಖಲಾಗಿದೆ. ಹಲವು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಮುಂದಿನ 5 ದಿನ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಇದೀಗ ರಾಜ್ಯದಲ್ಲಿ ‘ಎಲ್‌ನಿನೋ’ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಇದು ಮಳೆ ತಗ್ಗಿಸುವ ಮಾತ್ರವಲ್ಲದೆ, ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿಯೂ ಉಷ್ಣಾಂಶ ಹೆಚ್ಚಿಸಲಿದೆ. ಮಳೆ ಕ್ಷೀಣವಾದ ಬೆನ್ನಲ್ಲೇ ಹಲವು ವರ್ಷಗಳ ಬಳಿಕ ಪ್ರಸಕ್ತ ಸಾಲಿನ ಮಳೆಗಾಲದ ಋತುಮಾನದಲ್ಲಿ ರಾಜ್ಯದಲ್ಲೆಡೆ ದೀರ್ಘಾವಧಿ ಒಣಹವೆ ಕಾಣಿಸಿಕೊಳ್ಳುತ್ತಿದೆ ಎಂದರು.