ರಾಜಧಾನಿ ಕೆಲವೆಡೆ ಭಾನುವಾರ ಮಳೆ  
ರಾಜ್ಯ

ರಾಜಧಾನಿ ಕೆಲವೆಡೆ ಮಳೆ: ನಾಯಂಡಹಳ್ಳಿಯಲ್ಲಿ 13 ಮಿಮೀ ದಾಖಲು-Bangalore rain

ಬೆಂಗಳೂರು: ಮುಂಗಾರು ಆಗಮನ ಬೆನಲ್ಲೇ ರಾಜಧಾನಿ ಕೆಲವೆಡೆ ಭಾನುವಾರ ಮಳೆಯಾಯಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ 4.30ಕ್ಕೆ ಶುರುವಾದ ಮಳೆ ಕೆಲಕಾಲ ಸುರಿಯಿತು. ನಾಯಂಡಹಳ್ಳಿ 13, ಚಾಮರಾಜಪೇಟೆ 12 ಮತ್ತು ವಿಶ್ವೇಶ್ವರಯ್ಯಪುರದಲ್ಲಿ 11 ಮಿಮೀ ಸುರಿಯಿತು.
ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜೇಂದ್ರ ಮಾರುಕಟ್ಟೆ, ಶಾಂತಿನಗರ, ಜಯನಗರ, ಜೆ.ಪಿ. ನಗರ, ಬನಶಂಕರಿ, ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ ಮತ್ತು ಶೇಷಾದ್ರಿಪುರದಲ್ಲಿ ಸಾಧಾರಣ ವರ್ಷಧಾರೆಯಾಯಿತು. ನೀರಿನ ರಭಸಕ್ಕೆ ಕಾರು, ಬೈಕ್ ಸವಾರರು ತೊಂದರೆ ಅನುಭವಿಸಿದರು.
ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಕೆಲಕಾಲ ಪರದಾಡುವಂತಾಯಿತು. ಅಂಡರ್‌ಪಾಸ್, ಜಂಕ್ಷನ್‌ಗಳು ನೀರು ನಿಂತಿತ್ತು. ರಸ್ತೆ ಬದಿಗಳಲ್ಲಿ ಬೈಕ್ ನಿಲ್ಲಿಸಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಮುಂಭಾಗ ಆಶ್ರಯ ಪಡೆದರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಕಾಮಗಾರಿ ನಡೆಯುತ್ತಿದ್ದ ಸ್ಥಳಗಳಲ್ಲಿ ನೀರು ನಿಂತಿರುವುದು ಕಂಡುಬಂತು.
ನಗರದಲ್ಲಿ ಮುಂದಿನ 4 ದಿನ ಮೋಡ ಕವಿದ ವಾತಾವರಣ ಇರಲಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮಧ್ಯಮ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ ರಾಜಧಾನಿಯಲ್ಲಿ ಉಷ್ಣಾಂಶ ಇಳಿಮುಖವಾಗಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿ.ಸೆ.ಉಷ್ಣಾಂಶ ದಾಖಲಾಗಬಹುದು.