ಜಿಟಿಜಿಟಿ ಮಳೆ 
ರಾಜ್ಯ

ರಾಜ್ಯದ ಹಲವೆಡೆ ಜಿಟಿಜಿಟಿ ಮಳೆ : 2 ದಿನ ಮುಂದುವರಿಕೆ-cold

ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು (ಟ್ರಫ್​​​) ಹಾದುಹೋಗಿರುವ ಕಾರಣ ಬೆಂಗಳೂರು ನಗರ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೋಮವಾರ ಜಿಟಿಜಿಟಿ ಮಳೆಯಾಯಿತು. ಇನ್ನೂ ಕೆಲ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿತ್ತು.
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು,ಹಾಸನ, ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ವ್ಯಾಪ್ತಿಯ ಒಂದೆರೆಡು ಭಾಗಗಳಲ್ಲಿ ಮುಂದಿನ 2 ದಿನ ತುಂತುರು ಮಳೆ ಸುರಿಯಲಿದೆ. ಬೆಳಗಾವಿ, ವಿಜಯಪುರ, ವಿಜಯನಗರ, ಬೀದರ್, ಧಾರವಾಡ, ಗದಗ, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರಿನಲ್ಲಿ ಜ.28ವರೆಗೆ ಮೋಡ ಕವಿದ ವಾತಾವರಣ ಇರಲಿದೆ.
ತಾಪಮಾನ ಕುಸಿತ, ಮೋಡ ಕವಿದ ವಾತಾವರಣ ಮತ್ತು ತೇವಾಂಶ ಭರಿತ ಮೋಡ ಪರಿಣಾಮ ರಾಜ್ಯದಲ್ಲೆಡೆ ಚಳಿ ಪ್ರಮಾಣ ತುಸು ಹೆಚ್ಚಾಗಿದೆ. ಈ ವೇಳೆ ಶೀತಗಾಳಿ ಬೀಸುತ್ತಿದೆ. ರಾತ್ರಿ, ಮುಂಜಾನೆ ಇಬ್ಬನಿ ಸುರಿದು ಮಂಜುಮಯ ವಾತಾವರಣ ಕಂಡುಬರುತ್ತಿದೆ. ಚಳಿ ಮತ್ತು ಮಳೆ ರಕ್ಷಣೆಗೆ ಜನರು ಬೆಚ್ಚಗಿನ ಉಡುಪು ಧರಿಸಿ ಓಡಾಡಿದರು. ಕೆಲವರು ಹೊರಗಡೆ ಬಾರದೆ ಮನೆಯಲ್ಲಿಯೇ ಕಾಲ ಕಳೆದರು. ಬೀದಿಬದಿ ವ್ಯಾಪಾರಿಗಳಿಗೆ ಗ್ರಾಹಕರು ಇಲ್ಲದ ಕಾರಣ ಅಷ್ಟೇನೂ ವ್ಯಾಪಾರ ಇರಲಿಲ್ಲ.
ನಲುಗಿದ ಉತ್ತರ ಭಾರತ:
ಉತ್ತರ ಪ್ರದೇಶ, ಉತ್ತರಖಂಡ, ಹಿಮಾಚಲ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿ ಉತ್ತರ ಭಾರತದ ರಾಜ್ಯಗಳಲ್ಲಿ ಭಾರಿ ಹಿಮಪಾತವಾಗುತ್ತಿದೆ. ಇದರಿಂದಾಗಿ ಹಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದು, ಸಾವಿರಾರು ಮನೆಗಳು ಕತ್ತಲೆಯಲ್ಲಿ ಮುಳುಗಿವೆ. ಕೆಲ ರಾಜ್ಯಗಳಲ್ಲಿ ಮಳೆ ಮುಂದುವರಿದಿದೆ. ವಾಡಿಕೆಗಿಂತ 6-7 ಡಿ.ಸೆ. ತಾಪಮಾನ ಕುಸಿತದಿಂದ ಚಳಿ ತೀವ್ರತೆ ಇನ್ನಷ್ಟು ಜಾಸ್ತಿಯಾಗಿದೆ. ಆದ್ದರಿಂದ, ಅಲ್ಲಿನ ಭಾಗದ ಜನರು ಎಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಲಹೆ ಕೊಟ್ಟಿದೆ.
ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದೆ. ಒಂದರೆಡು ದಿನದ ಬಳಿಕ ಬಿಸಿಲಿನ ವಾತಾವರಣ ಶುರುವಾಗಲಿದೆ. ಗರಿಷ್ಠ, ಕನಿಷ್ಠ ತಾಪಮಾನದಲ್ಲಿ 2-3 ಡಿ.ಸೆ.ಉಷ್ಣಾಂಶ ಕುಸಿತವಾಗಿರುವುದು ಚಳಿ ಪ್ರಮಾಣ ಹೆಚ್ಚಿಸಿದೆ. ಉತ್ತರ ಭಾರತದ ವ್ಯಾಪ್ತಿಯ ರಾಜ್ಯಗಳಲ್ಲಿ ವಿಪರೀತ ಚಳಿ ಕಾಣಿಸಿಕೊಳ್ಳುತ್ತಿದೆ. ಆದರೆ, ಅಂತಹ ವಾತಾವರಣವೂ ದಕ್ಷಿಣ ಭಾರತದ ರಾಜ್ಯಗಳಿಲ್ಲ.
- ಸಿ.ಎಸ್.ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.