ರಾಜಧಾನಿಯ ಹಲವೆಡೆ ಶುಕ್ರವಾರ ಮಳೆ  
ರಾಜ್ಯ

ಬೆಂಗಳೂರಿನ ಹಲವೆಡೆ ಮಳೆ: ವಾಹನ ಸವಾರರ ಪರದಾಟ- Bangalore rain

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮತ್ತು ತೇವಾಂಶ ಭರಿತ ಮೋಡದ ಕಾರಣದಿಂದ ರಾಜಧಾನಿಯ ಹಲವೆಡೆ ಶುಕ್ರವಾರ ಮಳೆಯಾಗಿತ್ತು.
ದೊರೆಸನ್ನಿಪಾಳ್ಯ 22, ಪುಲಕೇಶಿನಗರ 20, ಮನೋರಾಮನಪಾಳ್ಯ 17, ರಾಜಮಹಲ್ ಗುಟ್ಟಹಳ್ಳಿ 17, ವಿಶ್ವೇಶ್ವರಪುರ 15, ಬಸವೇಶ್ವರನಗರ 13, ಹಂಪೆನಗರ 11 ಮತ್ತು ಚಾಮರಾಜಪೇಟೆ 10 ಮಿಮೀ ಮಳೆಯಾಗಿತ್ತು.
ಕಂಟೋನ್ಮೆಂಟ್‌ನಲ್ಲಿ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಸರಾಗವಾಗಿ ಹರಿಯುವ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆ ಅಪಾರಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಈ ವೇಳೆ ಸರಾಗವಾಗಿ ನೀರು ಹರಿಯುವಂತೆ ರಸ್ತೆ ಬದಿ ಕಟ್ಟಿದ ಕಸವನ್ನು ಪೊಲೀಸ್ ಸಿಬ್ಬಂದಿ ಸ್ವಚ್ಛಗೊಳಿಸಿದರು.
ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜೇಂದ್ರ ಮಾರುಕಟ್ಟೆ, ಶಾಂತಿನಗರ, ಜಯನಗರ, ಜೆ.ಪಿ. ನಗರ, ಜೆ.ಸಿ.ನಗರ, ಬನಶಂಕರಿ, ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ, ಶೇಷಾದ್ರಿಪುರದಲ್ಲಿ ಸಾಧಾರಣ ವರ್ಷಧಾರೆಯಾಯಿತು.ನೀರಿನ ರಭಸಕ್ಕೆ ಕಾರು, ಬೈಕ್ ಸವಾರರು ತೊಂದರೆ ಅನುಭವಿಸಿದರು.
ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಕೆಲಕಾಲ ಪರದಾಡಿದರು. ಅಂಡರ್‌ಪಾಸ್, ಜಂಕ್ಷನ್‌ಗಳು ನೀರು ನಿಂತಿತ್ತು. ರಸ್ತೆ ಬದಿಗಳಲ್ಲಿ ಬೈಕ್ ನಿಲ್ಲಿಸಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಮುಂಭಾಗ ಆಶ್ರಯ ಪಡೆದರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಕಾಮಗಾರಿ ನಡೆಯುತ್ತಿದ್ದ ಸ್ಥಳಗಳಲ್ಲಿ ನೀರು ನಿಂತಿರುವುದು ಕಂಡುಬಂತು. ಹಲವು ಮೈಸೂರು ರಸ್ತೆ, ತುಮಕೂರು ರಸ್ತೆ, ಹೆಬ್ಬಾಳ, ಕೋರಮಂಗಲ ಸೇರಿ ನಗರದ ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ನಿಧಾನಗತಿಯಲ್ಲಿ ಸಾಗಿದವು.
ನಗರದಲ್ಲಿ ಮುಂದಿನ 4 ದಿನ ಮೋಡ ಕವಿದ ವಾತಾವರಣ ಇರಲಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮಧ್ಯಮ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ ರಾಜಧಾನಿಯಲ್ಲಿ ಉಷ್ಣಾಂಶ ಇಳಿಮುಖವಾಗಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿ.ಸೆ.ಉಷ್ಣಾಂಶ ದಾಖಲಾಗಬಹುದು.