ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಂಗಾರು ವೈಫಲ್ಯದ ಪರಿಣಾಮ ಜಲ ಅಭಾವದಿಂದಾಗಿ ಈ ವರ್ಷ ರಾಜ್ಯದಲ್ಲಿ ಹಲವೆಡೆ ಗಣೇಶ ಮೂರ್ತಿಗಳ ವಿಸರ್ಜನೆಗೂ ಸಂಕಷ್ಟ ಎದುರಾಗಿದೆ. ಮಳೆ ಕೊರತೆಯಿಂದಾಗಿ ರಾಜ್ಯದ ಬಹುತೇಕ ಕಡೆ ಕೆರೆಕುಂಟೆ, ಕೊಳವೆಬಾವಿಗಳು ಬತ್ತಿವೆ. ಹೀಗಾಗಿ ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಬರ ಬರಸಿಡಿಲಾಗಿ ಎದುರಾಗಿದೆ. ಸಾಮಾನ್ಯವಾಗಿ ಭಾದ್ರಪದ ಮಾಸದಲ್ಲಿ ಮಳೆಯಾಗುತ್ತದೆ. ಆದರೆ, ಈ ವರ್ಷ ‘ಎಲ್ನಿನೋ’ ಪ್ರಭಾವ ಮುಂಗಾರಿನ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದಾಗಿ ಜೂನ್ನಿಂದಲೇ ಮಳೆ ಅಭಾವ ಕಾಡಲಾರಂಭಿಸಿದೆ. ಹೀಗಾಗಿ ಜಿಲ್ಲಾಡಳಿತ, ನಗರ ಪಾಲಿಕೆ, ಪಾಲಿಕೆಗಳು, ಪಟ್ಟಣ ಮತ್ತು ಗ್ರಾಪಂಗಳಿಗೆ ಮೂರ್ತಿಗಳ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾದ ಸ್ಥಿತಿ ನಿರ್ವಣವಾಗಿದೆ.
ರಾಜಧಾನಿಯಲ್ಲೂ ಕೊರತೆ: ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷ ಬೆಂಗಳೂರೊಂದರಲ್ಲೇ 10 ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿಯೂ ಗಲ್ಲಿಗಲ್ಲಿಗಳಲ್ಲಿ ಗಣೇಶ ಮೂರ್ತಿ ಇಡಲು ಸಿದ್ಧತೆ ನಡೆದಿದೆ. ಆದರೆ ಈ ಬಾರಿ ಮಳೆ ಇಲ್ಲದೆ ಗಣೇಶ ಮೂರ್ತಿ ವಿಸರ್ಜನೆಗೆ ಸಮಸ್ಯೆ ಉಂಟಾಗಿದೆ. ಮೂರ್ತಿಗಳನ್ನು ಒಣಗಿದ ಕೆರೆಯ ಮಣ್ಣಿನಲ್ಲಿ ಅಥವಾ ಖಾಲಿ ಜಾಗದಲ್ಲಿ ವಿಸರ್ಜಿಸುವ ಸ್ಥಿತಿ ಇದೆ. ಹೀಗಾದಲ್ಲಿ ನಂತರದ ದಿನಗಳಲ್ಲಿ ಆ ಮೂರ್ತಿಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ಧಾರ್ವಿುಕ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ. ಹಾಗಾಗಿ, ಪೂರ್ಣವಾಗಿ ನೀರಿರುವ ಜಾಗ ಅಥವಾ ಕಲ್ಯಾಣಿಗಳಲ್ಲಿ ಮಾತ್ರ ಮೂರ್ತಿಗಳನ್ನು ವಿಸರ್ಜಿಸುವಂತೆ ಜಿಬಿಎ ಮನವಿ ಮಾಡಿದೆ.
ಹೇಗಿದೆ ಕರ್ನಾಟಕದ ಪರಿಸ್ಥಿತಿ?
101 ತಾಲೂಕುಗಳು ಬರಪೀಡಿತ ಎಂದು ಘೋಷಣೆ
ಕೆಎಸ್ಎನ್ಡಿಎಂಸಿ ಪ್ರಕಾರ 182 ತಾಲೂಕಲ್ಲಿ ಬರ
ಈ ವರ್ಷ ರಾಜ್ಯದ ಶೇ.75 ಕೆರೆಗಳಲ್ಲಿ ನೀರು ಖಾಲಿ
ವಿಸರ್ಜನೆಗೆ ಹೀಗೆ ಮಾಡಿ
ನೀರಿನ ಅಭಾವ ಇದ್ದಲ್ಲಿ ಮನೆಯಲ್ಲೇ ದೊಡ್ಡ ಪಾತ್ರೆ/ ಬಕೆಟ್ನಲ್ಲಿ ನೀರು ತುಂಬಿಸಿ ವಿಸರ್ಜಿಸಿ
ಮೂರ್ತಿ ಸಂಪೂರ್ಣವಾಗಿ ಕರಗಿದ ಬಳಿಕ ಆ ಮಣ್ಣಿನ ನೀರನ್ನು ಗಿಡ ಅಥವಾ ತೋಟಕ್ಕೆ ಹಾಕಿ
ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗುವ ವಾಹನಗಳನ್ನು ಬಳಸಿಕೊಳ್ಳಿ
ಜೇಡಿಮಣ್ಣಿನಿಂದ ಮಾಡಿದ ಸಣ್ಣ ಗಾತ್ರದ ಮೂರ್ತಿಗಳಿಗೆ ಆದ್ಯತೆ ನೀಡಿ, ಹಾನಿಕಾರಕ ರಾಸಾಯನಿಕದಿಂದ ತಯಾರಿಸಿದ ಮೂರ್ತಿ ಬಳಸದಂತೆ ಎಚ್ಚರವಹಿಸಿ