ಕೆಂಭಾವಿಯಲ್ಲಿ ಭಾನುವಾರ ಸಂಜೆ ಸುರಿದ ಮಳೆಯಿಂದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣ ಮಳೆ ನೀರಿನಿಂದ ಕೆರೆಯಂತಾಗಿರುವುದು. 
ರಾಜ್ಯ

ರೈತರ ಮುಖದಲ್ಲಿ ಮಂದಹಾಸ ತಂದ ಮಳೆ

ಪ್ರಮುಖ ಮುಖ್ಯಾಂಶಗಳು

  • ಕೆಂಭಾವಿಯಲ್ಲಿ ಭಾನುವಾರ ಸಂಜೆ ಸುರಿದ ಮಳೆಯಿಂದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣ ಮಳೆ ನೀರಿನಿಂದ ಕೆರೆಯಂತಾಗಿರುವುದು.
ಕೆಂಭಾವಿ: ಭೂಮಿ ಉಳುಮೆ ಮಾಡಿ ಹದಿನೈದು ದಿನಗಳ ನಂತರ ಭಾನುವಾರ ಸಂಜೆ ಸುರಿದ ಅಲ್ಪ ಮಳೆ ರೈತರಲ್ಲಿ ಮಂದಹಾಸ ಮೂಡಿಸಿದೆ.
ಮೃಗಶಿರ ಪ್ರವೇಶಕ್ಕೆ ಬಹುತೇಕ ಹತ್ತಿ ಬಿತ್ತನೆ ಮಾಡಿದ್ದ ರೈತರು ಮಳೆ ಬಾರದೆ ಸಂಕಷ್ಟ ಎದುರಿಸುತ್ತಿದ್ದರು. ಭಾನುವಾರ ಸುರಿದ ಅಲ್ಪ ಮಳೆ ಭೂಮಿಯ ತೇವಾಂಶ ಹೆಚ್ಚಿಸಿದ್ದು ಬಿತ್ತನೆ ಮಾಡಿದ ಬೀಜ ಮೇಲೇಳುವ ಆಶಾಭಾವನೆ ತರಿಸಿದೆ.
ಪಟ್ಟಣ ಸೇರಿ ವಲಯದ ಹಲವು ರೈತರು ಈ ಬಾರಿ ಹೆಚ್ಚಾಗಿ ಹತ್ತಿ ಬಿತ್ತನೆ ಮಾಡಿದ್ದು ಮಳೆ ಕೊರತೆಯಿಂದ ಬಿತ್ತಿದ ಬೀಜಗಳು ಮೊಳಕೆ ಒಡೆಯದೆ ಹಾಳಾಗುವ ಸ್ಥಿತಿಗೆ ತಲುಪಿತ್ತು. ಮಳೆಗಾಗಿ ಮುಗಿಲು ನೋಡುತ್ತಾ ಕುಳಿತಿದ್ದ ರೈತರಿಗೆ ಈ ಮಳೆ ಅಲ್ಪ ಪ್ರಮಾಣದ ಖುಷಿ ತಂದಿದ್ದು ಇದು ಕೇವಲ ಪಟ್ಟಣ ವ್ಯಾಪ್ತಿಗೆ ಸೀಮಿತವಾದ ಮಳೆಯಾಗಿದೆ ಎನ್ನಲಾಗಿದೆ. ವಲಯದ ಮಲ್ಲಾ, ಯಕ್ತಾಪುರ ಭಾಗದ ಹಲವು ಗ್ರಾಮಗಳು ಇನ್ನೂ ಮಳೆಯಿಂದ ವಂಚಿತವಾಗಿದ್ದು ರೈತರು ಮಳೆಗಾಗಿ ನಿತ್ಯ ದಾರಿ ಕಾಯುವಂತಾಗಿದೆ.
ಸಂಜೆ ಸುರಿದ ಮಳೆಯಿಂದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ಬಸ್​ ನಿಲ್ದಾಣ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣ ಮಳೆ ನೀರಿನಿಂದ ಆವೃತವಾಗಿತ್ತು. ಸೋಮವಾರವೂ ಈ ಮಳೆ ಮುಂದುವರೆಯುವ ಲಕ್ಷಣಗಳಿದ್ದು, ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.