Railway station inspection for passenger safety 
ರಾಜ್ಯ

ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ನಿಲ್ದಾಣ ತಪಾಸಣೆ

ಬಂಗಾರಪೇಟೆ: ಪ್ರಯಾಣಿಕರ ಸುರಕ್ಷತೆ ಖಾತ್ರಿಪಡಿಸುವ ಉದ್ದೇಶದಿಂದ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಬಂಗಾರಪೇಟೆ ವೃತ್ತ ನಿರೀಕ್ಷಕ ರವಿಕುಮಾರ್​, ರೈಲ್ವೆ ಪೊಲೀಸ್​ ಹಾಗೂ ಪೊಲೀಸ್​ ಸಿಬ್ಬಂದಿ ವಿವಿಧೆಡೆ ತಪಾಸಣೆ ಮತ್ತು ಭದ್ರತಾ ಪರಿಶೀಲನೆ ನಡೆಸಿದರು.
ರೈಲ್ವೆ ನಿಲ್ದಾಣದಲ್ಲಿ ನಿರೀಕ್ಷಣಾ ಕೊಠಡಿಗಳು, ್ಲಾಟ್​ಫಾಮ್​ರ್, ಪ್ರಯಾಣಿಕರ ವಸ್ತುಗಳ ಮೇಲೆ ನಿಗಾ ವಹಿಸಲಾಯಿತು. ವಿಶೇಷವಾಗಿ ಸ್ವರ್ಣ ಪ್ಯಾಸೆಂಜರ್​ ರೈಲಿನಲ್ಲಿ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳ ಪರಿಶೀಲನೆ ಮಾಡಲಾಯಿತು.
ಪ್ರಯಾಣಿಕರಿಗೆ ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವಂತೆ, ಅಪರಿಚಿತ ವ್ಯಕ್ತಿಗಳಿಂದ ಯಾವುದೇ ವಸ್ತು&ಆಹಾರ ಸ್ವೀಕರಿಸದಂತೆ ಜಾಗೃತಿ ಮೂಡಿಸಲಾಯಿತು.
ಇನ್​ಸ್ಪೆಕ್ಟರ್​ ರವಿಕುಮಾರ್​ ಮಾತನಾಡಿ, ರೈಲು ಪ್ರಯಾಣದ ವೇಳೆ ಸರಕುಗಳ ಕಳವು, ಅಹಿತಕರ ಘಟನೆಗಳು, ಕಾನೂನುಬಾಹಿರ ಚಟುವಟಿಕೆ ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸಾರ್ವಜನಿಕರು ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಕಾರ್ಯಾಚರಣೆಯಿಂದ ರೈಲ್ವೆ ನಿಲ್ದಾಣದಲ್ಲಿ ಭದ್ರತೆ ಮತ್ತಷ್ಟು ಬಲಗೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪಾಸಣೆ, ಭದ್ರತಾ ಕ್ರಮಗಳು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಪೊಲೀಸ್​ ಇಲಾಖೆ ತಿಳಿಸಿದೆ.