ದೊಡ್ಡಬಳ್ಳಾಪುರ ತಾಲೂಕು ತಿರುಮಗೊಂಡಹಳ್ಳಿಯ ರೈಲ್ವೆ ಗೇಟ್ ಮುಚ್ಚಿರುವುದು.
ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ತಿರುಮಗೊಂಡಹಳ್ಳಿ ಬಳಿ ಹಾದು ಹೋಗಿರುವ ರೈಲ್ವೆ ಹಳಿಯಿಂದಾಗಿ ಪದೇಪದೆ ರೈಲ್ವೆಗೇಟ್ ಮುಚ್ಚುವುದರಿಂದ ವಾಹನ ಸವಾರರಿಗೆ ಬೆಂಗಳೂರಿನ ಟ್ರಾಫಿಕ್ನಂತೆ ಭಾಸವಾಗುತ್ತಿದ್ದು, ಕಿರಿಕಿರಿ ಅನುಭವಿಸುವಂತಾಗಿದೆ.
ದಿನಕ್ಕೆ ಹತ್ತಾರು ರೈಲುಗಳು ಸಂಚರಿಸುವುದರಿಂದ ರೈಲು ಬರುವ 5&10 ನಿಮಿಷ ಗೇಟ್ ಹಾಕಲಾಗುತ್ತದೆ. ಮತ್ತೆ ರೈಲು ದಾಟುತ್ತಿದ್ದಂತೆ ರಸ್ತೆಯ ಎರಡೂ ಬದಿ ನಿಲ್ಲಿಸಿದ್ದ ವಾಹನಗಳು ಒಮ್ಮೆಗೆ ಸಂಚರಿಸುವುದರಿಂದ ಟ್ರಾಫಿಕ್ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು, ಶಾಲಾ ಮಕ್ಕಳು ಹಾಗೂ ತುರ್ತು ಸೇವೆಗಳ ವಾಹನಗಳಿಗೆ ತೊಂದರೆಯಾಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸ್ಥಳಿಯರು ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಮನವಿ ಸಲ್ಲಿಸಿದರು ಪ್ರಯೋಜವಾಗಿಲ್ಲ. ಇದೇ ಮಾರ್ಗದಲ್ಲಿ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವಿದ್ದು, ಧಾರ್ಮಿಕ ಹಾಗೂ ನಾಗಾರಾಧನೆಯ ಪ್ರಮುಖ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಮಂಗಳವಾರ ಮತ್ತು ವಿವಿಧ ಹಬ್ಬ, ಅಮಾವಾಸ್ಯೆ, ಹುಣ್ಣಿಮೆ ವೇಳೆ ಜನ ಕಿಕ್ಕಿರಿದು ಸೇರುತ್ತಿದ್ದು, ದೇವಸ್ಥಾನ ಮುಟ್ಟುವಷ್ಟೊತ್ತಿಗೆ ಈ ರೈಲ್ವೆ ಗೇಟ್ನಲ್ಲೇ ಸಮಯ ವ್ಯರ್ಥವಾಗುತ್ತಿದೆ.
ಕೆಲಸಕ್ಕೆ ಹೋಗುವವರು ಬೆಳಗಿನ ಜಾವವೇ ದೇವಸ್ಥಾನಕ್ಕೆ ಬಂದು ಕೆಲಸಕ್ಕೆ ಹೋಗೋಣವೆಂದು ಬರುವವರು ರೈಲ್ವೆ ಗೇಟ್ನಲ್ಲಿ ಸಿಕ್ಕಿ ಹಾಕಿಕೊಂಡು ಕಿಲೋ ಮೀಟರ್ಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಭಾಗದಲ್ಲಿ ಹಲವು ಹಳ್ಳಿಗಳು ಇದ್ದು, ತುರ್ತು ವಾಹನಗಳು ರೈಲ್ವೆ ಗೇಟ್ ಬಳಿ ಸಿಲುಕಿ, ಗರ್ಭಿಣಿಯರು ಮತ್ತು ವೃದ್ಧರಿಗೆ ಆಸ್ಪತ್ರೆ ತಲುಪಲು ತೀವ್ರ ತಡವಾಗುವುದು, ಸೇರಿ ಶಾಲಾ&ಕಾಲೇಜು, ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಇದರಿಂದ ತರಕಾರಿ ಸಾಗಾಟ ತಡವಾಗಿ ರೈತರಿಗೆ ಆರ್ಥಿಕ ನಷ್ಟವಾಗುತ್ತದೆ. ಸಮಯಕ್ಕೆ ಸರಿಯಾಗಿ ತರಕಾರಿಗಳು ಮಾರುಕಟ್ಟೆ ತಲುಪದೆ ಹಾಳಾಗುತ್ತಿವೆ. ಈ ಸಮಸ್ಯೆಗೆ ಪರಿಹಾರವಾಗಿ ರೈಲ್ವೆ ಮೇಲ್ಸೇತುವೆ ನಿಮಾರ್ಣ ಅಗತ್ಯವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿರುಮಗೊಂಡನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಎಂದು ಮನವಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ರೈಲ್ವೆ ಗೇಟ್ ಮುಚ್ಚುವುದರಿಂದ ಸಾರ್ವಜನಿಕರಿಗೆ ನಿತ್ಯ ಸಾಕಷ್ಟು ತೊಂದರೆಯಾಗುತ್ತಿವೆ. ದೊಡ್ಡಬಳ್ಳಾಪುರ ಮತ್ತು ಬೆಂಗಳೂರಿನಲ್ಲಿರುವ ಕಚೇರಿಗಳಿಗೆ ತೆರಳಲು ಹಾಗೂ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
— > ಹನುಮಂತರಾಜು ಎಸ್ಡಿಎಂಸಿ ಅಧ್ಯಕ್ಷ ತಿರುಮಗೊಂಡಹಳ್ಳಿ
ದೇವಸ್ಥಾನ, ಮಠಗಳು ಅಥವಾ ಧಾರ್ಮಿಕ ಕೇಂದ್ರಗಳಿಗೆ ಹೋಗುವ ಮಾರ್ಗಗಳಲ್ಲಿ ಗಂಟೆಗಟ್ಟಲೆ ರೈಲ್ವೆಗೇಟ್ ಮುಚ್ಚುವುದರಿಂದ ಸಾಕಷ್ಟು ಸಮಯ ಕಾಯಬೇಕಾಗುತ್ತದೆ. ಇದರಿಂದ ದಟ್ಟಣೆ ಉಂಟಾಗಿ, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತದೆ. ರೈಲ್ವೆ ಇಲಾಖೆಯು ರೈಲುಗಳ ಸುರಕ್ಷತೆಗಾಗಿ ಗೇಟ್ಗಳನ್ನು ಮುಚ್ಚುವುದು ಅನಿವಾರ್ಯವಾದರೂ, ಸಾರ್ವಜನಿಕರ ಅನುಕೂಲಕ್ಕಾಗಿ ಇಂತಹ ಸ್ಥಳಗಳಲ್ಲಿ ಮೇಲ್ಸೇತುವೆ ಅಥವಾ ಸುರಂಗ ಮಾರ್ಗ ನಿರ್ಮಿಸುವುದು ಅಗತ್ಯ.
— > ವೆಂಕಟೇಶ್ ತೂಬಗೆರೆ