Rowdy Sheeters  
ರಾಜ್ಯ

320ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ದಾಳಿ

ನಗರದ ಐದು ವಲಯ ವ್ಯಾಪ್ತಿಯಲ್ಲಿ ತಪಾಸಣೆ, ಆರ್.ಟಿ.ನಗರ ರೌಡಿ ಮನೆಯಲ್ಲಿ 8.5 ಲೀಟರ್ ಮದ್ಯ ಜಪ್ತಿ

ಬೆಂಗಳೂರು: ನಗರದಲ್ಲಿ ಪ್ರತ್ಯೇಕ ರೌಡಿ ನಿಗ್ರಹ ಪಡೆ ರಚನೆಯಾದ ಬೆನ್ನಲ್ಲೇ 320ಕ್ಕೂ ಹೆಚ್ಚು ರೌಡಿಶೀಟರ್‌ಗಳು ಹಾಗೂ ಹಳೇ ರೌಡಿಗಳ ಮನೆ ಮೇಲೆ ಭಾನುವಾರ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಮುಖ್ಯ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಸೂಚನೆ ಮೇರೆಗೆ ರೌಡಿ ನಿಗ್ರಹ ಪಡೆ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಕೇಂದ್ರ, ಪಶ್ಚಿಮ, ಉತ್ತರ, ಪೂರ್ವ ಮತ್ತು ದಕ್ಷಿಣ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ 320ಕ್ಕೂ ಹೆಚ್ಚು ರೌಡಿಶೀಟರ್‌ಗಳು ಹಾಗೂ ಎಂಓಗಳ ಮನೆಗಳನ್ನು ಶೋಧಿಸಿದರು. ಆಯಾ ವಿಭಾಗದ ಪೊಲೀಸ್ ಆಯುಕ್ತರ ನೇತೃತ್ವದಲ್ಲೇ ದಾಳಿ ನಡೆಸಲಾಯಿತು.

ರೌಡಿಶೀಟರ್‌ಗಳು ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸಗಳು, ಅವರ ವಿರುದ್ಧ ದಾಖಲಾಗಿರುವ ಹಳೇ ಪ್ರಕರಣಗಳು, ನ್ಯಾಯಾಲಯಕ್ಕೆ ಹಾಜರಾಗದೆ ವಾರೆಂಟ್, ಪ್ರೊಕ್ಲೋಮೇಷನ್, ಎಲ್‌ಪಿಆರ್ (ಲಾಂಗ್ ಪೆಂಡಿಂಗ್ ರಿಪೋರ್ಟ್) ಆಗಿರುವ ಬಗ್ಗೆ ಪರಿಶೀಲಿಸಿದರು. ಬಳಿಕ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಲಾಯಿತು. ಇದೇ ವೇಳೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಮತ್ತು ಅಪರಾಧಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಯಿತು.

ಕಾರ್ಯಾಚರಣೆಯ ಭಾಗವಾಗಿ ಹಳೇ ಅಪರಾಧಿಗಳು, ರೌಡಿಶೀಟರ್‌ಗಳ ಮೇನೆಗಳ ಮೇಲೂ ದಾಳಿ ನಡೆಸಿ, ಅವರ ಸದ್ಯದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ದಾಳಿ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬೀಟ್ ಹೆಚ್ಚಳಕ್ಕೆ ಸೂಚನೆ:

ರೌಡಿಶೀಟರ್‌ಗಳು ಹಾಗೂ ಹಳೇ ಎಂಓಗಳಿರುವ ಪ್ರದೇಶಗಳು ಹಾಗೂ ಸಮೀಪದ ಏರಿಯಾಗಳಲ್ಲಿ ಬೀಟ್ ಪೊಲೀಸಿಂಗ್ ಹೆಚ್ಚಳ ಮಾಡಬೇಕು. ರಾತ್ರಿ ಗಸ್ತು, ಹೊಯ್ಸಳ ಗಸ್ತು ಅಧಿಕ ಮಾಡುವುದರ ಜತೆಗೆ, ಠಾಣಾಧಿಕಾರಿಗಳು, ಪಿಎಸ್‌ಐ ಮಾತ್ರವಲ್ಲದೆ, ಎಸಿಪಿ ಹಂತದ ಅಧಿಕಾರಿಗಳು ಕೂಡ ಬೀಟ್‌ಗಳನ್ನು ನಿಯೋಜಿಸಬೇಕು. ಇದರೊಂದಿಗೆ ನಗರದ ಪ್ರತಿಯೊಂದು ಏರಿಯಾದಲ್ಲೂ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆಯೇ? ಎಂದು ಪರಿಶೀಲಿಸಿ, ರೌಡಿಶೀಟರ್‌ಗಳ ಹಿಂದಿನ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದು ಅವರಿಗೂ ಕಾನೂನಿನ ಬಿಸಿ ಮುಟ್ಟಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇತ್ತೀಚೆಗೆ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಚಿಸಿದ ಬೆನ್ನಲ್ಲೇ ನಗರ ಪೊಲೀಸರು ರೌಡಿ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ರೌಡಿ ಮನೆಯಲ್ಲಿ 8.5 ಲೀಟರ್ ಮದ್ಯ ವಶಕ್ಕೆ

ಉತ್ತರ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ಸೇರಿ 172 ಮಂದಿ ಭಾಗವಹಿಸಿದ್ದರು. ಈ ವೇಳೆ 347 ವಾಹನಗಳ ತಪಾಸಣೆ ನಡೆಸಲಾಯಿತು. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳ ತಪಾಸಣೆ ಬಿಗಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದ 53 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಯೊಬ್ಬರ ಮನೆಯ ಪರಿಶೀಲನೆ ವೇಳೆ ಪತ್ತೆಯಾದ 8.5 ಲೀಟರ್ ಮದ್ಯದ ಬಾಟಲಿ ವಶಪಡಿಸಿಕೊಂಡು, ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.