- * ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳಿಂದ ಆಹಾರ ಮಾದರಿಗಳ ಪರಿಶೀಲನೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ವ್ಯಾಪ್ತಿಯ ತಾರಾ ಹೋಟೆಲ್‌ಗಳ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿದ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು, ನೈರ್ಮಲ್ಯ ಮತ್ತು ಆಹಾರದ ಮಾದರಿಗಳನ್ನು ಪರಿಶೀಲಿಸಿದರು. ಈ ವೇಳೆ ಅವಧಿ ಮೀರಿದ, ಕಳಪೆ ಗುಣಮಟ್ಟದ ಆಹಾರ ಮಾದರಿಗಳು ಪತ್ತೆಯಾಗಿವೆ.
ನಗರದ 3 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ಆರಂಭಿಸಲಾಗಿದ್ದು, ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಅವರು ಜಿಲ್ಲಾವರು ಅಧಿಕಾರಿಗಳ ತಂಡ ರಚಿಸಿ, ಪರಿಶೀಲನೆಗೆ ಸೂಚಿಸಿದ್ದರು.
ಅದರಂತೆ ಅಧಿಕಾರಿಗಳ ತಂಡವು ಶುಕ್ರವಾರ ಬೆಂಗಳೂರು ನಗರ ಜಿಲ್ಲೆ ಹಾಗೂ ಜಿಬಿಎ ವ್ಯಾಪ್ತಿಯ ತಾರಾ ಹೋಟೆಲ್‌ಗಳಲ್ಲಿ ಅಡುಗೆ ಕೊಣೆ, ದಾಸ್ತಾನು ಕೇಂದ್ರ, ಶುಚಿತ್ವದ ಜತೆಗೆ ಆಹಾರದ ಮಾದರಿಗಳನ್ನು ಪರಿಶೀಲಿಸಿತು. ಕೊಳೆತ ತರಕಾರಿಗಳು, ಹೆಪ್ಪುಗಟ್ಟಿದ್ದ ಮಾಂಸ, ಅವಧಿ ಮೀರಿದ ಹಾಲಿನ ಮಾದರಿಗಳು ಸೇರಿ ಕಳಪೆ ಗುಣಮಟ್ಟದ ಆಹಾರ ಮಾದರಿಗಳು ಪತ್ತೆಯಾಗಿವೆ. ಈ ವೇಳೆ ಸಂಗ್ರಹಿಸಿದ ಕಳಪೆ ಗುಣಮಟ್ಟದ ಆಹಾರ ಮಾದರಿಗಳನ್ನು ವಿಶ್ಲೇಷಣೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದವರಿಗೆ ಕಾನೂನಿನಡಿ ದಂಡ, ಪರವಾನಗಿ ರದ್ದತಿ ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಪರಿಶೀಲನೆ ವೇಳೆ ನೈರ್ಮಲ್ಯದ ಬಗ್ಗೆಯೂ ಸ್ವಚ್ಛತೆ ಕಾಯ್ದುಕೊಳ್ಳದವರಿಗೆ ಎಚ್ಚರಿಕೆ ನೀಡಲಾಗಿದೆ. ಕಳಪೆ ಗುಣಮಟ್ಟದ, ಅವಧಿ ಮೀರಿದ ಆಹಾರ ವಿತರಣೆಯಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಆಯುಕ್ತ ಕೆ. ಶ್ರೀನಿವಾಸ ತಿಳಿಸಿದ್ದಾರೆ.
ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಜನರು ಹೋಟೆಲ್‌ಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಆಹಾರ ತಯಾರಿಕೆಯಲ್ಲಿ ಬಣ್ಣಗಳು ಹಾಗೂ ಕೆಡದಂತೆ ಇಡಲು ಬಳಸುವ ರಾಸಾಯನಿಕ ಎಲ್ಲಿಂದ ಬರುತ್ತವೆ? ಎಷ್ಟು ಬಳಸುತ್ತಾರೆ ಎಲ್ಲ ಸಂಗತಿಗಳು ತಿಳಿಯಬೇಕು. ಆಗ ಅಲ್ಲಿ ತಿನ್ನಬೇಕೊ ಬೇಡವೊ ಎನ್ನುವುದನ್ನು ಜನರೇ ನಿರ್ಧರಿಸುತ್ತಾರೆ. ಒಟ್ಟಾರೆ ಜನರ ಆರೋಗ್ಯ ರಕ್ಷಣೆ ನಮ್ಮ ಉದ್ದೇಶ.
— - ಆರೋಗ್ಯ ಸಚಿವ ಯು.ಟಿ. ಖಾದರ್