ರಾಯಚೂರು ಕೃಷಿ ವಿಜ್ಞಾನಗಳ ವಿವಿ ಆವರಣದಲ್ಲಿ ಉತ್ಸವ ನೋಡಲು ಹರಿದುಬಂದ ಜನಸಾಗರ.
- ಉತ್ಸವ ಆಯೋಜಕರು ಫುಲ್‌ಖುಷ್
- ಮಹಿಳೆಯರು-ಮಕ್ಕಳದು ಸಿಂಹಪಾಲು
ಎರಡು ದಶಕಗಳ ಬಳಿಕ ಆಯೋಜನೆಗೊಂಡ ರಾಯಚೂರು ಜಿಲ್ಲಾ ಉತ್ಸವದಲ್ಲಿ ಜನಸಾಗರವೇ ಹರಿದುಬಂದಿತು. ಶನಿವಾರ ವೀಕ್‌ಎಂಡ್ ಆಗಿದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಕೃಷಿ, ಆಹಾರ ಮೇಳ ಮಾತ್ರವಲ್ಲ ವಿವಿ ಆವರಣದಲ್ಲಿ ನಡೆದ ಎಲ್ಲ ಕಾರ್ಯಕ್ರಮದಲ್ಲೂ ಪ್ರೇಕ್ಷಕರು ತುಂಬಿ ತುಳುಕುತ್ತಿದ್ದರು.
ನಗರದ ಅಸ್ಕಿಹಾಳದಿಂದ ಜಿಲ್ಲಾಧಿಕಾರಿ ಮನೆಯವರೆಗೆ 3-4 ಕಿಮೀ ಹೆದ್ದಾರಿಯ ಎರಡೂಕಡೆ ಸಾವಿರಾರು ವಾಹನಗಳು ಜಮಾವಣೆ ಗೊಂಡಿದ್ದವು. ನಾಲ್ಕು ಪ್ರವೇಶ ದ್ವಾರಗಳಲ್ಲಿ ಹೋಗಿ ಬರುವ ಜನರ ಸಂಖ್ಯೆ ಅಧಿಕವಿತ್ತು. ಮತ್ಸೃಮೇಳದಿಂದ ಮುಖ್ಯ ವೇದಿಕೆವರೆಗೆ ಒಂದೂವರೆ ಕಿಮೀವರೆಗೆ ಜನರು ಒಬ್ಬೊರಿಗೊಬ್ಬರು ಕಾಲುತುಳಿವಂತಿದ್ದರು. ಮಹಿಳಾ ಸಮಾಜ, ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ, ಕ್ರೀಡಾಂಗಣದ ಕಡೆ ಜನರು ಆಸಕ್ತಿತೋರದೆ ವಿವಿ ಆವರಣದಲ್ಲೇ ಬೀಡುಬಿಟ್ಟಿದ್ದರು.
ನಗರ ಮಾತ್ರವಲ್ಲ ಜಿಲ್ಲೆಯ ವಿವಿಧ ಶಾಲೆಯ ಶಿಕ್ಷಕರು ಮಕ್ಕಳನ್ನು ಕರೆತಂದು ಎಲ್ಲ ಸ್ಟಾಲ್‌ಗಳ ಪರಿಚಯ ಮಾಡಿಸಿದರು. ಯುವತಿಯರು, ಮಹಿಳೆಯರೇ ಹೆಚ್ಚಿದ್ದರು. ಅಲಂಕಾರಿಕ ವಸ್ತುಗಳ ಖರೀದಿ, ಕೃಷಿ ಉತ್ಪನ್ನಗಳ ಮಾಹಿತಿ, ಬಟ್ಟೆ, ಆಟಿಕೆ ಸಾಮಗ್ರಿ, ಕುರುಕಲು ತಿನಿಸಿಗಳಿಗೆ ಮಕ್ಕಳು, ಮಹಿಳೆಯರು ಆಕರ್ಷಿತರಾದರು. ಯುವಕ, ಯುವತಿಯರು ಫೋಟೋ ಜತೆಗೆ ಸೆಲ್ಫಿಗೆ ಮೊರೆಹೋಗಿದ್ದು, ಕೃಷಿ ಉತ್ಪನ್ನಗಳು, ಪ್ರವೇಶದ್ವಾರ, ಮತ್ಸ್ಯ ಮೇಳ ಮುಂದೆನಿಂತು ಫೋಟೋಗೆ ಫೋಸ್ ನೀಡಿದರು.
ಉತ್ಸವಕ್ಕೆ ನಿರೀಕ್ಷೆಮೀರಿ ಜನರ ಸ್ಪಂದನೆ, ಮೇಳದಲ್ಲಿ ಭಾಗವಹಿಸುವಿಕೆ ನೋಡಿ ಜಿಲ್ಲಾಡಳಿತ, ಸಚಿವರು ಫುಲ್‌ಖುಷಿಯಾಗಿದ್ದಾರೆ. ಅಧಿಕಾರಿಗಳು ಅಂದುಕೊಂಡಂತೆ ಎಲ್ಲ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದು ಸ್ವಚ್ಛತೆಯಿಂದ ಭದ್ರತೆವರೆಗೆ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಕಾರ್ಯಕ್ರಮ ನಿರ್ವಹಣೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ಸವ ನೋಡಬಂದನಾ ಸೂರ್ಯ?
ಎರಡು ದಿನಗಳಿಂದ ನಗರದಲ್ಲಿ ವಿಪರೀತ ಬಿಸಿಲಿದ್ದು, ಸೆಕೆ ಜನರನ್ನು ಹೈರಾಣಾಗುವಂತೆ ಮಾಡಿತು. 35ಡಿಗ್ರಿ ಉರಿಬಿಸಿಲ ನಡುವೆ ಜನರು ಉತ್ಸವಕ್ಕೆ ಉತ್ಸಾಹದಿಂದಲೇ ಬಂದಿದ್ದರು. ಬಹುತೇಕ ವಾಹನಗಳನ್ನು ದೂರದಲ್ಲೇ ತಡೆದಿದ್ದರಿಂದ ಒಂದೂವರೆ ಕಿಮೀವರೆಗೆ ಜನರು ಪಾದಯಾತ್ರೆ ಮಾಡಿದರು.
ಮಕ್ಕಳು, ವೃದ್ಧರು, ಮಹಿಳೆಯರಿಗೆ ಬಿಸಿಲಿನ ಶಾಖ ತಟ್ಟಿದ್ದು ತಂಪುಪಾನೀಯ, ಕಲ್ಲಂಗಡಿ, ನೀರಿನ ಮೊರೆ ಹೋದರು. ಎರಡನೇ ವೇದಿಕೆ, ಆಹಾರ ಮೇಳ, ಮತ್ಸೃಮೇಳಕ್ಕೆ ಮಾತ್ರ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಉಳಿದಂತೆ ಮುಖ್ಯವೇದಿಕೆ, ಕಸ್ತಿ ಅಖಾಡ, ಕೃಷಿಮೇಳ, ವಿವಿಧ ಸ್ಟಾಲ್‌ಗಳಲ್ಲಿ ನೆರಳಿರದೆ ಜನರು ಬಿಸಿಲಿನಲ್ಲೇ ನಿಂತು ನೋಡಿ ಸಂಭ್ರಮಿಸಿದರು. ವಿಪರೀತ ಉರಿಬಿಸಿಲು ನೋಡಿದರೆ ಸೂರ್ಯ ರಾಯಚೂರು ಉತ್ಸವ ನೋಡಲು ಬಂದನಾ ಎನ್ನುವಂತೆ ಬಾಸವಾಯಿತು.