CM Siddaramaiah | ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ 
ರಾಜ್ಯ

CM Siddaramaiah | ಸಿಎಂ ಸಿದ್ದರಾಮಯ್ಯ ಭೇಟಿಗೆ ಸಮಯ ನೀಡಿದ ರಾಹುಲ್​ ಗಾಂಧಿ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ, ಇಂದು ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಧ್ಯಾಹ್ನ 3.45 ಕ್ಕೆ ಸಮಯ ನೀಡಿದ್ದಾರೆ.
ಕಳೆದ ಎರಡ್ಮೂರು ತಿಂಗಳುಗಳಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದ್ದು, ಇತ್ತ ಅನೇಕ ಸಚಿವಾಕಾಂಕ್ಷಿಗಳು ಸಂಪುಟ ಸೇರಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಕಳೆದ ಬಾರಿ ದೆಹಲಿಗೆ ತೆರಳಿದ್ದ ಸಿಎಂ, ರಾಹುಲ್​ ಭೇಟಿ ಮಾಡಲು ಇಚ್ಛಿಸಿದ್ದರು, ವರಿಷ್ಠರು ಬಿಹಾರ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸಮಯ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಇಂದು ಮುಖ್ಯಮಂತ್ರಿಗಳಿಗೆ, ರಾಹುಲ್​ ಗಾಂಧಿ ಐದು ನಿಮಿಷ ಸಮಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈ ವೇಳೆ ಸಿಎಂ ಪ್ರಮುಖವಾಗಿ ಸಂಪುಟ ಪುನಾರಚನೆಯ ಕುರಿತಾಗಿ ಮಾತನಾಡುವ ಸಾಧ್ಯತೆ ಇದೆ. ಇಂದು (ಶನಿವಾರ ನ 15) ರಾತ್ರಿ ಹಿರಿಯ ವಕೀಲರಾದ ಕಪಿಲ್ ಸಿಬಲ್​​​ರ 'ದಿಲ್ ಸೆ ವಿತ್ ಕಪಿಲ್ ಸಿಬಲ್' ಪಾಡ್‌ಕ್ಯಾಸ್ಟ್‌ನ 100 ನೇ ಸಂಚಿಕೆಯಲ್ಲಿ ಸಿಎಂ ಭಾಗವಹಿಸಲಿದ್ದು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೆಲವು ಸಚಿವರು ಉಪಸ್ಥಿತರಿರುವ ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭೇಟಿಗೂ ಸಮಯ ಕೇಳಿದ್ದಾರೆ ಎನ್ನಲಾಗಿದ್ದು, ಇತ್ತೀಚಿನ ಪ್ರವಾಹ ಮತ್ತು ಮಳೆಯಿಂದಾಗಿರುವ ಬೆಳೆ ನಷ್ಟಕ್ಕೆ ಪರಿಹಾರ ಬಿಡುಗಡೆಗೆ ಮನವಿ ಮಾಡಲಿದ್ದಾರೆ. ಇದೇ ವೇಳೆ ಮೇಕೆದಾಟು ಮತ್ತು ಮಹದಾಯಿ ಸೇರಿದಂತೆ ಅನೇಕ ಜಲ ವಿವಾದದ ವಿಷಯಗಳನ್ನು ಪ್ರಸ್ತಾಪಿಸುವ ಸಾಧ್ಯತೆಗಳಿವೆ.