ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
- ಶ್ರೀರಾಮ ದೇವರ ಗುಡ್ಡದ ತಪ್ಪಲಿನಲ್ಲಿರುವ
- ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನ
ಗುಂಡ್ಲುಪೇಟೆ: ಪಟ್ಟಣದ ಶ್ರೀರಾಮ ದೇವರ ಗುಡ್ಡದ ತಪ್ಪಲಿನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಆ.29 ರಿಂದ 31 ರವರೆಗೆ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷೆ ರಾಜೇಶ್ವರಿ ಚಂದ್ರಶೇಖರ್ ತಿಳಿಸಿದ್ದಾರೆ.
ಆ.29ರಂದು ಪೂರ್ವಾರಾಧನೆ, 30ರಂದು ಮಧ್ಯಾರಾಧನೆ, 31ರಂದು ಉತ್ತರಾಧನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಯರ ಮೃತ್ತಿಕಾ ಬೃಂದಾವನದಲ್ಲಿ ಅಭಿಷೇಕ, ವಿಶೇಷ ಅಲಂಕಾರ, ಗೋಪೂಜೆ, ಧ್ವಜಾರೋಹಣ, ಶ್ರೀಲಕ್ಷ್ಮೀಪೂಜೆ, ಧನಧಾನ್ಯಪೂಜೆ, ಸ್ವಸ್ತಿವಾಚನ, ಕನಕಾಭಿಷೇಕ, ತುಳಸಿ ಅರ್ಚನೆ, ಗುರುರಾಯರಿಗೆ ಪಾದಾಪೂಜೆ, ಪಂಚಾಮೃತ ಅಭಿಷೇಕ, ಗಣಪತಿ ಹೋಮ, ಶ್ರೀ ಲಕ್ಷ್ಮಿನಾರಾಯಣ ಹೋಮ ನೆರವೇರಲಿವೆ.
ಇದೇ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಶಾಲೆಯ ಆಯ್ದ ಮಕ್ಕಳಿಗೆ ಸ್ಕಾಲರ್‌ಶಿಪ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಠದ ಆಡಳಿತ ಮಂಡಳಿ ವತಿಯಿಂದ ಮಠಕ್ಕೆ ಬರುವ ಭಕ್ತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದ ವಿತರಣೆ ಮಾಡಲಾಗುತ್ತದೆ. ಕಾರ್ಯಕ್ರಮ ನಡೆಯುವ ದಿನದಂದು ದಾಸರ ಪದಗಳ ಗಾನಾಮೃತ, ಭರತನಾಟ್ಯ, ದಾಸವಾಣಿ, ಹರಿದಾಸರ ದೇವರನಾಮಗಳ ಗಾಯನ ನಡೆಯಲಿದೆ. ಆದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.