- ದೇವನಹಳ್ಳಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದಿದ್ದ ರ‍್ಯಾಗಿಂಗ್
- ಮೂರು ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು
- 22 ವಿದ್ಯಾರ್ಥಗಳ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದಿದ್ದ ರ‍್ಯಾಗಿಂಗ್ (Ragging) ಮತ್ತು ದೈಹಿಕ ಹಲ್ಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನೀಡಿದ ದೂರಿನ ಮೇರೆಗೆ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಬಿಲಾಲ್, ಮೊಹಮ್ಮದ್ ನೌಶಾದ್ ಮತ್ತು ಅಫ್ಜಲ್ ಎಂದು ಗುರುತಿಸಲಾದ ಮೂವರು ಶಂಕಿತರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
22 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್
ಎಫ್‌ಐಆರ್‌ನಲ್ಲಿ ಒಟ್ಟು 22 ವಿದ್ಯಾರ್ಥಿಗಳ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳು ಬಿ.ಫಾರ್ಮಾ, ನರ್ಸಿಂಗ್, ಡಿಪ್ಲೊಮಾ ವಿಜ್ಞಾನ, ವೈದ್ಯಕೀಯ ಇಮೇಜಿಂಗ್ ತಂತ್ರಜ್ಞಾನ (ಎಂಐಟಿ) ಮತ್ತು ಭೌತಚಿಕಿತ್ಸೆಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಎಫ್‌ಐಆರ್ ಪ್ರಕಾರ, ಆರೋಪಿಗಳು ಕ್ಯಾಂಪಸ್‌ನೊಳಗೆ ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಅವರ ಆದೇಶಗಳನ್ನು ಪಾಲಿಸುವಂತೆ ಒತ್ತಾಯಿಸುತ್ತಿದ್ದರು. ಹಿರಿಯ ವಿದ್ಯಾರ್ಥಿಗಳು ಸಿಗರೇಟ್ ಮತ್ತು ಮದ್ಯ(ಸರಾಯಿ)ಗಳನ್ನು ತರಲು ಹಾಗೂ ತಮ್ಮ ಪುಸ್ತಕಗಳನ್ನು ಕೊಂಡೊಯ್ಯಲು ಒತ್ತಾಯಿಸುತ್ತಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿಗಳು ಪ್ರವೇಶ ಉಸ್ತುವಾರಿ ಮಾಧವನ್‌ಗೆ ದೂರು ನೀಡಿದರು. ಮಾಧವನ್ ಹಿರಿಯ ವಿದ್ಯಾರ್ಥಿಗಳಿಗೆ ಅಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿದ್ದರು.
ಆದರೆ, ಜನವರಿ 15 ರಂದು ಸಂಜೆ 5 ಗಂಟೆ ಸುಮಾರಿಗೆ ಹಿರಿಯ ವಿದ್ಯಾರ್ಥಿಗಳು ಮತ್ತೆ ಕಿರಿಯ ವಿದ್ಯಾರ್ಥಿಗಳಿಗೆ ತೊಂದರೆ ಕೊಡುವುದನ್ನು ಪುನರಾರಂಭಿಸಿದರು ಎಂದು ಆರೋಪಿಸಲಾಗಿದೆ. ಜೂನಿಯರ್‌ಗಳು ಮತ್ತೊಮ್ಮೆ ಮಾಧವನ್‌ಗೆ ದೂರು ನೀಡಿದರು, ಅವರು ರಾತ್ರಿ 9 ಗಂಟೆ ಸುಮಾರಿಗೆ ಕಾಲೇಜಿನ ಹಿಂದೆ ಇರುವ ಚಹಾ ಅಂಗಡಿಯಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಭೇಟಿಯಾಗಲು ಮಾಧವನ್ರೊಂದಿಗೆ ಬಂದರು.
ಸಮಸ್ಯೆಯನ್ನು ಬಗೆಹರಿಸುವ ಬದಲು, ಹಿರಿಯ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳು ಮತ್ತು ಮಾಧವನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಲಾಲ್ ಎಂಬ ಜೂನಿಯರ್ ವಿದ್ಯಾರ್ಥಿಯೊಬ್ಬನ 32 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ರಾಡ್, ದೊಣ್ಣೆಗಳಿಂದ ಹಲ್ಲೆ
ಹಿರಿಯ ವಿದ್ಯಾರ್ಥಿಗಳ ಜತೆ ಇದ್ದ ನವೀನ್ ಎಂಬ ಹೊರಗಿನ ವ್ಯಕ್ತಿ ರಾಡ್, ದೊಣ್ಣೆ ಮತ್ತು ಕಲ್ಲುಗಳನ್ನು ಬಳಸಿ ಹಿರಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ,(ಏಜನ್ಸೀಸ್).