ರಬಕವಿ ದಲಾಲ ಪರಿವಾರದ ವೀರರಾಣಿ ಚನ್ನಮ್ಮ ಫಾರ್ಮ್ ಹೌಸ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಹಾದೇವ ಧೂಪದಾಳ ಮಾತನಾಡಿದರು. ರಾಮಣ್ಣ ಹುಲಕುಂದ, ಮಹಾದೇವ ಧೂಪದಾಳ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ ಇತರರಿದ್ದರು. 
ರಾಜ್ಯ

19ಕ್ಕೆ ರಬಕವಿ ಸಂಪೂರ್ಣ ಬಂದ್‌ಗೆ ನಿರ್ಧಾರ

ಬಸವರಾಜ ಭೂಷಣ್ಣವರ
ರಬಕವಿ/ಬನಹಟ್ಟಿ: ಅಥಣಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಜನತೆಗೆ ಅನುಕೂಲವಾಗಲಿ ಎಂದು 2017ರಲ್ಲಿ ಕಾರ್ಯಾರಂಭಗೊಂಡ ರಬಕವಿಯ ಮಹಿಷವಾಡಗಿ ಸೇತುವೆ ಕಾಮಗಾರಿ ಹತ್ತು ವರ್ಷಗಳಾದರೂ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿರುವ ಹಿನ್ನೆಲೆ ಕಾಮಗಾರಿ ವಿಳಂಬ ವಿರುದ್ಧ ಮತ್ತೊಮ್ಮೆ ಮೇ 19ರಂದು ಸಂಪೂರ್ಣ ರಬಕವಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ರಬಕವಿ ನಗರದ ಹಿರಿಯರಾದ ಮಹಾದೇವ ಧೂಪದಾಳ ತಿಳಿಸಿದರು.
ರಬಕವಿ ದಲಾಲ ಪರಿವಾರದ ವೀರರಾಣಿ ಚನ್ನಮ್ಮ ಫಾರ್ಮಹೌಸ್‌ನಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ವಿಜಯವಾಣಿ’ ದಿನಪತ್ರಿಕೆ ಮೇ 13ರಂದು ಮಹಿಷವಾಡಗಿ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಎಂದು ವರದಿ ಮಾಡಿದ್ದು ಶ್ಲಾಘನೀಯವಾಗಿದೆ, ಜಾಕ್‌ವೆಲ್ ಬಳಿ ನಿರ್ಮಾಣವಾಗುತ್ತಿರುವ ಕಾಮಗಾರಿ ಪೂರ್ಣಗೊಳಿಸಲು ಪ್ರಸಕ್ತ ಬೇಸಿಗೆ ದಿನಗಳು ಸಹಕಾರಿ. ನದಿಯೊಳಗಿನ 7 ಮತ್ತು 8 ನಂಬರ್‌ಗಳ ಪಿಲ್ಲರ್ ಕಾರ್ಯಗಳು ಇನ್ನೂ ನಡೆದಿಲ್ಲ. ನೀರಿಲ್ಲದ ಕಾರಣ ಇದೀಗ ತಿಂಗಳಾಂತ್ಯದೊಳಗೆ ನದಿಯೊಳಗಿನ ಸಂಪೂರ್ಣ ಕಾರ್ಯಕ್ಕೆ ಅವಕಾಶವಿದೆ. ಕಾಮಗಾರಿ ವಿಳಂಬಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ತಂಡದ ನಿರ್ಲಕ್ಷೃ ಧೋರಣೆಯೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ನಗರದ ಹಿರಿಯರಾದ ರಾಮಣ್ಣ ಹುಲಕುಂದ ಮಾತನಾಡಿ, ಕಳೆದ ಡಿಸೆಂಬರ್ ತಿಂಗಳಲ್ಲಿ ಡಾ. ರವಿ ಜಮಖಂಡಿ ಸೇರಿ ಅನೇಕರು ಉಪವಾಸ ಸತ್ಯಾಗ್ರಹ ಹೋರಾಟದ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಅದರನ್ವಯ ಸಚಿವರ ನೇತೃತ್ವದಲ್ಲಿ 45 ಕೋಟಿ ರೂ. ಗಳ ಕಾಮಗಾರಿಗೆ ಹೆಚ್ಚುವರಿಯಾಗಿ 10 ಕೋಟಿ ರೂ. ಗಳಿಂದ ಒಟ್ಟು 55 ಕೋಟಿ ರೂ. ಗಳ ಸೇತುವೆ ಕಾಮಗಾರಿಗೆ ವೇಗ ಹೆಚ್ಚಿಸುವ ಭರವಸೆ ನೀಡಿದ್ದರು. ಅಲ್ಲದೆ 2026 ಡಿಸೆಂಬರ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನೂ ನೀಡಿದ್ದರು. ಇದೀಗ ಸತ್ಯಾಗ್ರಹದ ನಂತರ ಕನಿಷ್ಠ ಬೆಳವಣಿಗೆಯೂ ಕಾಣದೆ ಕೇವಲ ಭರವಸೆಗೆ ಮಾತ್ರ ಸೀಮಿತವಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.
ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ತೆಗ್ಗಿ, ಮಾರುತಿ ನಾಯಕ, ಶಿವಾನಂದ ಬಾಗಲಕೋಟಮಠ, ಸಂಜಯ ತೆಗ್ಗಿ, ಸಂಗಮೇಶ ಮಡಿವಾಳ, ಸಂಗಮೇಶ ಪಾಟೀಲ, ಪ್ರವೀಣ ಹಜಾರೆ, ಪ್ರಭು ಪೂಜಾರಿ ಇತರರಿದ್ದರು.