ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ವಿನ್​ಸಿಟಿ ಹಂತ&2 ಯೋಜನೆಯ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯನಿರ್ವಾಹಕ ಅಭಿಯಂತ ಅನಿಲ್​ ಕುಮಾರ್​ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಇದ್ದರು. 
ರಾಜ್ಯ

ಸರ್ಕಾರಕ್ಕೆ ಕ್ವಿನ್​ಸಿಟಿ ಹಂತ-2 ಬಾಧಿತರ ವರದಿ / TYAMAGONDLU

ತ್ಯಾಮಗೊಂಡ್ಲು : ಕ್ವಿನ್​ಸಿಟಿ ಹಂತ&2ರ ಸಂಬಂಧಿತ ಪ್ರತಿಯೊಂದು ಸಣ್ಣ ವಿಷಯಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿ, ರೈತರ ಬೇಡಿಕೆ ಮತ್ತು ಕುಂದುಕೊರತೆಗಳ ವರದಿಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕೆಂಚನಪುರ, ಬಳಗೆರೆ ಮತ್ತು ಕೊಡಿಗೇಹಳ್ಳಿಯ 970 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಕ್ವಿನ್​ಸಿಟಿ ಹಂತ&2 ಯೋಜನೆಯ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳೂ ಯಾರನ್ನೂ ಕಡೆಗಣಿಸದೆ ಬಾಧಿತ ರೈತರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕು, ಸ್ಪಂದಿಸಬೇಕು ಎಂದು ನಿರ್ದೇಶಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಳಗೆರೆ ರಾಮಕೃಷ್ಣಪ್ಪ ಮಾತನಾಡಿ, ಬಿಡದಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಮುಖ್ಯಮಂತ್ರಿಗಳು ಜಮೀನು ಕೊಡಲು ಇಚ್ಛಿಸುವವರ ಜಮೀನು ಮಾತ್ರ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಆದರೆ ಜಮೀನು ಕೊಡಲು ನಮಗೆ ಇಚ್ಛೆಯಿಲ್ಲ ಎಂದು ಹೇಳಿದರೂ ಬಲವಂತವಾಗಿ ವಶಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಒಂದೇ ಕಾನೂನು ತರಬೇಕು. ವಿಷಕಾರಿ ಕಾರ್ಖಾನೆಗಳನ್ನು ಸಮೃದ್ಧವಾಗಿರುವ ನಮ್ಮ ಭಾಗಕ್ಕೆ ತರಲು ಪ್ರಯತ್ನಿಸುತ್ತಿದ್ದು, ಇದರಿಂದ ಪರಿಸರ ಹಾಳಾಗಿ ಅಳಿದುಳಿದ ರೈತರು ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ.
ದಾಬಸ್​ಪೇಟೆ ಕೈಗಾರಿಕೆ ಪ್ರದೇಶದಲ್ಲಿ ಬೋರೆವೆಲ್​ ಕೊರೆದು ಅದರೊಳಗೆ ತ್ಯಾಜ್ಯ ಬಿಡುತ್ತಿರುವುದರಿಂದ ಸುತ್ತಲಿನ ನಿವಾಸಿಗಳಿಗೆ ರಾಸಾಯನಿಕ ಮಿಶ್ರಿತ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಎಲ್ಲ ಗೊತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ವ್ಯವಸಾಯ ಮಾಡಲು ಮಾತ್ರ ಗೊತ್ತಿರುವ ರೈತರ ಜಮೀನು ಕಸಿದು ಸರ್ಕಾರ ಅವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಗೆರೆ ರೈತ ಸಿದ್ದಣ್ಣ ಮಾತನಾಡಿ, ತಾತ ಮುತ್ತಾತನ ಕಾಲದಿಂದಲೂ ವ್ಯವಸಾಯ ಮಾಡಿಕೊಂಡು ಜಮೀನಿನ ಸ್ವಾಧಿನದಲ್ಲಿರುವ ರೈತರಿಗೆ ಹಣ ಬಿಡುಗಡೆ ವೇಳೆ ಅರಣ್ಯ ಇಲಾಖೆ ಮಧ್ಯೆ ಪ್ರವೇಶದಿಂದ ತೊಡಕಾಗಿದ್ದು, ಈ ಸಮಸ್ಯೆ ಬಗೆಹರಿಸಲು ಪಟ್ಟು ಹಿಡಿದರು. ಅಪರ ಜಿಲ್ಲಾಧಿಕಾರಿಗಳು ಯೋಜನೆಯ ಪೂರ್ಣ ಮಾಹಿತಿ ಮಂಡಿಸಿ, ಮನವೊಲಿಸಿದರು.

ಹಿರಿಯ ಮುಖಂಡ ಸಿದ್ದಗಂಗಪ್ಪ ಮಾತನಾಡಿ, ನಮ್ಮ ಭಾಗದಲ್ಲಿ ಸರ್ವೇ ಮಾಡಿ ಬರಡು ಭೂಮಿ ಎಂದು ವರದಿ ನೀಡಿದ್ದಾರೆ. ನ್ಯಾಯಾಲಯದ ಮೊರೆ ಹೋಗಿರುವ ನಮಗೆ ನ್ಯಾಯಾಲಯಕ್ಕೆ ಅಧಿಕಾರಿಗಳು ನೀಡಿರುವ ವರದಿ ಸಿಕ್ಕಿದೆ. ಬೆಂಗಳೂರಿಗೆ ನಿತ್ಯ ತರಕಾರಿ ಸರಬರಾಜು ಮಾಡುವ ಫಲವತ್ತಾದ ಭೂಮಿ ನಮ್ಮದು. ಯಾವ ಕಡೆಯಿಂದ ಬರಡು ಭೂಮಿಯಾಯಿತು ತಿಳಿಯುತ್ತಿಲ್ಲ. ಜಮೀನು ಕಳೆದುಕೊಳ್ಳುವ ರೈತನ ಮನೆಗೆ ವಿದ್ಯಾರ್ಹತೆ ನೋಡಿ ಕೆಲಸ ನೀಡುವುದಾಗಿ ತಿಳಿಸಿದ್ದಾರೆ. ಭೂಮಿ ಇದ್ದರೆ ಕುಟುಂಬವೇ ವ್ಯವಸಾಯ ಮಾಡಿ ಜೀವನ ಮಾಡಬಹುದು. ಕೆಲ ಮನೆಗಳಲ್ಲಿ ಹೆಚ್ಚು ಜನರಿದ್ದು, ಒಬ್ಬರ ಸಂಬಳದಿಂದ ಜೀವನ ಮಾಡಬಹುದೇ?. ಮಿಕ್ಕವರು, ಅವಿದ್ಯಾವಂತರು, ವಯಸ್ಸಾದವರು ಏನು ಮಾಡಬೇಕು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಭೆ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತ್ಯಾಮಗೊಂಡ್ಲು ಠಾಣೆ ಇನ್​ಸ್ಪೆಕ್ಟರ್​ ಚನ್ನೇಗೌಡ ನೇತೃತ್ವದಲ್ಲಿ ಬಂದೋಬಸ್ತ್​ ಒದಗಿಸಲಾಗಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯನಿರ್ವಾಹಕ ಅಭಿಯಂತ ಅನಿಲ್​ಕುಮಾರ್​, ವ್ಯವಸ್ಥಾಪಕ ಚಂದ್ರಶೇಖರ್​, ಅಭಿಯಂತ ರಂಗನಾಥ್​, ಅಧಿಕಾರಿಗಳು ರೈತರು ಇದ್ದರು.
ಸೌಕರ್ಯ ಕಲ್ಪಿಸಿ : ರೈತ ಮುಖಂಡ ಬಳಗೆರೆ ಪ್ರಕಾಶ್​ ಮಾತನಾಡಿ, ದರ ನಿಗದಿ ಸಭೆಯಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿ ಶಿವೇಗೌಡ ಆಶ್ವಾಸನೆ ನೀಡಿದಂತೆ ಗ್ರಾಮ ಠಾಣಾವನ್ನು 300 ಮೀಟರ್​ಗಳಷ್ಟು ವಿಸ್ತರಿಸಿ, ಗ್ರಾಮ ಅಭಿವೃದ್ಧಿಹೊಂದಲು ಅವಕಾಶ ಮಾಡಿಕೊಡಬೇಕು. ಅದಲ್ಲದೆ ಅಗತ್ಯ ರಸ್ತೆ, ಸಾರಿಗೆ ವ್ಯವಸ್ಥೆ, ಶಾಲಾ&ಕಾಲೇಜು, ಸರ್ಕಾರಿ ಆರೋಗ್ಯ ಕೇಂದ್ರ, ಗೋಕಟ್ಟೆ, ಗುಂಡುತೋಪನ್ನು ಉದ್ಯಾನವನ್ನಾಗಿ ಹಾಗೂ ಮುಖ್ಯವಾಗಿ ಸ್ಮಶಾನ ಜಾಗ ಮಂಜೂರು ಮಾಡಿಕೊಡಬೇಕು ಎಂದು ಮನವಿ ನೀಡಿದರು.
6000 ನೇರ ಉದ್ಯೋಗ : ಕೆಎಐಡಿಬಿ ಅಭಿವೃದ್ಧಿ ಅಧಿಕಾರಿ ಲೀಲಾವತಿ ಮಾತನಾಡಿ, ಕ್ವಿನ್​ಸಿಟಿ ಹಂತ&2 ಯೋಜನೆ ಪೂರ್ಣವಾದ ಮೇಲೆ 3053 ಕೆಎಲ್​ಡಿ ಶುದ್ಧ ನೀರನ್ನು ಕಾವೇರಿ ನದಿಯಿಂದ ಮತ್ತು 3074 ಕೆಎಲ್​ಡಿ ನೀರನ್ನು ಸಂಸ್ಕರಿಸಿದ ನೀರಿನ ಮೂಲಕ ಪೂರೈಸಲಾಗುತ್ತದೆ. 6000 ಮಂದಿಗೆ ನೇರ ಉದ್ಯೋಗ, 3500 ಮಂದಿಗೆ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮಾಹಿತಿ ನೀಡಿದರು.