ನೆಮ್ಮದಿ ಕಸಿದ ಕಲ್ಲುಗಣಿ ಪರವಾನಗಿ Quarrying license
- ಐದು ಗ್ರಾಮಸ್ಥರಿಗೆ ಕುತ್ತು ತಂದ ಬಲಾಢ್ಯರ ಪರ ಆದೇಶ
- ಸ್ಥಾಪಸದಂತೆ ನಾಗರಿಕರು ಪ್ರತಿಭಟನೆ
ಟೇಕಲ್: ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಕರಡುಗುರ್ಕಿ, ಹುಲಿಗುಟ್ಟೆ, ಊರುಗುರ್ಕಿ ಹಾಗೂ ಜಂಗನಹಳ್ಳಿ ಸುತ್ತಮುತ್ತಲಿನ ಗುಡ್ಡದಲ್ಲಿ ಕಲ್ಲುಗಣಿಗಾರಿಕೆ ಅನುಮತಿ ನೀಡಿರುವ ಗಣಿ ಮತ್ತು ಭೂ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.Quarrying license
ಹೋಬಳಿಯ ಕೆ.ಜಿ. ಹಳ್ಳಿ ಗ್ರಾಪಂ ವ್ಯಾಪ್ತಿಯ ಕರಡುಗುರ್ಕಿ, ಹುಲಿಗುಟ್ಟೆ, ಊರುಗುರ್ಕಿ ಜಂಗಾನಹಳ್ಳಿ ಸಮೀಪದ ಗುಡ್ಡದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿದ್ದು, ಪರವಾನಗಿ ಪಡೆದವರು ಜಂಗಾನಹಳ್ಳಿ ಸರ್ವೇ ನಂ.11 ಹಾಗೂ ಕರಡುಗುರ್ಕಿಯ ಸರ್ವೇ ನಂ.35ರಲ್ಲಿ ಗಣಿಗಾರಿಕೆ ಪ್ರಾರಂಭಿಸುತ್ತಿದ್ದು, ಗ್ರಾಮಸ್ಥರು ಆತಂಕ ಹೊರಹಾಕಿದ್ದಾರೆ. ಗಣಿಗಾರಿಕೆ ಜಾಗದಿಂದ 100 ಮೀ. ಅಂತರದಲ್ಲಿ ಗ್ರಾಮಗಳು ಇವೆ. ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆ ಹಾಗೂ ಗೋಮಾಳಗಳಿದ್ದು, ನೂರಾರು ಜಾನುವಾರುಗಳಿಗೆ ಮೇವಿನ ತಾಣವಾಗಿದೆ. ಕಲ್ಲುಗಣಿಗಾರಿಕೆ ಶುರು ಮಾಡಿದರೆ ಪರಿಸರ ನಾಶವಾಗುವ ಜತೆಗೆ ಗ್ರಾಮಸ್ಥರ ನೆಮ್ಮದಿ ಹಾಳಾಗುತ್ತದೆ. ಡೈನಮೈಟ್ ಬ್ಲಾಸ್ಟ್‌ಗಳಿಂದ ಗ್ರಾಮಗಳ ಮನೆಗಳು ಬಿರುಕು ಬಿಡುತ್ತವೆ. ಆದ್ದರಿಂದ ಪರವಾನಗಿ ರದ್ದುಪಡಿಸಿ ಇಲ್ಲಿನ ಜನರ ಜೀವ ಉಳಿಸಬೇಕು ಎಂದು ಗ್ರಾಪಂ ಸದಸ್ಯ ವಿಜಯಕುಮಾರ್ ಆಗ್ರಹಿಸಿದರು.
ನೂರಾರು ಎಕರೆಯಲ್ಲಿ ಬೆಟ್ಟಗುಡ್ಡಗಳಿವೆ. ನವಿಲುಗಳು, ಚಿರತೆಗಳು, ಪಕ್ಷಿಗಳು, ಕರಡಿಗಳು ಆಶ್ರಯ ಪಡೆದಿವೆ. ಕಲ್ಲುಗಣಿಗಾರಿಕೆ ನಡೆಸಿದರೆ ಅವುಗಳ ಪ್ರಾಣಕ್ಕೂ ಕುತ್ತು ಬರುತ್ತವೆ. ಸಿಡಿಮದ್ದುಗಳ ಸ್ಫೋಟದಿಂದ ಚಿರತೆಗಳು ಗ್ರಾಮಗಳ ಮೇಲೆ ದಾಳಿ ಮಾಡುತ್ತವೆ. ಕ್ರಷರ್‌ಗಳ ವಾಹನ ಓಡಾಟದಿಂದ ರಸ್ತೆಗಳು ಹಾಳಾಗಿ ಧೂಳು ಮತ್ತು ಮಾಲಿನ್ಯ ಉಂಟಾಗಿ ಮಕ್ಕಳು ಸೇರಿ ಗ್ರಾಮಸ್ಥರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜತೆಗೆ ಜಾನುವಾರುಗಳ ಕಲುಷಿತ ಮೇವು ತಿಂದು ಮಾರಕ ರೋಗಕ್ಕೆ ತುತ್ತಾಗುತ್ತಾವೆ. ಕೃಷಿ ಭೂಮಿ ಮೇಲೆ ಕಲ್ಲುಗಣಿಗಾರಿಕೆ ಧೂಳು, ಸಿಡಿಮದ್ದು ಬ್ಲಾಸ್ಟ್ ಚೂರುಗಳು ಬಿದ್ದು ಬೆಳೆ ನಾಶವಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಮೊದಲಲ್ಲ!: ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿರುವುದು ಇದು ಮೊದಲೇನಲ್ಲ, ಈಗ ಪರವಾನಗಿ ತೆಗೆದುಕೊಂಡ ಹೊಸೂರು ಮೂಲದವರೇ 7 ವರ್ಷದ ಹಿಂದೆಯೂ ಕಲ್ಲುಗಣಿಗಾರಿಕೆ ನಡೆಸಲು ಬಂದಿದ್ದರು. ಆಗ ನಾಲ್ಕೈದು ಗ್ರಾಮಸ್ಥರು ಒಟ್ಟಾಗಿ ಹೋರಾಟ ನಡೆಸಿ ಕಲ್ಲುಗಣಿಗಾರಿಕೆ ನಡೆಸಲು ಬಿಟ್ಟಿರಲಿಲ್ಲ. ಈಗ ಅವರೇ ಬಲಾಢ್ಯರ ಬೆಂಬಲದಿಂದ ಮತ್ತೆ ಗಣಿಗಾರಿಕೆ ಪ್ರಾರಂಭಿಸಲು ಮುಂದಾಗಿದ್ದ್ದಾರೆ. ಈ ಬಗ್ಗೆ ಶಾಸಕ ಕೆ.ವೈ.ನಂಜೇಗೌಡ ಗಮನಕ್ಕೂ ತರಲಾಗಿದೆ. ಆದರೆ ಗಣಿ ಇಲಾಖೆ ಅಧಿಕಾರಿಗಳು ನಿಯಮ ಪಾಲಿಸದೇ ಯಾರದೋ ಒತ್ತಡಕ್ಕೆ ಒಳಗಾಗಿ ಸ್ಥಳ ಪರಿಶೀಲನೆಯೂ ನಡೆಸದೆ ಕಚೇರಿಯಲ್ಲಿ ಕುಳಿತು ಕಾನೂನು ವಿರುದ್ಧವಾಗಿ ಪರವಾನಗಿ ನೀಡಿದ್ದಾರೆ. ಜೀವಸಂಕುಲ ಸರ್ವನಾಶವಾಗುವ ಮುನ್ನ ನಮ್ಮಜೀವ ಉಳಿಸಬೇಕು. ಒಂದು ವೇಳೆ ನಿಲ್ಲಿಸಲಿದ್ದರೆ ಐದು ಗ್ರಾಮಸ್ಥರು ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.