ರವೀಂದ್ರ ಶೆಟ್ಟಿ ಆಕ್ರೋಶ  
ರಾಜ್ಯ

ಅವೈಜ್ಞಾನಿಕ ದಂಡ ನಿಗದಿಗೆ ಕ್ವಾರಿ ಮಾಲೀಕರು ಆಕ್ರೋಶ - Quarry owners outraged

ಬೆಂಗಳೂರು: ವೈಜ್ಞಾನಿಕ ಮಾನದಂಡ ಪಾಲಿಸದೆ, ಕ್ವಾರಿ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸಿರುವ ಡ್ರೋನ್ ಸಮೀಕ್ಷೆ ಆಧರಿಸಿ ರಾಜಧನ ಪಾವತಿ ಬಾಕಿ ಮತ್ತು ದಂಡ ವಿಧಿಸಲು ಮುಂದಾಗಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕ್ರಮದ ಬಗ್ಗೆ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘ ತೀವ್ರವಾಗಿ ಖಂಡಿಸಿದೆ.
ಒಟಿಎಸ್ ಯೋಜನೆಯಡಿ ರಾಜಧನ ಪಾವತಿ ಬಾಕಿಯನ್ನು ಪಾವತಿಸುವಂತೆ ಸರ್ಕಾರ ಸೂಚಿಸಿದೆ. ಆದರೆ, ವೈಜ್ಞಾನಿಕವಲ್ಲದ ಡ್ರೋನ್ ಸಮೀಕ್ಷೆ ಆಧರಿಸಿ ಕೋಟ್ಯಂತರ ರೂ.ದಂಡ ವಿಧಿಸಲಾಗುತ್ತಿದೆ. ಒಬ್ಬೊಬ್ಬ ಮಾಲೀಕರಿಗೆ ವಿಭಿನ್ನ ಪ್ರಮಾಣದಲ್ಲಿ ದಂಡ ನಿಗದಿಪಡಿಸಲಾಗಿದೆ. ಕನಿಷ್ಠ 50 ಲಕ್ಷ ರೂ. ವರಗೆ ದಂಡ ವಿಧಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ದಂಡ ಪಾವತಿಸುವುದು ನಮಗೆ ಸಾಧ್ಯವಿಲ್ಲ. ರಾಜಧನ ಪಾವತಿ ಸಂಗ್ರಹಣೆ ಕುರಿತು ಸಂಬಂಧಿತ ಇಲಾಖೆಗಳಿಗೆ ಹೈಕೋರ್ಟ್, ನೋಟಿಸ್ ಜಾರಿ ಮಾಡಿದೆ. 2023ರಲ್ಲಿ ಕಾನೂನುಬದ್ಧವಾಗಿ ಗಣಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ನಮ್ಮ ಸಮಸ್ಯೆ ಬಗೆಹರಿದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
10 ವರ್ಷಗಳಿಂದ ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ. ಅಕ್ರಮ ಗಣಿಗಾರಿಕೆಗೆ ತಡೆ ಹಾಕಿ, ಪ್ರಾಮಾಣಿಕ ಗಣಿ ಮಾಲೀಕರಿಗೆ ಭದ್ರತೆ ಒದಗಿಸಬೇಕು. ವಿವಿಧ ಸರ್ಕಾರಿ ಕಾಮಗಾರಿಗಳಿಗೆ ಕಲ್ಲು, ಖನಿಜ ಪೂರೈಸುವ ಗುತ್ತಿಗೆದಾರರ ಬಿಲ್‌ಗಳಿಂದಲೇ ಸಂಬಂಧಿತ ಇಲಾಖೆಗಳು, ರಾಜಧನ ಪಾವತಿ ಮೊತ್ತವನ್ನು ಈಗಾಗಲೇ ಕಡಿತಗೊಳಿಸುತ್ತಿವೆ. ಹೀಗಿರುವಾಗ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತೆ ಅದೇ ರಾಜಧನ ಪಾವತಿಯನ್ನು ಕ್ವಾರಿ ಮಾಲೀಕರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಕಿರಣ್ ಜೈನ್ ಬೇಸರ ವ್ಯಕ್ತಪಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಗೌರವಾಧ್ಯಕ್ಷ ಆಶಾ ಪ್ರಸನ್ನ ಸೇರಿ ಮತ್ತಿತರರಿದ್ದರು.