ಕಾಮಾಕ್ಷಿಪಾಳ್ಯ ಅಪಾರ್ಟ್‌ಮೆಂಟ್‌ನಲ್ಲಿ ಹೆಬ್ಬಾವು: ದಿನವೂ ಬರ್ತಿತ್ತು ಕೆಜಿಗಟ್ಟಲೆ ಮಾಂಸ, ದಾಳಿ ವೇಳೆ ಶಾಕಿಂಗ್ ಸಂಗತಿ ಬಯಲು! Pythons
- ರೀಲ್ಸ್ ನೋಡಿ ಆನ್‌ಲೈನ್‌ನಲ್ಲಿ ಹೆಬ್ಬಾವು ಆರ್ಡರ್ ಮಾಡಿದ ಆಸಾಮಿ
- ಕಾಮಾಕ್ಷಿಪಾಳ್ಯ ಅಪಾರ್ಟ್‌ಮೆಂಟ್‌ನಲ್ಲಿ 'ಬಾಲ್ ಪೈಥಾನ್' ಸಾಕಾಣೆ
- ಮಾಂಸದ ಪಾರ್ಸೆಲ್ ನೋಡಿ ಅಕ್ರಮ ಹೆಬ್ಬಾವು ಪತ್ತೆ ಹಚ್ಚಿದ ಪೊಲೀಸರು
- ಸೈಬರ್ ಕ್ರಿಮಿನಲ್‌ಗಳ ಶೈಲಿಯಲ್ಲಿ ಆನ್‌ಲೈನ್ ಡೆಲಿವರಿ ಆ್ಯಪ್ ಮೂಲಕವೇ ಬಂದಿತ್ತು ಹಾವು
ಬೆಂಗಳೂರು: ಮನೆಗೆ ಒಂದು ಸಣ್ಣ ಹಾವು ನುಗ್ಗಿದರೆನೇ ನಾವು ಭಯದಿಂದ ನಡುಗಿ ಹೋಗುತ್ತೇವೆ. ಆದರೆ ಇಲ್ಲೊಬ್ಬ ಯುವಕ ರಾಜಧಾನಿ ಬೆಂಗಳೂರಿನ ತನ್ನ ಅಪಾರ್ಟ್‌ಮೆಂಟ್ ಫ್ಲ್ಯಾಟ್ ಒಳಗಡೆಯೇ ಯಾರಿಗೂ ತಿಳಿಯದಂತೆ ಹೆಬ್ಬಾವನ್ನು ( Pythons ) ಸಾಕಿ ಅಚ್ಚರಿ ಮೂಡಿಸಿದ್ದಾನೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ರೀಲ್ಸ್ ಕ್ರೇಜ್ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ಅದನ್ನೇ ನೋಡಿ ಪ್ರೇರಿತನಾದ ಈತ ಆನ್‌ಲೈನ್ ಡೆಲಿವರಿ ಆ್ಯಪ್ ಮೂಲಕ ವಿದೇಶಿ ತಳಿಯ ಹೆಬ್ಬಾವನ್ನು ಮನೆಗೆ ತರಿಸಿಕೊಂಡು ಸಾಕುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶ ಮೂಲದ ಯುವಕನೊಬ್ಬ ಇಲ್ಲಿನ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದು, ಕಳೆದ ಕೆಲವು ದಿನಗಳಿಂದ ಆತನ ಮನೆಗೆ ಕೆಲವರು ಶಂಕಾಸ್ಪದವಾಗಿ ಬಂದು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಅಷ್ಟೇ ಅಲ್ಲದೆ, ಆ ಮನೆಗೆ ಭಾರಿ ಪ್ರಮಾಣದಲ್ಲಿ ಮಾಂಸವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯ ನಿವಾಸಿಗಳು ತಕ್ಷಣವೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳೀಯರ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಾಮಾಕ್ಷಿಪಾಳ್ಯ ಪೊಲೀಸರು ಜಂಟಿಯಾಗಿ ಆ ಅಪಾರ್ಟ್‌ಮೆಂಟ್ ಫ್ಲ್ಯಾಟ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಇಡೀ ತಂಡವೇ ಶಾಕ್ ಆಗಿದೆ. ಫ್ಲ್ಯಾಟ್‌ನ ಒಳಗಡೆ ಇದ್ದ ದೊಡ್ಡ ಕಾರ್ಡ್‌ಬೋರ್ಡ್ ಬಾಕ್ಸ್ ಒಂದರಲ್ಲಿ ಹೆಬ್ಬಾವನ್ನು ಅಕ್ರಮವಾಗಿ ಇರಿಸಿರುವುದು ಪತ್ತೆಯಾಗಿದೆ. ಅಧಿಕಾರಿಗಳು ತಕ್ಷಣವೇ ಆ ಹೆಬ್ಬಾವನ್ನು ವಶಕ್ಕೆ ಪಡೆದಿದ್ದು, ನಿಯಮಬಾಹಿರವಾಗಿ ವನ್ಯಜೀವಿ ಸಾಕಿದ ಆರೋಪದಡಿ ಯುವಕ ಹಾಗೂ ಆತನ ಸಹಚರರ ವಿರುದ್ಧ ಕೇಸ್ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ತೀವ್ರ ವಿಚಾರಣೆಯ ವೇಳೆ ಯುವಕ ಆಘಾತಕಾರಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಸಾಮಾಜಿಕ ಜಾತಾಣದಲ್ಲಿ ಹಾವಿನ ಕುರಿತಾದ ರೀಲ್ಸ್ ಒಂದನ್ನು ನೋಡಿ ತಾನು ಆಕರ್ಷಿತನಾಗಿದ್ದಾಗಿ ತಿಳಿಸಿದ್ದಾನೆ. ನಂತರ ಆ ರೀಲ್ಸ್ ಅಪ್‌ಲೋಡ್ ಮಾಡಿದ್ದ ಮಾಲೀಕನನ್ನು ಸಂಪರ್ಕಿಸಿದ್ದಾಗ, ಆತನ ಬಳಿ ಮೂರು 'ಬಾಲ್ ಪೈಥಾನ್' ಇರುವುದಾಗಿ ಹೇಳಿದ್ದನು. ಅದರಲ್ಲಿ ತನಗೆ ಇಷ್ಟವಾದ ಒಂದು ಹೆಬ್ಬಾವನ್ನು ಆರಿಸಿಕೊಂಡಿದ್ದಾಗಿ ಹಾಗೂ ಆ ಹಾವು ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ ಮೂಲಕ ನೇರವಾಗಿ ತನ್ನ ಮನೆ ಬಾಗಿಲಿಗೆ ಬಂದಿಳಿಯಿತು ಎಂದು ಯುವಕ ಒಪ್ಪಿಕೊಂಡಿದ್ದಾನೆ.
ಅರಣ್ಯ ಇಲಾಖೆಯ ತಜ್ಞ ಅಧಿಕಾರಿಗಳು ಪರಿಶೀಲಿಸಿದಾಗ, ಯುವಕನ ಬಳಿ ಇದ್ದ ಹೆಬ್ಬಾವು ಅತ್ಯಂತ ವಿರಳ ಹಾಗೂ ವಿದೇಶಿ ತಳಿಯ 'ಬಾಲ್ ಪೈಥಾನ್' ಎಂದು ದೃಢಪಟ್ಟಿದೆ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ಇಂತಹ ವಿದೇಶಿ ಅಥವಾ ಅಪರೂಪದ ವನ್ಯಜೀವಿಗಳನ್ನು ಸಾಕಲು ಮತ್ತು ತಳಿ ಅಭಿವೃದ್ಧಿ ಮಾಡಲು ಸರ್ಕಾರದ ಅಧಿಕೃತ ಪರವಾನಗಿ ಹಾಗೂ ನೋಂದಣಿ ಕಡ್ಡಾಯವಾಗಿರುತ್ತದೆ. ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದೆ ಇವುಗಳನ್ನು ಸಾಕುವುದು ಅಥವಾ ಮಾರಾಟ ಮಾಡುವುದು ಸಂಪೂರ್ಣ ಶಿಕ್ಷಾರ್ಹ ಅಪರಾಧವಾಗಿದೆ.
ಸದ್ಯ ಈ ಘಟನೆ ಬೆಂಗಳೂರಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆನ್‌ಲೈನ್ ಡೆಲಿವರಿ ಮೂಲಕ ಇಷ್ಟು ದೊಡ್ಡ ಹೆಬ್ಬಾವನ್ನು ಸಪ್ಲೈ ಮಾಡಿದ ಆ ನಕಲಿ ಜಾಲದ ಕಿಂಗ್‌ಪಿನ್ ಯಾರು? ಬೆಂಗಳೂರಿನಲ್ಲಿ ಇಂತಹ ಅಕ್ರಮ ವನ್ಯಜೀವಿ ಮಾರಾಟದ ಜಾಲ ಸಕ್ರಿಯವಾಗಿದೆಯೇ? ಹಾಗೂ ಈ ಯುವಕನಲ್ಲದೆ ಇನ್ನೂ ಎಷ್ಟು ಜನರಿಗೆ ಇಂತಹ ವಿದೇಶಿ ಹಾವುಗಳನ್ನು ಮಾರಾಟ ಮಾಡಲಾಗಿದೆ? ಎಂಬ ಕುರಿತು ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ತೀವ್ರ ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್).