ಕಲಬುರಗಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಡಿಸಿ ಇಕ್ರಮ್ ಶರೀಫ್, ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಶಾಲೂ ಇತರರಿದ್ದರು.
- ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಾಕೀತು
- ಜಿಲ್ಲಾ ಮಟ್ಟದ ಮಕ್ಕಳ ಮೇಲ್ವಿಚಾರಣಾ ಸಮಿತಿ ಸಭೆ
ಕಲಬುರಗಿ: ಜಿಲ್ಲೆಯಲ್ಲಿ ಬಾಲ್ಯವಿವಾಹ, ಮಕ್ಕಳ ಭಿಕ್ಷಾಟನೆ ಸಂಪೂರ್ಣ ತಡೆಗಟ್ಟಲು ಜಿಲ್ಲಾಡಳಿತ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಜಿಲ್ಲಾ ಮಟ್ಟದ ಮಕ್ಕಳ ಮೇಲ್ವಿಚಾರಣಾ ಸಮಿತಿ ಸಭೆ, ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗಳ ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಸರ್ಕಾರಿ ಮತ್ತು ಸಂಘ-ಸಂಸ್ಥೆಗಳು ನಡೆಸುವ ಬಾಲಮಂದಿರಗಳಿಗೆ ಅಧಿಕಾರಿಗಳು ಪ್ರತಿ ತಿಂಗಳು ಕಡ್ಡಾಯ ಭೇಟಿ ನೀಡಿ ನೈರ್ಮಲ್ಯ, ಭದ್ರತೆ ಹಾಗೂ ಮೂಲಸೌಕರ್ಯ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ಪೋಕ್ಸೋ ಪ್ರಕರಣಗಳಲ್ಲಿ 60 ದಿನದ ಕಾಲಮಿತಿಯೊಳಗೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಟಕ ಅಧಿಕಾರಿ ವಿ.ಮಂಜುಳಾ ಪಾಟೀಲ್ ಮಾತನಾಡಿ, 71 ಬಾಲ್ಯವಿವಾಹ, 22 ಬಾಲಕಾರ್ಮಿಕ, 16 ಪೋಕ್ಸೋ ಹಾಗೂ 14 ಭೀಕ್ಷಾಟನೆ ಪ್ರಕರಣ ವರದಿಯಾಗಿವೆ. ಈಗಾಗಲೇ 198 ಮಕ್ಕಳನ್ನು ಸುರಕ್ಷತವಾಗಿ ಪಾಲಕರ ವಶಕ್ಕೆ ಒಪ್ಪಿಸಲಾಗಿದೆ. ಮಕ್ಕಳ ಸಹಾಯವಾಣಿಗೆ ಬಂದ 293 ಕರೆಗಳಲ್ಲಿ 285 ದೂರು ಇತ್ಯರ್ಥಪಡಿಸಿದ್ದು, 80 ಬಾಲಕಿಯರು ಹಾಗೂ ಒಬ್ಬ ಬಾಲಕನ ಬಾಲ್ಯವಿವಾಹ ತಡೆಯಲಾಗಿದೆ. ವಿಶೇಷ ಕಾರ್ಯಾಚರಣೆ ಮೂಲಕ 22 ಬಾಲಕಾರ್ಮಿಕರು ಹಾಗೂ 13 ಭಿಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಪೋಕ್ಸೋ ಹಾಗೂ ಬಾಲ್ಯವಿವಾಹ ಸಂತ್ರಸ್ತರಿಗೆ ತಲಾ 5,000 ರೂ. ತುರ್ತು ನೆರವು, ಎಚ್ಐವಿ ಸೋಂಕಿನಿಂದ ತಂದೆ-ತಾಯಿ ಬಳಲುತ್ತಿದ್ದರೆ ಅಥವಾ ತಂದೆ-ತಾಯಿ ಹೊರತುಪಡಿಸಿ ಸಂಬಂಧಿಕರು ಅಥವಾ ಹೊರಗಿನ ಬೇರೆ ಕುಟುಂಬದವರು ಮಕ್ಕಳನ್ನು ಸಾಕುತ್ತಿದ್ದರೆ ಅಂತಹ ಮಕ್ಕಳಿಗೆ ಮಾಸಿಕ 2000 ರೂ. ಧನಸಹಾಯ ಒದಗಿಸಲಾಗುತ್ತಿದೆ. ಪ್ರಾಯೋಜಕತ್ವ ಯೋಜನೆಯಡಿ ಅನಾಥ, ಕುಷ್ಠರೋಗಿ, ಸಂಕಷ್ಟದಲ್ಲಿರುವ ಮಕ್ಕಳ ಜೀವನಮಟ್ಟ ಸುಧಾರಣೆಗೆ 18 ವರ್ಷದೊಳಗಿನ ಮಕ್ಕಳಿಗೆ 4000 ಹಾಗೂ ಬಾಲ ಗರ್ಭಿಣಿಯರಿಗೆ 6,000 ರೂ. ಧನಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಾಲ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ತಿಳಿಸಿದ ಡಿಸಿ ಇಕ್ರಮ್ ಶರೀಫ್, ಮಕ್ಕಳ ಹಕ್ಕು ಉಲ್ಲಂಘಸುವವರ ವಿರುದ್ಧ ದಯೆ ತೋರದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಶಾಲು, ಪ್ರೊಬೇಷನರಿ ಐಎಎಸ್ ಶ್ರೀಕರ್ ಮೋಘಾ, ಡಿಎಚ್ಒ ಡಾ.ಶರಣಬಸಪ್ಪ ಕ್ಯಾತನಾಳ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಂಕ್ರಮ್ಮ ಢವಳಗಿ ಇತರರಿದ್ದರು.
ಆಸ್ಪತ್ರೆಗಳಲ್ಲಿ ಅಪ್ರಾಪ್ತರ ಗರ್ಭಧಾರಣೆ ಕಂಡುಬಂದಲ್ಲಿ ಕಡ್ಡಾಯವಾಗಿ ಮೆಡಿಕೋ-ಲೀಗಲ್ ಕೇಸ್ ದಾಖಲಿಸಿ ಆರ್ಸಿಎಚ್ ಪೋರ್ಟಲ್ ಹಾಗೂ ತಾಯಿ ಕಾರ್ಡ್ ಆಧರಿಸಿ ಎಫ್ಐಆರ್ ದಾಖಲಿಸಬೇಕು.
— > ಇಕ್ರಮ್ ಶರೀಫ್ ಜಿಲ್ಲಾಧಿಕಾರಿ