ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕಾಚಾಪುರ ಗ್ರಾಮಸ್ಥರು ಯಡ್ರಾಮಿಯಲ್ಲಿ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಗಂಗಮ್ಮ, ಭೀಮಬಾಯಿ, ಶರಣಮ್ಮ, ಅನ್ನಪೂರ್ಣ, ಲ್ಮಬಾಯಿ ಇತರರಿದ್ದರು.
- ಯಡ್ರಾಮಿ ತಹಸಿಲ್ ಕಚೇರಿ ಎದುರು ಕಾಚಾಪುರ ಮಹಿಳೆಯರಿಂದ ಪ್ರತಿಭಟನೆ
ಯಡ್ರಾಮಿ: ಕಾಚಾಪುರದಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಬಡ ಕುಟುಂಬಗಳು ಬೀದಿಗೆ ಬರುತ್ತಿವೆ. ಕೂಡಲೇ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕಾಚಾಪುರ ಗ್ರಾಮಸ್ಥರು ತಹಸಿಲ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕಾಚಾಪುರದ ಗಲ್ಲಿ-ಗಲ್ಲಿಗಳ ಕಿರಾಣಿ ಅಂಗಡಿ, ಪಾನ್ಶಾಪ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಕಳೆದೊಂದು ವರ್ಷದಿಂದ ಪ್ರತಿಭಟನೆ ಹಾಗೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಈವರೆಗೂ ಯಾರ ವಿರುದ್ದವೂ ಕ್ರಮ ತೆಗೆದುಕೊಂಡಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆಗೆ ಬರುವ ಸಮಯಕ್ಕೆ ಕೆಲ ಅಂಗಡಿ ಬಂದ್ ಆಗಿರುತ್ತವೆ. ಇನ್ನೂ ಕೆಲ ಅಂಗಡಿಗಳಲ್ಲಿ ಮದ್ಯ ಬೇರೆಡೆ ಸಾಗಿಸಿರುತ್ತಾರೆ. ಹೀಗಾಗಿ ಬಂದ ಅಧಿಕಾರಿಗಳು ಮದ್ಯ ದೊರೆತಿಲ್ಲ ಎಂದು ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಅಬಕಾರಿ ಅಧಿಕಾರಿಗಳು ದಾಳಿಗೂ ಮುನ್ನ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರಿಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಶಂಕೆಯಿದೆ. ಹೀಗಾಗಿ ತಾಲೂಕು ದಂಡಾಧಿಕಾರಿಗಳು ಹಾಗೂ ಜಿಲ್ಲಾ ಅಬಕಾರಿ ಅಧಿಕಾರಿಗಳು ಗ್ರಾಮದಲ್ಲಿ ದಿಢೀರ್ ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ಮಡಿವಾಳಮ್ಮ, ಭೀಮಬಾಯಿ, ಶರಣಮ್ಮ, ಅನ್ನಪೂರ್ಣ, ಲ್ಮಬಾಯಿ, ದೇವಮ್ಮ, ಗೀತಾ, ರಾಯಮ್ಮ, ಶಾರದಾ, ಚಂದಮ್ಮ, ಮಾಣಿಕಮ್ಮ, ಮಲ್ಲಮ್ಮ, ಸಾವಿತ್ರಿ, ಸಾಥಮ್ಮ, ಈರಮ್ಮ, ಪಾರ್ವತಿ, ಮಲ್ಲಮ್ಮ, ಕಾಶಿಬಾಯಿ, ದೇವಕ್ಕಿ, ಶಿವಬಾಯಿ, ಪಾರ್ವತಿ, ಯಲ್ಲಮ್ಮ ಇತರರಿದ್ದರು.
"
ಕಾಚಾಪುರದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಬಡವರು ಕೂಲಿ ಮಾಡಿದ ಹಣವನ್ನು ಹೆಂಡಕ್ಕೆ ಸುರಿಯುತ್ತಿದ್ದಾರೆ. ಮಹಿಳೆಯರ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕಾಲೇಜು ವಿದ್ಯಾರ್ಥಿಗಳು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ.
— > ಗಂಗಮ್ಮ, ಕಾಚಾಪುರ ನಿವಾಸಿ