Put a stop to atrocities.
ಚಿಕ್ಕಬಳ್ಳಾಪುರ : ಜೀತ ವಿಮುಕ್ತರಿಗೆ ಪುನರ್ವಸತಿ ಸೌಲಭ್ಯ, ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ, ವಸತಿ ನಿಲಯಗಳಿಗೆ ಸೌಕರ್ಯ ವ್ಯವಸ್ಥೆ, ದಲಿತರ ಕುಂದು&ಕೊರತೆಗಳ ತ್ವರಿತ ಪರಿಹಾರ, ಸ್ಮಶಾನಕ್ಕಾಗಿ ಅಗತ್ಯ ಜಾಗ ಮಂಜೂರು....
ಇವು ಜಿಲ್ಲಾಡಳಿತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಪಂಗೆ ಒತ್ತಾಯದ ಬೇಡಿಕೆಗಳು. ಜಾಗೃತಿ ಸಮಿತಿ ಸದಸ್ಯರು, ದಲಿತ ಮುಖಂಡರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದರ ಜತೆಗೆ ಪರಿಹಾರಕ್ಕೆ ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕುಂದು&ಕೊರತೆಗಳನ್ನು ಆಲಿಸಿ, ಬಗೆಹರಿಸಲು ಕಾಲ ಕಾಲಕ್ಕೆ ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಸಭೆಗಳನ್ನು ಕೈಗೊಳ್ಳಲು ಮನವಿ ಮಾಡಿದರು.
ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿವೇಶನ ರಹಿತ ಮತ್ತು ವಸತಿ ರಹಿತ ಕುಟುಂಬಗಳ ನಿಖರ ಮಾಹಿತಿಯನ್ನು ತಾಲೂಕುವಾರು ಸಂಗ್ರಹಿಸಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ 1 ವಾರದೊಳಗೆ ಸಲ್ಲಿಸಬೇಕು. ಇದರ ಆಧಾರದ ಮೇಲೆ ಅರ್ಹರಿಗೆ ಸೂರಿನ ಸೌಲಭ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಭೆಗಳ ಮೂಲಕ ಪರಿಶೀಲನೆಯನ್ನು ನಡೆಸಿ ಸಂಬಂಧಿತ ಇಲಾಖೆಗಳು ತ್ವರಿತ ಪರಿಹಾರ ಕಲ್ಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯಗಳಿಗೆ ಆದ್ಯತೆ ನೀಡಬೇಕಿದ್ದು, ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಸ್ಮಶಾನಕ್ಕಾಗಿ ಅಗತ್ಯ ಭೂಮಿಯನ್ನು ಗುರುತಿಸಿ ಒದಗಿಸಬೇಕು ಈ ಕಾರ್ಯದಲ್ಲಿ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಸಂಬಂಧಿತ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತಾಗಲು ಸಮಾಜ ಕಲ್ಯಾಣ ಇಲಾಖೆಯ ತಾಲೂಕುಮಟ್ಟದ ಅಧಿಕಾರಿಗಳು ಸರ್ಕಾರಿ ವಕೀಲರೊಂದಿಗೆ ನಿರಂತರ ಸಮನ್ವಯತೆ ಸಾಧಿಸಬೇಕು ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ರಚಿಸಲಾಗಿರುವ ಕಾವಲು ಸಮಿತಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದರು. ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತೇಜಾನಂದರೆಡ್ಡಿ ಇದ್ದರು.
ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಇಲಾಖೆಗಳ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳ ಕಟ್ಟಡಗಳ ಬಾಕಿ ಕಾಮಗಾರಿ ಪೂರ್ಣ ವಿದ್ಯಾರ್ಥಿಗಳ ಸುರಕ್ಷತೆಗೆ ಅತ್ಯಂತ ಆದ್ಯತೆ, ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಕೆ, ವಿದ್ಯಾರ್ಥಿಗಳ ದೈನಂದಿನ ಚಲನವಲನದ ಮೇಲೆ ನಿಗಾ, ನಿಯಮಿತವಾಗಿ ಪರಿಶೀಲನೆ ಸೇರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಕಲ್ಯಾಣ, ಸುರಕ್ಷತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಜಿಲ್ಲೆಯಲ್ಲಿ 2023ನೇ ಸಾಲಿನಿಂದ 2026ನೇ ಸಾಲಿನ ಜೂ.30 ಅಂತ್ಯಕ್ಕೆ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ 9 ಕೊಲೆ, 7 ಅತ್ಯಾಚಾರ, ಪೋಕ್ಸೋ 47 ಸೇರಿ 232 ಪ್ರಕರಣ ದಾಖಲಾಗಿದ್ದು, ಈ ಪೈಕಿ 221 ಪ್ರಕರಣಗಳು ಇತ್ಯರ್ಥಗೊಂಡಿದ್ದು, 9 ಸುಳ್ಳು ಪ್ರಕರಣ ಹಾಗೂ 5 ಪ್ರಕರಣಗಳಿಗೆ ನ್ಯಾಯಾಲಯ ತಡೆಯಾಜ್ಞೆ ಇದೆ. ಇನ್ನು ದೌರ್ಜನ್ಯ ಪ್ರಕರಣಗಳಲ್ಲಿ ಕೊಲೆಯಾದವರ ಅವಲಂಬಿತರಿಗೆ 10 ಪ್ರಕರಣಗಳ ಪೈಕಿ 3 ಜನರಿಗೆ ನೌಕರಿ ಹಾಗೂ 7 ಜನರಿಗೆ ಪಿಂಚಣಿ ಸೌಲಭ್ಯ ನೀಡಲಾಗಿದೆ ಎಂದು ಇಲಾಖೆಯು ತಿಳಿಸಿದೆ.