ಬಲೂರಿನ ಶ್ರೀ ಶಂಕರ ಮಠದಲ್ಲಿ ಭಕ್ತರು ಗೋ ಪೂಜೆ ನೆರವೇರಿಸುತ್ತಿರುವುದು.
- ಅಧಿಕ ಮಾಸ ಅಂಗವಾಗಿ
- ಪಟ್ಟಣದ ಶ್ರೀ ಶಂಕರ ಮಠದಲ್ಲಿ ಗಾಯತ್ರಿ ಭಜನಾ ಮಂಡಳಿ ಸದಸ್ಯರು
ಬೇಲೂರು: ಅಧಿಕ ಮಾಸ ಅಂಗವಾಗಿ ಇತ್ತೀಚೆಗೆ ಪಟ್ಟಣದ ಶ್ರೀ ಶಂಕರ ಮಠದಲ್ಲಿ ಗಾಯತ್ರಿ ಭಜನಾ ಮಂಡಳಿ ಸದಸ್ಯರು ಗೋವುಗಳಿಗೆ ಹೂವಿನ ಹಾರ, ಕುಂಕುಮ ಹಚ್ಚಿ ಆರತಿ ಬೆಳಗುವ ಮೂಲಕ ಪುರುಷೋತ್ತಮ ಪೂಜೆ ನೆರವೇರಿಸಿದರು.
ವೇದಬ್ರಹ್ಮ ಕೆ.ಆರ್.ಮಂಜುನಾಥ್ ಮಾತನಾಡಿ, ಅಧಿಕ ಮಾಸ ಅಂಗವಾಗಿ ಮಠದಲ್ಲಿ ಗೋ ಪೂಜೆ, ಪುರುಷೋತ್ತಮ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ. ಇಲ್ಲಿ ಗೋಮಾತೆ ಸುಪ್ರೀತಳಾದರೆ ಎಲ್ಲರಿಗೂ ಶುಭವಾಗುತ್ತದೆ. ಗೋ ಲಕ್ಷ್ಮಿಯ ರೂಪವಾದ ಗೋಮಾತೆಯನ್ನು ಪೂಜಿಸುವುದರಿಂದ ದೇವಿಯ ಅನುಗ್ರಹ ದೊರೆಯುತ್ತದೆ. ಗೋಮಾತೆಯ ಪೂಜೆಯಿಂದ ಧಾರ್ಮಿಕ ಶ್ರದ್ಧೆ ಹೆಚ್ಚುವುದರ ಜತೆಗೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಗಾಗಿ ಪ್ರಾರ್ಥಿಸಲಾಯಿತು ಎಂದರು.
ಮಠದ ಒಳಭಾಗದಲ್ಲಿ ವಿಷ್ಣುವಿನ ವಿಶೇಷ ಪೂಜೆ ಮಾಡಲಾಯಿತು. ಅಧಿಕ ಮಾಸದಲ್ಲಿ ವಿಷ್ಣುವಿನ ಆರಾಧನೆ ಮಾಡುವ ಪರಂಪರೆ ಇದ್ದು, ಪೂಜೆ ನಂತರ ಭಜನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ 33 ವಿಧದ ನೈವೇದ್ಯಗಳನ್ನು ಸಮರ್ಪಿಸಿ, 33 ಸಂಖ್ಯೆಗೆ ಅನುಗುಣವಾಗಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಅಧಿಕ ಮಾಸದಲ್ಲಿ ಮನೆಗಳಲ್ಲಿ ಮದುವೆ, ಮುಂಜಿ ಸೇರಿದಂತೆ ಶುಭ ಕಾರ್ಯಗಳನ್ನು ನಡೆಸದಿದ್ದರೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಧಾರ್ಮಿಕ ಆಚರಣೆಗಳು ನಡೆಯುವುದು ಸಂಪ್ರದಾಯವಾಗಿದೆ. ದೇವರ ಕೃಪೆಯಿಂದ ಊರು, ರಾಜ್ಯ ಹಾಗೂ ದೇಶದಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ ಎಂದರು.