ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  
ರಾಜ್ಯ

ಖರ್ಗೆ ನಿಂತ ಸ್ಥಳದಲ್ಲಿ ಶುದ್ಧೀಕರಣ

ಬೆಂಗಳೂರು: ಉತ್ತರಖಂಡದ ಹಲ್ದವಾನಿ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಸಾರ್ವಜನಿಕ ಸಭೆಯ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಂತಿದ್ದ ಸ್ಥಳವನ್ನು ಶುದ್ಧೀಗೊಳಿಸಿದ ಕ್ರಮಕ್ಕೆ ವಿಧಾನ ಪರಿಷತ್ತಿನಲ್ಲಿ ಖಂಡನಾ ನಿರ್ಣಯ ಮಂಡಿಸಲಾಯಿತು.
ಸೋಮವಾರ ವಿಧಾನ ಪರಿಷತ್ತಿನಲ್ಲಿ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಚ್. ಜಕ್ಕಪ್ಪನವರ, ಈ ಖಂಡನಾ ನಿರ್ಣಯ ಮಂಡಿಸಿದರು. ಧ್ವನಿಮತದಿಂದ ನಿರ್ಣಯವನ್ನು ಸಭಾಪತಿ ಅಂಗೀಕರಿಸಿದರು. ಆ.8 ರಂದು ಕಾಂಗ್ರೆಸ್ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಹೋಮ ಹವನ ಮುಖಾಂತರ ಶುದ್ಧೀಕರಣಗೊಳಿಸಿ ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಿಸಿ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ.
ರಾಜ್ಯ ಸಭಾ ಅಧ್ಯಕ್ಷರು ಈ ಘಟನೆಯನ್ನು ಖಂಡಿಸಿ ತನಿಖೆಗೆ ಆದೇಶ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಈ ಕುರಿತು ಖಂಡನಾ ನಿರ್ಣಯ ಮಂಡಿಸಲು ಅವಕಾಶ ನೀಡಬೇಕೆಂದು ಕೋರಿದರು. ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷದವರ ಗದ್ದಲದ ನಡುವೆಯೇ ಸಭಾಪತಿ ಸಲೀಂ ಅಹ್ಮದ್, ಖಂಡನಾ ನಿರ್ಣಯವನ್ನು ಅಂಗೀಕರಿಸಿದರು.