ಗಿರಿನಗರದ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ್ಯ ನಮಸ್ಯಾ’ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ದೇವಿಗೆ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಪೂಜೆ ಸಲ್ಲಿಸಿದರು.  
ರಾಜ್ಯ

ವೇದಾಂತ ತಿಳಿಯಲು ಪುರಾಣಗಳೇ ಮಾಧ್ಯಮ; ರಾಘವೇಶ್ವರ ಶ್ರೀ ಅಭಿಮತ

ರಾಮಚಂದ್ರಾಪುರ ಮಠದಲ್ಲಿ ನವರಾತ್ರ್ಯ ನಮಸ್ಯಾ

ಬೆಂಗಳೂರು : ಪುರಾಣ ಎಂದರೆ ಜನಸಾಮನ್ಯರ ಭಾಷೆಯಲ್ಲಿ ಕಿರಿಕಿರಿ, ರಗಳೆ ಎನ್ನುವು ಹಗುರವಾದ ಮಾತುಗಳು ಇವೆ. ಆದರೆ ವೇದಾಂತವನ್ನು ಸರಳವಾಗಿ ಅರ್ಥೈಸಿಕೊಳ್ಳಲು ಪುರಾಣಗಳೇ ಮಾಧ್ಯಮ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ್ಯ ನಮಸ್ಯಾ’ ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಕುರಿತು ಪ್ರವಚನ ನೀಡಿದರು.

ಪುರಾಣಗಳು ಹಳತಾದರೂ ಅದು ಇಂದಿಗೂ ಹೊಸತಾದ ವಿಷಯಗಳನ್ನು ಹೊಂದಿವೆ. ಎಲ್ಲಾ ಕಾಲಕ್ಕೂ ಪ್ರಸ್ತುತವಾದ ವಿಚಾರಗಳನ್ನು ಹೊತ್ತಿರುವುದು ಪುರಾಣಗಳ ಹೆಚ್ಚುಗಾರಿಕೆ. ವೇದಾಂತದಲ್ಲಿನ ವಿಚಾರಗಳನ್ನು ಇನ್ನೊಂದು ರೀತಿಯಲ್ಲಿ ಪ್ರಸ್ತುತ ಪಡಿಸಿ, ಎಲ್ಲಾ ವರ್ಗದ ಜನರನ್ನೂ ಸುಲಭವಾಗಿ ತಲುಪುವ ಮಾಧ್ಯಮ ಪುರಾಣಗಳಾಗಿವೆ. ಯಾವುದೇ ಭೇದ ಭಾವಗಳಿಲ್ಲದೇ ಎಲ್ಲರೂ ಕೂಡ ಪುರಾಣಗಳನ್ನು ಅನುಸಂಧಾನ ಮಾಡಬಹುದಾಗಿದ್ದು, ಪುರಾಣಗಳ ಮೂಲಕ ಸುಲಭವಾಗಿ ತತ್ವ್ತಗಳನ್ನು ಅರಿತುಕೊಳ್ಳಬಹುದು. ದೊಡ್ಡ ಬ್ರಹ್ಮಾಂಡದಲ್ಲಿ ನಾವು ಚಿಕ್ಕ ಬಿಂದುವಾಗಿದ್ದು, ಸೃಷ್ಟಿಯಲ್ಲಿ ಏನಾಗುತ್ತದೆಯೋ ಅದರ ಪರಿಣಾಮ ನಮ್ಮ ಮೇಲೂ ಆಗುತ್ತದೆ. ನಾವು ಪ್ರಕೃತಿಗೆ ಪೂರಕವಾಗಿದ್ದಾಗ ನಿರ್ಮಲತೆ ನಮ್ಮ ಮೇಲೂ ಪರಿಣಾಮವನ್ನು ಉಂಟುಮಾಡುತ್ತದೆ. ನಿರ್ಮಲತೆಯೇ ಮುಕ್ತಿಗೆ ಮೆಟ್ಟಿಲಾಗಿದೆ ಎಂದು ಶ್ರೀಗಳು ವಿವರಿಸಿದರು.

ದುರ್ಗಾಮಂಟಪದಲ್ಲಿ ಮೃಣ್ಮಯ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ, ಶ್ರೀ ಭದ್ರಕಾಳಿ ಮಂತ್ರ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಉಡಿಸೇವೆ, ಭಜನಾ ಮಂಡಳಿಗಳಿಂದ ಭಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.

ಗಿರಿನಗರದ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ್ಯ ನಮಸ್ಯಾ’ ಕಾರ್ಯಕ್ರಮದಲ್ಲಿ ಮಹಿಳೆಯರು ರಾಜರಾಜೇಶ್ವರಿ ದೇವಿಗೆ ಕುಂಕುಮಾರ್ಚನೆ ಮಾಡಿದರು.

ಕಾರ್ಯಕ್ರಮದಲ್ಲಿ ನವರಾತ್ರ ನಮಸ್ಯಾದ ಪ್ರಧಾನ ಸಂಯೋಜಕ ರಮೇಶ ಹೆಗಡೆ ಕೋರಮಂಗಲ, ಸಂಯೋಜಕರಾದ ವಾದಿರಾಜ ಸಾಮಗ, ಶ್ರೀವತ್ಸ ಮುಡಗೋಡು, ದೀಪಕ ಹೆಗಡೆ ಗೋಳಿಕೈ, ಗಾಯತ್ರೀ ಭಾಗ್ವತ್, ಶಿವರಾಜ ಪೆರ್ಮುಖ, ಮಹಾಬಲಗಿರಿ ಕಲ್ಲುಕೊಪ್ಪ ಮತ್ತಿತರರು ಪಾಲ್ಗೊಂಡಿದ್ದರು.