Bengaluru Puncture Mafia (ಚಿತ್ರ X)
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಮ್ಮ ಪಂಚರ್ ಅಂಗಡಿಗಳ (Bengaluru Puncture Mafia) ವ್ಯಾಪಾರ ಹೆಚ್ಚಿಸಿಕೊಳ್ಳುವ ಸಲುವಾಗಿ ಸಾರ್ವಜನಿಕರ ವಾಹನಗಳಿಗೆ ಕನ್ನ ಹಾಕುತ್ತಿದ್ದ ದುಷ್ಕರ್ಮಿಗಳ ಜಾಲವೊಂದು ಕೊನೆಗೂ ಬಯಲಾಗಿದೆ. ಆದಾಗ್ಯೂ, ಕಚೇರಿ, ಆಸ್ಪತ್ರೆ ಹಾಗೂ ಮಾರುಕಟ್ಟೆಗೆ ತೆರಳುವ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ರಸ್ತೆ ಬದಿಯಲ್ಲಿ ಮೊಳೆ ಚೆಲ್ಲುತ್ತಿದ್ದ ಕಿಡಿಗೇಡಿಗಳ ಕೃತ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಯಲಾಯ್ತು ಕಿಡಿಗೇಡಿಗಳ ಖೆಡ್ಡಾ!
ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಇ.ಎಸ್ (MES) ರಿಂಗ್ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಯಲ್ಲಿ ದುರುದ್ದೇಶಪೂರ್ವಕವಾಗಿ ಅರ್ಧ ಹಾಗೂ ಒಂದು ಇಂಚಿನ ಕಬ್ಬಿಣದ ಮೊಳೆಗಳನ್ನು ಎಸೆಯಲಾಗುತ್ತಿತ್ತು.
ಇದರ ಪರಿಣಾಮವಾಗಿ, ಪ್ರತಿದಿನ 4 ರಿಂದ 5 ವಾಹನಗಳ ಟೈರ್‌ಗಳು ಪಂಚರ್ ಆಗಿ ರಸ್ತೆ ಮಧ್ಯದಲ್ಲೇ ನಿಲ್ಲುತ್ತಿದ್ದವು. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿ ಟ್ರಾಫಿಕ್ ಉಂಟಾಗುವುದಲ್ಲದೇ, ಅಪಘಾತಗಳ ಭೀತಿಯೂ ಎದುರಾಗಿತ್ತು. ವಾಹನ ಪಂಚರ್ ಆದ ತಕ್ಷಣ ಸವಾರರು ಹತ್ತಿರದ ಅಂಗಡಿಗೆ ಹೋದರೆ, ಈ ಕಿಡಿಗೇಡಿಗಳೇ ಮಾಮೂಲಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಅಯಸ್ಕಾಂತ ದಂಡ ಹಿಡಿದು ಮೊಳೆ ಆರಿಸಿದ ಪೊಲೀಸರು
ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬೆಂಗಳೂರು ಸಂಚಾರ ಪೊಲೀಸರು, ಮೆಟಲ್ ಆಬ್ಸರ್ವರ್ ಬಳಸಿ ರಸ್ತೆಯಲ್ಲಿದ್ದ ಕೆಜಿಗಟ್ಟಲೆ ಕಬ್ಬಿಣದ ಮೊಳೆಗಳನ್ನು ತೆರವುಗೊಳಿಸಿದ್ದಾರೆ.
ಸಿಸಿಟಿವಿ ಸಾಕ್ಷ್ಯ ಹಾಗೂ ದೂರು ದಾಖಲು
ಈ ವರ್ಷದ ಏಪ್ರಿಲ್ 17 ರಂದು ಚಂದ್ರಶೇಖರ್ ಎಂಬ ವಾಹನ ಸವಾರರೊಬ್ಬರು ಎಂ.ಇ.ಎಸ್ ರಸ್ತೆಯಲ್ಲಿ ಚಲಿಸುತ್ತಿರುವಾಗ ಅವರ ವಾಹನ ಪಂಚರ್ ಆಗಿತ್ತು. ಈ ವೇಳೆ ಪಂಚರ್ ಸರಿಪಡಿಸಲು ಹೆಚ್ಚಿನ ಹಣ ನೀಡಿದ್ದಾಗಿ ಜಾಲಹಳ್ಳಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಹಾಗೂ ಎಎನ್‌ಪಿಆರ್ (ANPR) ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕೆಂಪು ಬಣ್ಣದ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ರಸ್ತೆಗೆ ಮೊಳೆ ಎಸೆಯುತ್ತಿರುವುದು ಕಣ್ಣಿಗೆ ಬಿದ್ದಿದೆ.
ಬಿಟಿಪಿ ಆಪ್ ಮೂಲಕ ವರದಿ ಮಾಡಲು ಮನವಿ
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ. ಸಾರ್ವಜನಿಕರು ರಸ್ತೆಯಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಕಂಡರೆ ತಕ್ಷಣ 'BTP ASTraM' ಆ್ಯಪ್ ಮೂಲಕ ವರದಿ ಮಾಡಲು ಅಥವಾ ತುರ್ತು ನೆರವಿಗಾಗಿ 112 ಸಂಖ್ಯೆಗೆ ಕರೆ ಮಾಡಲು ವಿನಂತಿಸಿದೆ (ಏಜೆನ್ಸೀಸ್).