- ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
- ರಾಜ್ಯಾದ್ಯಂತ 62,40,114 ಮಕ್ಕಳಿಗೆ ಲಸಿಕೆ ಹಾಕಲಾಗುವ ಗುರಿ
- (ಜಿಬಿಎ) ವ್ಯಾಪ್ತಿಯಲ್ಲಿ 11,34,588 ಮಕ್ಕಳಿಗೆ ಲಸಿಕೆ
ಬೆಂಗಳೂರು: ರಾಜ್ಯಾದ್ಯಂತ ಭಾನುವಾರ (ಡಿ. 21) ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 10.45ಕ್ಕೆ ಸಿಎಂ ಸಿದ್ದರಾಮಯ್ಯ ಮಕ್ಕಳಿಗೆ ಸಾಂಕೇತಿಕವಾಗಿ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಲಸಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ 11,34,588 ಮಕ್ಕಳು ಸೇರಿ ರಾಜ್ಯಾದ್ಯಂತ 62,40,114 ಮಕ್ಕಳಿಗೆ ಲಸಿಕೆ ಹಾಕಲಾಗುವ ಗುರಿ ಹೊಂದಲಾಗಿದೆ. ಅದಕ್ಕಾಗಿ 33,258 ಬೂತ್‌ಗಳನ್ನು ರಚಿಸಿದ್ದು 1,030 ಸಂಚಾರಿ ತಂಡ, 2,096 ಟ್ರಾನ್ಸಿಸ್ಟ್ ತಂಡ, 1,13,115 ಲಸಿಕಾ ಕಾರ್ಯಕರ್ತರು, 7,322 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಬೂತ್‌ಗಳಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಡೆದ ಬಳಿಕ ಡಿ.22ರಿಂದ ಎರಡು ದಿನ ಮನೆಮನೆ ಭೇಟಿ ಕಾರ್ಯಕ್ರಮ ನಡೆಯಲಿದೆ. ವಲಸೆ, ಕೊಳೆಗೇರಿ ನಿವಾಸಿಗಳ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗಳು, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದ್ದು, ಪಾಲಕರು 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.