ಯಳಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ಪರಿಶಿಷ್ಟ ಜಾತಿ-ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಹಸೀಲ್ದಾರ್ ಎಸ್.ಎಲ್. ನಯನಾ ಮಾತನಾಡಿದರು.
ಯಳಂದೂರು: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಎಸ್.ಎಲ್.ನಯನಾ ನೇತೃತ್ವದಲ್ಲಿ ಕರೆದಿದ್ದ ಪರಿಶಿಷ್ಟ ಜಾತಿ-ವರ್ಗಗಳ ಹಿತರಕ್ಷಣಾ ಸಭೆಗೆ ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಸಭೆಯನ್ನು ಜು.8ಕ್ಕೆ ತಹಸೀಲ್ದಾರ್ ಮುಂದೂಡಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂಬ ನಿಯಮವಿದೆ. ಆದರೆ, ಕಳೆದ ಸಭೆಯನ್ನು 2024ರ ಡಿಸೆಂಬರ್‌ನಲ್ಲಿ ನಡೆಸಲಾಗಿದ್ದು, ಈಗ 3 ವರ್ಷದ ಸನಿಹ ಸಭೆಯನ್ನು ಕರೆಯಲಾಗಿದೆ. ಅಂದು ಕೇಳಿದ್ದ ಪ್ರಶ್ನೆಗಳಿಗೆ ಇಂದು ಉತ್ತರ ನೀಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಯಾವಾಗ. ಅಲ್ಲದೆ ಅಬಕಾರಿ, ನೀರಾವರಿ, ತಾಪಂ ಇಒ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಕೆಲವು ಗ್ರಾಪಂಗಳ ಪಿಡಿಒಗಳು ಸಹ ಸಭೆಗೆ ಬಂದಿಲ್ಲ. ಆದ್ದರಿಂದ ಈ ಸಭೆ ನಡೆಸುವುದು ಸೂಕ್ತವಲ್ಲ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದರು.
ಸಭೆಗೆ ಬರುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಆದರೆ, ಕೆಲವರು ಗೈರಾಗಿದ್ದಾರೆ. ಅಂತಹವರಿಗೆ ನೋಟೀಸ್ ಜಾರಿ ಮಾಡಲಾಗುವುದು. ಉಳಿದ ವಿಷಯಗಳಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿ ಎಂದು ತಹಸೀಲ್ದಾರ್ ಹಲವು ಬಾರಿ ಮನವಿ ಮಾಡಿದರು. ಅಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದರೂ ಮುಖಂಡರು ಒಪ್ಪದ ಕಾರಣ ಸಭೆಯನ್ನು ಮುಂದೂಡಲಾಯಿತು.
ಇದಕ್ಕೂ ಮುಂಚೆ ಸಭೆ ಆರಂಭಗೊಂಡು ಅರ್ಧಗಂಟೆ ಚರ್ಚೆ ನಡೆಯಿತು. ಆಗ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಮೂರು ತಾಲೂಕುಗಳಿಗೂ ಒಬ್ಬರೇ ಅಧಿಕಾರಿಯಾಗಿದ್ದಾರೆ. ಹೊನ್ನೂರು ಹಾಸ್ಟೆಲ್‌ನ ಸುತ್ತಮುತ್ತ ಕಲುಷಿತ ನೀರು ನಿಲ್ಲುತ್ತದೆ. ಈ ಸಂಬಂಧ ಕ್ರಮ ವಹಿಸಿ ಎಂದು ಹಿಂದಿನ ಸಭೆಯಲ್ಲಿ ಮನವಿ ಮಾಡಲಾಗಿತ್ತು. ಆದರೆ, ಇದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂಬ ಉತ್ತರ ನೀಡಿದ್ದಾರೆ. ಇದು ಸಮಂಜಸ ಉತ್ತರವಲ್ಲ. ಪರಿಶಿಷ್ಟ ಜಾತಿ, ವರ್ಗಗಳ ಮಕ್ಕಳು ಓದುವ ಈ ಹಾಸ್ಟೆಲ್‌ನ ಮಕ್ಕಳ ಆರೋಗ್ಯದ ಮೇಲೆ ಇವರು ಚೆಲ್ಲಾಟವಾಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ವಹಿಸಿ ಎಂದು ಕೆಲವರು ಆಗ್ರಹಿಸಿದ ಘಟನೆಯೂ ನಡೆಯಿತು.
ಜಾತಿ ಆದಾಯ ಪ್ರಮಾಣ ಪತ್ರ ನೀಡಲು ಶಾಲಾ ದಾಖಲಾತಿಯನ್ನೇ ಕೇಳಲಾಗುತ್ತದೆ. ಆದರೆ ಟಿಸಿಯನ್ನು ಪರಿಗಣಿಸಬೇಕು. ಅಲ್ಲದೆ ಇದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಏಕ ಕಾಲಕ್ಕೆ ನೀಡಬೇಕು ಎಂದು ಕೆಲವರು ಆಗ್ರಹಿಸಿದರು.
ತಹಸೀಲ್ದಾರ್ ಎಸ್.ಎಲ್.ನಯನಾ, ಡಿವೈಎಸ್‌ಪಿ ಮೋಹನ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಹಿತರಕ್ಷಣಾ ಸಮಿತಿ ಸದಸ್ಯ ಅಗರ ನಾಗರಾಜು, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಬಿಇಒ ಮಾರಯ್ಯ ಇತರರು ಇದ್ದರು.